36
ಸನ್ಹೇರೀಬನು ಯೆರೂಸಲೇಮನ್ನು ಮುತ್ತಿದ್ದು
ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದೊಳಗೆ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. ಆಗ ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತನಾದ ರಬ್ಷಾಕೆ* 36:2 ರಬ್ಷಾಕೆ ಅವನ ಸೈನ್ಯಾಧಿಕಾರಿ. ಎಂಬುವವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವನು ಅಗಸರ ಹೊಲದ ಕಡೆಯಿಂದ ಹೋಗುವ ರಾಜಮಾರ್ಗದ ಹತ್ತಿರ ಅಲ್ಲಿನ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯಮಾಡಿಕೊಂಡನು. ಆ ಮೇಲೆ ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಬಂದರು.
ರಬ್ಷಾಕೆಯು ಅವರಿಗೆ, “ನೀವು ಹೋಗಿ, ಮಹಾರಾಜನಾದ ಅಶ್ಶೂರದ ಅರಸನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿಸಿರಿ, ‘ಈ ನಿನ್ನ ಭರವಸೆಗೆ ಯಾವ ಆಧಾರವುಂಟು? ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟು ಎಂಬ ನಿನ್ನ ಮಾತು ಬರೀ ಬಾಯಿ ಮಾತೇ ಎಂದು ನಾನು ಹೇಳಬಲ್ಲೆ, ನೀನು ಯಾರನ್ನು ನಂಬಿಕೊಂಡು ನನ್ನ ವಿರುದ್ಧವಾಗಿ ತಿರುಗಿಬಿದ್ದಿದ್ದೀ?’
“ ‘ಜಜ್ಜಿದ ದಂಟಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ಕೋಲನ್ನು ಆಧಾರ ಮಾಡಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಕ್ಕೆ ಹೋಗುತ್ತದೆ! ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವುದು. ಒಂದು ವೇಳೆ ನೀನು, ನಮ್ಮ ದೇವರಾದ ಯೆಹೋವನನ್ನು ನಂಬಿಕೊಂಡಿದ್ದೇವೆ’ ಎಂದು ಹೇಳಬಹುದು. ಹಿಜ್ಕೀಯನು, ‘ನೀವು ಯೆರೂಸಲೇಮಿನಲ್ಲಿರುವ ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕು’ ಎಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ಆ ಯೆಹೋವನ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!
“ಆದುದರಿಂದ ಈಗ ನನ್ನ ಒಡೆಯನಾದ ಅಶ್ಶೂರದ ಅರಸನಿಗೆ ಸವಾಲು ಹಾಕುವುದಕ್ಕೆ ನಿನಗೆ ಮನಸ್ಸುಂಟೋ? ಹಾಗಾದರೆ ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ. ನೀನು ಅಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ?
“ಇದೂ ನಿನಗೆ ಅಸಾಧ್ಯವಾಗುವುದಾದರೆ ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವುದು ನಿನ್ನಿಂದ ಹೇಗೆ ಸಾಧ್ಯವಾಗುತ್ತದೆ? ರಥಾಶ್ವಬಲಗಳಿಗಾಗಿ ನೀನು ಐಗುಪ್ತ್ಯರನ್ನು ನಂಬಿಕೊಂಡಿರುವಂತೆ ಕಾಣುತ್ತದೆ. 10 ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳು ಮಾಡಿಬಿಡು’ ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಎನ್ನುವ ಅರಸನ ಮಾತುಗಳನ್ನು ತಿಳಿಸಿರಿ” ಎಂದು ಹೇಳಿದನು.
11 ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು; ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ 36:11 ಯೂದಾಯ ಭಾಷೆಯಲ್ಲಿ ಇಬ್ರಿಯ ಭಾಷೆಯಲ್ಲಿ. ಮಾತನಾಡಬೇಡ” ಎಂದು ಹೇಳಿದರು. 12 ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಒಡೆಯನ ಸಂಗಡವಾಗಲಿ ಈ ಮಾತುಗಳನ್ನು ಹೇಳುವುದಕ್ಕೆ ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನನ್ನ ವಿರುದ್ಧವಾಗಿ ನಿಂತರೆ ನಿಮ್ಮೊಡನೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವುದು” ಎಂದು ಉತ್ತರಕೊಟ್ಟನು.
13 ಆಮೇಲೆ ರಬ್ಷಾಕೆಯು ಎದ್ದು ಗೋಡೆಯ ಮೇಲೆ ನಿಂತವರಿಗೆ ಯೂದಾಯ ಭಾಷೆಯಲ್ಲಿ, 36:13 ಯೂದಾಯ ಭಾಷೆಯಲ್ಲಿ, ಇಬ್ರಿಯ ಭಾಷೆಯಲ್ಲಿ. “ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ. 14 ಅರಸನು ನಿಮಗೆ, ‘ಹಿಜ್ಕೀಯನಿಂದ ಮೋಸ ಹೋಗಬೇಡಿರಿ. ಅವನು ನಿಮ್ಮನ್ನು ಬಿಡಿಸಲಾರನು.’ 15 ಹಿಜ್ಕೀಯನು ನಿಮಗೆ, ‘ಯೆಹೋವನನ್ನು ನಂಬಿರಿ; ಆತನು ನಮ್ಮನ್ನು ಹೇಗೋ ರಕ್ಷಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’ ” ಎಂಬುದಾಗಿ ಹೇಳಿದರೆ, 16 ಹಿಜ್ಕೀಯನ ಮಾತಿಗೆ ಕಿವಿಗೊಡಬೇಡಿರಿ, ಏಕೆಂದರೆ ಅಶ್ಶೂರದ ಅರಸನು ಹೇಳುವುದೇನೆಂದರೆ, “ನನ್ನ ಮಾತನ್ನು ಕೇಳಿರಿ; ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಆಶ್ರಯದಲ್ಲಿ ಸೇರಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ಬಾವಿಯ ನೀರನ್ನು ಕುಡಿಯುವನು. 17 ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.”
18 “ಯೆಹೋವನು ನಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ಹಿಜ್ಕೀಯನು ನಿಮ್ಮಲ್ಲಿ ಹುಟ್ಟಿಸಾನು ನೋಡಿಕೊಳ್ಳಿರಿ. ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ಕಾಪಾಡಿತು? 19 ಹಮಾತ್, ಅರ್ಪಾದ್, ಸೆಫರ್ವಯಿಮ್ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಯಿಂದ ತಪ್ಪಿಸಿದವೋ? 20 ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ತಪ್ಪಿಸಿ ಕಾಪಾಡುವನೋ? ಎನ್ನುತ್ತಾನೆ” ಎಂದು ಹೇಳಿದನು.
21 ಆ ಸೇನಾಧಿಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು, ಏನು ಹೇಳಲಿಲ್ಲ. 22 ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.

*36:2 36:2 ರಬ್ಷಾಕೆ ಅವನ ಸೈನ್ಯಾಧಿಕಾರಿ.

36:11 36:11 ಯೂದಾಯ ಭಾಷೆಯಲ್ಲಿ ಇಬ್ರಿಯ ಭಾಷೆಯಲ್ಲಿ.

36:13 36:13 ಯೂದಾಯ ಭಾಷೆಯಲ್ಲಿ, ಇಬ್ರಿಯ ಭಾಷೆಯಲ್ಲಿ.