3
ಯೊರ್ದನ್ ನದಿಯನ್ನು ದಾಟಿದ್ದು
1 ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು; ಅವನೊಂದಿಗೆ ಇಸ್ರಾಯೇಲ್ಯರೆಲ್ಲರೂ ಶಿಟ್ಟೀಮನ್ನು ಬಿಟ್ಟು ಯೊರ್ದನಿಗೆ ಬಂದು ಅದನ್ನು ದಾಟುವ ಮೊದಲು ಅಲ್ಲೇ ಇಳಿದುಕೊಂಡರು. 2 ಮೂರು ದಿನಗಳಾದ ಮೇಲೆ ಜನಾಧಿಪತಿಗಳು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ 3 “ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತಿರುವುದನ್ನು ಕಂಡ ಕೂಡಲೆ ನೀವು ನಿಮ್ಮ ಸ್ಥಳಗಳನ್ನು ಬಿಟ್ಟು ಅದನ್ನು ಹಿಂಬಾಲಿಸಿರಿ. 4 ಆದರೆ ನಿಮಗೂ ಮಂಜೂಷಕ್ಕೂ ಸುಮಾರು *ಸುಮಾರು ಒಂದು ಕಿಲೋ ಮೀಟರ್.ಎರಡು ಸಾವಿರ ಮೊಳ ಅಂತರವಿರಬೇಕು; ಹತ್ತಿರ ಹೋಗಬಾರದು. ಹೀಗೆ ನೀವು ಹೋಗಬೇಕಾದ ಮಾರ್ಗವು ನಿಮಗೆ ಗೊತ್ತಾಗುವುದು; ಏಕೆಂದರೆ ನೀವು ಆ ಮಾರ್ಗವಾಗಿ ಇಲ್ಲಿಯವರೆಗೆ ಪ್ರಯಾಣ ಮಾಡಿರುವುದಿಲ್ಲ” ಅಂದರು. 5 ಇದಲ್ಲದೆ ಯೆಹೋಶುವನು ಜನರಿಗೆ “ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು” ಎಂದು ಹೇಳಿದನು. 6 ನಂತರ ಯೆಹೋಶುವನು ಯಾಜಕರಿಗೆ “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ನಡೆದು ಹೊಳೆ ದಾಟಿರಿ” ಎಂದು ಆಜ್ಞಾಪಿಸಲು ಅವರು ಆ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ಹೋದರು.
7 ಆಗ ಯೆಹೋವನು ಯೆಹೋಶುವನಿಗೆ “ನಾನು ಈ ದಿನ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂದು ಅವರಿಗೆ ಗೊತ್ತಾಗುವುದು. 8 ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು” ಎಂದು ಹೇಳಿದನು. 9 ಆಗ ಯೆಹೋಶುವನು ಇಸ್ರಾಯೇಲ್ಯರಿಗೆ “ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ” ಎಂದು ಹೇಳಿ, 10 “ಜೀವಸ್ವರೂಪನಾದ ದೇವರು ನಿಮ್ಮ ಮಧ್ಯದಲ್ಲಿ ಇದ್ದಾನೆಂದು ಆತನು ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು, ಯೆಬೂಸಿಯರನ್ನು ನಿಮ್ಮ ಮುಂದೆ ಓಡಿಸಿಬಿಡುವನೆಂದು ನಿಮಗೆ ಗೊತ್ತಾಗುವುದು. 11 ಹೇಗೆಂದರೆ ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಯೊರ್ದನಿನಲ್ಲಿ ಇಳಿಯವುದು. 12 ಆಗ ನೀನು ಇಸ್ರಾಯೇಲರ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಬೇಕು. 13 ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ ಮೇಲಿನಿಂದ ಹರಿದು ಬರುವ ನೀರು ಮುಂದೆ ಸಾಗದೆ, ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು” ಎಂದು ತಿಳಿಸಿದನು.
14 ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. 15 ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು. 16 ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. 17 ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.