59
ರಕ್ಷಣೆಗೆ ಪಾಪವೇ ಅಡ್ಡಿ
1 ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತಹ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ.
2 ಆದರೆ ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನ್ನು ಅಗಲಿಸುತ್ತಾ ಬಂದಿವೆ;
ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ.
3 ನಿಮ್ಮ ಕೈಗಳು ರಕ್ತದಿಂದ ಹೊಲಸಾಗಿವೆ, ನಿಮ್ಮ ಬೆರಳುಗಳು ಅಪರಾಧದಿಂದ ಅಶುದ್ಧವಾಗಿವೆ;
ನಿಮ್ಮ ತುಟಿಗಳು ಸುಳ್ಳಾಡುತ್ತವೆ, ನಿಮ್ಮ ನಾಲಿಗೆಯು ಕೆಡುಕನ್ನು ನುಡಿಯುತ್ತದೆ.
4 ಇವರಲ್ಲಿ ಯಾರೂ ನ್ಯಾಯಸ್ಥಾನಕ್ಕೆ ನ್ಯಾಯವಾಗಿ ಹೋಗುವುದಿಲ್ಲ, ಯಾರೂ ಸತ್ಯವಾಗಿ ವಾದಿಸುವುದಿಲ್ಲ;
ಇವರು ಶೂನ್ಯವಾಗಿರುವುದನ್ನು ನಂಬಿಕೊಂಡು ಸುಳ್ಳನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.
5 ಹಾವಿನಂತೆ ಕೇಡಿನ ಮೊಟ್ಟೆಗಳನ್ನು ಮರಿಮಾಡುತ್ತಾರೆ, ಜೇಡರ ಹುಳದಂತೆ ಬಲೆಯನ್ನು ನೇಯುತ್ತಾರೆ;
ಆ ಮೊಟ್ಟೆಗಳನ್ನು ತಿನ್ನುವವನಿಗೆ ಮರಣ ಉಂಟಾಗುವುದು, ಅದನ್ನು ಒಡೆದುಬಿಡುವುದರಿಂದ ವಿಷದ ಮರಿ ಹೊರಡುವುದು.
6 ಇವರ ಬಲೆಯ ದಾರವು ಬಟ್ಟೆಯಾಗದು, ಇವರು ನೇಯ್ದದ್ದು ಹೊದಿಕೆಯಾಗದು;
ಇವರ ಕಾರ್ಯಗಳು ಅಧರ್ಮಕಾರ್ಯಗಳು, ಇವರ ಕೈಯಲ್ಲಿ ಬಲಾತ್ಕಾರವೇ ತುಂಬಿದೆ.
7 ಇವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುತ್ತವೆ, ಇವರು ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ,
ಇವರ ಯೋಚನೆಗಳು ಅಧರ್ಮದ ಯೋಚನೆಗಳೇ, ಇವರು ಹೋದ ದಾರಿಗಳಲ್ಲಿ ನಷ್ಟವೂ, ನಾಶನವೂ ಉಂಟಾಗುತ್ತವೆ;
8 ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ,
ತಮ್ಮ ಮಾರ್ಗಗಳನ್ನು ಡೊಂಕು ಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವವರು ಸಮಾಧಾನವನ್ನು ಅರಿಯರು.
9 ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ;
ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.
10 ಕುರುಡರಂತೆ ಗೋಡೆಯನ್ನು ತಡವರಿಸಿ ನಡೆಯುತ್ತೇವೆ, ಹೌದು, ಕಣ್ಣಿಲ್ಲದವರ ಹಾಗೆ ತಡಕಾಡುತ್ತೇವೆ,
ಮಧ್ಯಾಹ್ನದಲ್ಲಿ ಸಂಜೆಯಂತೆ ಎಡವುತ್ತೇವೆ, ಪುಷ್ಟರ*ಪುಷ್ಟರ ಅಥವಾ ನಿರ್ಜನ್ಯ ಸ್ಥಳ. ನಡುವೆ ಸತ್ತವರ ಹಾಗಿದ್ದೇವೆ.
11 ನಾವೆಲ್ಲರೂ ಕರಡಿಗಳಂತೆ ಗುರುಗುಟ್ಟುತ್ತೇವೆ, ಪಾರಿವಾಳಗಳಂತೆ ಮುಲುಗುತ್ತಲೇ ಇದ್ದೇವೆ;
ನಾವು ಯೆಹೋವನ ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಕ್ಕದು,
ಆತನ ರಕ್ಷಣಕಾರ್ಯವನ್ನು ನಿರೀಕ್ಷಿಸಿದರೂ ಅದು ನಮಗೆ ದೂರವಾಗಿರುವುದು.
12 ಏಕೆಂದರೆ ನಮ್ಮ ತಪ್ಪುಗಳು ನಿನ್ನ ದೃಷ್ಟಿಗೆ ಹೆಚ್ಚಾಗಿ ಬಿದ್ದಿವೆ, ನಮ್ಮ ಪಾಪಗಳು ನಮ್ಮ ವಿರುದ್ಧವಾಗಿ ಸಾಕ್ಷಿಕೊಡುತ್ತವೆ;
ನಮ್ಮ ತಪ್ಪುಗಳು ನಮ್ಮ ಸಂಗಡಲೇ ಇವೆ, ನಮ್ಮ ಅಪರಾಧಗಳನ್ನು ನಾವೇ ಬಲ್ಲೆವು.
13 ಹೌದು, ಯೆಹೋವನಿಗೆ ತಪ್ಪಿ ನಡೆದು ಆತನನ್ನು ಅಲ್ಲಗಳೆದಿದ್ದೇವೆ, ನಮ್ಮ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟು ಅವನಿಂದ ದೂರವಾಗಿದ್ದೇವೆ.
ಅನ್ಯಾಯವನ್ನೂ ದ್ರೋಹವನ್ನೂ ನುಡಿದಿದ್ದೇವೆ, ಹೃದಯಪೂರ್ವಕವಾಗಿ ಸುಳ್ಳುಮಾತುಗಳನ್ನು ಕಲ್ಪಿಸಿ ಆಡಿದ್ದೇವೆ.
14 ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ, ಧರ್ಮವು ದೂರದಲ್ಲಿ ನಿಂತಿದೆ,
ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ, ಯಥಾರ್ಥತ್ವವು ಪ್ರವೇಶಿಸಲಾರದು.
15 ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಸೂರೆಯಾಗುತ್ತಾನೆ.
ತನ್ನ ಜನರನ್ನು ರಕ್ಷಿಸಲು ಯೆಹೋವನು ಕ್ರಮ ಕೈಗೊಂಡದ್ದು
16 ಯೆಹೋವನು ಇವುಗಳನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು; ಉದ್ಧಾರಕನಾದ ಯಾವ ಪುರುಷನೂ ಇಲ್ಲವೆಂದು ಕಂಡು ಸ್ತಬ್ಧನಾದನು;
ಆಗ ಆತನ ಸ್ವಹಸ್ತವೇ ಆತನಿಗೆ ರಕ್ಷಣಾ ಸಾಧನವಾಯಿತು, ಆತನ ಧರ್ಮವೇ ಆತನಿಗೆ ಆಧಾರವಾಯಿತು.
17 ಅವನು ನೀತಿಯನ್ನು ವಜ್ರಕವಚವನ್ನಾಗಿ ಹಾಕಿಕೊಂಡು, ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡನು;
ರೋಷವೆಂಬ ವಸ್ತ್ರವನ್ನು ಉಡುಪುಮಾಡಿಕೊಂಡು, ಸೇಡನ್ನು ನಿಲುವಂಗಿಯನ್ನಾಗಿ ಹಾಕಿಕೊಂಡನು.
18 ತನ್ನ ವಿರೋಧಿಗಳಲ್ಲಿಟ್ಟ ಕ್ರೋಧವನ್ನು ಈಡೇರಿಸಿ, ತನ್ನ ಶತ್ರುಗಳಿಗೆ ದಂಡನೆಯನ್ನು ವಿಧಿಸಿ,
ಅವರವರ ಕೃತ್ಯಗಳಿಗೆ ತಕ್ಕಂತೆ ಮುಯ್ಯಿತೀರಿಸುವನು; ಕರಾವಳಿಯಲ್ಲಿರುವವರಿಗೂ ತಕ್ಕ ಪ್ರತಿಫಲವನ್ನು ನೀಡುವನು.
19 ಹೀಗಿರಲು ಪಶ್ಚಿಮದವರು ಯೆಹೋವನ ನಾಮಕ್ಕೆ ಹೆದರುವರು, ಪೂರ್ವ ದಿಕ್ಕಿನವರು ಆತನ ಮಹಿಮೆಗೆ ಅಂಜುವರು;
†ಯೆಹೋವನ ಆತ್ಮವು ಅವನಿಗೆ ವಿರುದ್ಧವಾಗಿ ಧ್ವಜವನ್ನು ಎತ್ತುವನು.ಬಿರುಗಾಳಿಯಿಂದ ಹೊಡೆಯಲ್ಪಟ್ಟು ಇಕ್ಕಟ್ಟಿನಲ್ಲಿ ಹರಿಯುವ ತೊರೆಯ ಹಾಗೆ ಆತನು ರಭಸದಿಂದ ಬರುವನಷ್ಟೆ.
20 “ಒಬ್ಬ ವಿಮೋಚಕನು ಚೀಯೋನಿಗೂ, ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ಬರುವನು”, ಯೆಹೋವನೇ ಇದನ್ನು ನುಡಿದಿದ್ದಾನೆ.
21 ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ;
“ನಿಮ್ಮಲ್ಲಿ ಪ್ರವೇಶಿಸಿರುವ ನನ್ನ ಆತ್ಮವೂ, ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ,
ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ ಅಥವಾ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವುದಿಲ್ಲ” ಎಂದು ಯೆಹೋವನು ಹೇಳುತ್ತಾನೆ.