33
ಎಲೀಹು ಯೋಬನಿಗೆ ಸವಾಲೆಸೆದಿದ್ದು
ಅದಿರಲಿ, ಯೋಬನೇ, ನನ್ನ ಮಾತನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು.
ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನ
ನಾಲಿಗೆಯು ಬಾಯಿಯೊಳಗಿಂದ ಮಾತನಾಡುತ್ತಿದೆ.
ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು,
ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು.
ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ,
ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.
ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು,
ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ.
ನೋಡು, ನಾನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ.
ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ.
ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು,
ನನ್ನ ಒತ್ತಾಯವು ನಿನಗೆ ಹೊರೆಯಾಗಿರದು.
ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ,
ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡಿದ್ದಿ,
‘ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನು ಪಾಪವಿಲ್ಲ.
10 ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು,
ನನ್ನನ್ನು ಶತ್ರುವೆಂದು ಎಣಿಸಿಕೊಂಡಿದ್ದಾನೆ.
11 ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ,
ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ’ ಎಂದು ಹೇಳಿದೆಯಲ್ಲಾ.
12 ಇಗೋ, ನೀನು ಹೀಗೆ ಹೇಳಿದ್ದು ನ್ಯಾಯವಲ್ಲವೆಂಬುದೇ ನನ್ನ ಉತ್ತರ,
ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ.
13 *ಅಥವಾ ಆತನು ತನ್ನ ಕಾರ್ಯಗಳ ಬಗ್ಗೆ ಉತ್ತರ ದಯಪಾಲಿಸುವುದಿಲ್ಲ.ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬುದಾಗಿ,
ನೀನು ಆತನೊಂದಿಗೆ ವ್ಯಾಜ್ಯವಾಡುವುದೇಕೆ?
14 ದೇವರು ಮಾತನಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು,
ಮನುಷ್ಯನಾದರೋ ಲಕ್ಷಿಸುವುದಿಲ್ಲ.
15 ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ,
ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ,
16 ಅವರ ಕಿವಿಗಳನ್ನು ತೆರೆದು, ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆ ಹಾಕುವನು.
17 ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು,
ಮಾನವನಿಗೆ ಗರ್ವವನ್ನು ಮರೆಮಾಡುವನು.
18 ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು,
ಅವನ ಜೀವವನ್ನು ದೈವಾಸ್ತ್ರದಿಂದ ಅಳಿದು ಹೋಗದ ಹಾಗೆ ನಿಲ್ಲಿಸುವನು.
19 ಇದಲ್ಲದೆ ಸಂಕಟದಿಂದಲೂ, ನಿತ್ಯವಾದ ಎಲುಬುಗಳ ನೋವಿನಿಂದಲೂ,
ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು.
20 ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವುದು,
ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವುದು.
21 ಅವನ ಮಾಂಸವು ಕ್ಷಯಿಸಿ ಕಾಣದೆ ಹೋಗುವುದು,
ಕಾಣದಿದ್ದ ಅವನ ಎಲುಬುಗಳು ಬಯಲಾಗುವವು.
22 ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವುದು,
ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವುದು.
23 ಮನುಷ್ಯನ ಕರ್ತವ್ಯವನ್ನು ತೋರಿಸತಕ್ಕ ಸಹಸ್ರ ದೇವದೂತರಲ್ಲಿ ಒಬ್ಬನು
ಅವನಿಗೆ ಮಧ್ಯಸ್ಥನಾಗಿ ಬೇಡುವುದರಿಂದ,
24 ದೇವರು ಒಂದು ವೇಳೆ ಆ ಮನುಷ್ಯನನ್ನು ಮೆಚ್ಚಿ ಈಡು ದೊರಕುವಂತೆ ಮಾಡಿ,
‘ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು’ ಎಂದು ಅಪ್ಪಣೆಕೊಟ್ಟರೆ,
25 ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವುದು.
ಅವನು ಪುನಃ ಎಳೆತನದ ಚೈತನ್ಯವನ್ನು ಅನುಭವಿಸುವನು.
26 ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ,
ಆತನ ದರ್ಶನ ಮಾಡಿ ಉತ್ಸಾಹದಿಂದ ಧ್ವನಿಗೈದು,
ತಿರುಗಿ ಆತನಿಂದ ನೀತಿವಂತನೆಂದು ಎನ್ನಿಸಿಕೊಳ್ಳುವನು.
27 ಅವನು ಮನುಷ್ಯರ ಮುಂದೆ ನಿಂತು, ‘ನಾನು ಪಾಪ ಮಾಡಿ ನ್ಯಾಯವನ್ನು ಕೆಡಿಸಿದ್ದರೂ,
ಆತನು ಮುಯ್ಯಿತೀರಿಸಲಿಲ್ಲ.
28 ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ,
ನನ್ನ ಜೀವವು ಬೆಳಕನ್ನು ಕಾಣುತ್ತಿರುವುದು’ ಎಂದು ಕೀರ್ತನೆ ಹಾಡುವನು.
29 ದೇವರು ಎರಡು ಸಾರಿ, ಹೌದು ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು.
30 ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ,
ಜೀವಲೋಕದ ಬೆಳಕನ್ನು ಅನುಭವಿಸುವಂತೆ ಮಾಡುವನು
31 ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು,
ನಾನೇ ಮಾತನಾಡುವೆನು.
32 ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು,
ಮಾತನಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.
33 ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು,
ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”

*33:13 ಅಥವಾ ಆತನು ತನ್ನ ಕಾರ್ಯಗಳ ಬಗ್ಗೆ ಉತ್ತರ ದಯಪಾಲಿಸುವುದಿಲ್ಲ.