ಯಾಜಕಕಾಂಡ
ಗ್ರಂಥಕರ್ತೃತ್ವ
ಗ್ರಂಥಕರ್ತೃತ್ವದ ವಿಷಯವು ಪುಸ್ತಕದ ಮುಕ್ತಾಯದ ವಾಕ್ಯದಿಂದ ಪರಿಹರಿಸಲ್ಪಡುತ್ತದೆ, “ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳು ಇವೇ.” (27:34; 7:38; 25:1; 26:46). ಈ ಪುಸ್ತಕವು ಧರ್ಮಶಾಸ್ತ್ರಕ್ಕೆ ಸಂಬಂಧಿಸಿದಂತಹ ಹಲವಾರು ಐತಿಹಾಸಿಕ ಕಥನಗಳನ್ನು ವರ್ಣಿಸುತ್ತದೆ (8:10; 24:10-23). ಯಾಜಕಕಾಂಡ (ಲೆವಿಟಿಕಸ್) ಎಂಬ ಪದವು ಲೇವಿ ಕುಲದಿಂದ ಹುಟ್ಟಿಬಂದಿರುತ್ತದೆ, ಅವರ ಸದಸ್ಯರೆಲ್ಲರೂ ಆತನ ಯಾಜಕರಾಗಿರಲು ಮತ್ತು ಆರಾಧನೆಯ ನಾಯಕರಾಗಿರಲು ಕರ್ತನಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಈ ಪುಸ್ತಕವು ಲೇವಿಯರ ಸಮಸ್ಯೆಗಳನ್ನು, ಜವಾಬ್ದಾರಿಗಳನ್ನು ತಿಳಿಸುತ್ತದೆ, ಹೆಚ್ಚು ಗಮನಾರ್ಹವಾಗಿ, ಎಲ್ಲಾ ಯಾಜಕರು ಆರಾಧನೆಯಲ್ಲಿ ಜನರಿಗೆ ಹೇಗೆ ಸಹಾಯ ಮಾಡಬೇಕೆಂಬುದರ ಕುರಿತು ಆಜ್ಞೆಯನ್ನು ನೀಡಲಾಗಿದೆ ಮತ್ತು ಜನರು ಪರಿಶುದ್ಧವಾದ ಜೀವನವನ್ನು ಹೇಗೆ ಜೀವಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 1,446 - 1,405 ರ ನಡುವಿನ ಸಮಯದಲ್ಲಿ ಬರೆದಿರಬಹುದು.
ಯಾಜಕಕಾಂಡದಲ್ಲಿ ಕಂಡುಬಂದಿರುವ ನಿಯಮದ ಬಗ್ಗೆ ದೇವರು ಮೋಶೆಯೊಂದಿಗೆ ಇಸ್ರಾಯೇಲರು ಸ್ವಲ್ಪ ಕಾಲ ಪಾಳೆಯ ಹಾಕಿಕೊಂಡಿದ್ದ ಸೀನಾಯಿ ಬೆಟ್ಟದಲ್ಲಿ ಅಥವಾ ಅದರ ಹತ್ತಿರದಲ್ಲಿ ಮಾತನಾಡಿರಬಹುದು.
ಸ್ವೀಕೃತದಾರರು
ಈ ಪುಸ್ತಕವನ್ನು ಯಾಜಕರಿಗೂ, ಲೇವಿಯರಿಗೂ ಮತ್ತು ಮುಂಬರುವ ಇಸ್ರಾಯೇಲ್ ಜನರ ಸಂತತಿಗಳವರಿಗೂ ಬರೆಯಲಾಯಿತು.
ಉದ್ದೇಶ
ಯಾಜಕಕಾಂಡ ಪುಸ್ತಕವು ದೇವರು ಮೋಶೆಯನ್ನು ಕರೆದು ದೇವದರ್ಶನ ಗುಡಾರದೊಳಗಿಂದ ಅವನೊಂದಿಗೆ ಮಾತನಾಡುವುದರ ಮೂಲಕ ಪ್ರಾರಂಭವಾಗುತ್ತದೆ. ಯಾಜಕಕಾಂಡ ಪುಸ್ತಕವು ಬಿಡುಗಡೆಯಾಗಿರುವ ಜನರು ಈಗ ತಮ್ಮ ಮಧ್ಯದಲ್ಲಿ ನೆಲೆಗೊಂಡಿರುವಂತಹ ಮಹಿಮೆಯುಳ್ಳ ದೇವರೊಂದಿಗೆ ಸರಿಯಾದ ಅನ್ಯೋನ್ಯತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ವಿವರಿಸುತ್ತದೆ. ಈ ಜನಾಂಗವು ಐಗುಪ್ತವನ್ನು ಮತ್ತು ಅದರ ಸಂಸ್ಕೃತಿ ಮತ್ತು ಧರ್ಮವನ್ನು ಈಗತಾನೇ ಬಿಟ್ಟು ಹೊರಟುಬಂದಿದೆ ಮತ್ತು ಬೇರೆ ಸಂಸ್ಕೃತಿಗಳು ಮತ್ತು ಧರ್ಮಗಳು ಈ ಜನಾಂಗದ ಮೇಲೆ ಪ್ರಭಾವ ಬೀರುವಂತಹ ಕಾನಾನ್ ದೇಶವನ್ನು ಪ್ರವೇಶಿಸಲಿದೆ. ಈ ಸಂಸ್ಕೃತಿಗಳಿಂದ ಪ್ರತ್ಯೇಕವಾಗಿ (ಪವಿತ್ರವಾಗಿ) ಉಳಿದುಕೊಂಡಿರಲು ಮತ್ತು ಯೆಹೋವನಿಗೆ ನಂಬಿಗಸ್ತರಾಗಿರಲು ಯಾಜಕಕಾಂಡವು ಜನರಿಗೆ ಷರತ್ತುಗಳನ್ನು ಒದಗಿಸುತ್ತದೆ.
ಮುಖ್ಯಾಂಶ
ಆಜ್ಞೆ
ಪರಿವಿಡಿ
1. ಕಾಣಿಕೆಗಳ ಕುರಿತ ಆಜ್ಞೆಗಳು — 1:1-7:38
2. ದೇವರ ಯಾಜಕರ ಕುರಿತ ಆಜ್ಞೆಗಳು — 8:1-10:20
3. ದೇವರ ಜನರ ಕುರಿತ ಆಜ್ಞೆಗಳು — 11:1-15:33
4. ಯಜ್ಞವೇದಿಯ ಮತ್ತು ದೋಷಪರಿಹಾರಕ ದಿನದ ಕುರಿತ ಆಜ್ಞೆಗಳು — 16:1-34
5. ಪ್ರಾಯೋಗಿಕವಾದ ಪರಿಶುದ್ಧತೆ — 17:1-22:33
6. ಸಬ್ಬತ್ ದಿನಗಳು, ಜಾತ್ರೆಗಳು ಮತ್ತು ಹಬ್ಬಗಳು — 23:1-25:55
7. ದೇವರ ಆಶೀರ್ವಾದವನ್ನು ಪಡೆಯಲಿಕ್ಕಿರುವ ಷರತ್ತುಗಳು — 26:1-27:34
1
ಸರ್ವಾಂಗಹೋಮ ವಿಧಾನ
ಯೆಹೋವನು ಮೋಶೆಯನ್ನು ಕರೆದು ದೇವದರ್ಶನದ ಗುಡಾರದೊಳಗಿಂದ ಅವನ ಸಂಗಡ ಮಾತನಾಡಿ ಹೀಗೆಂದನು, “ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ನಿಮ್ಮಲ್ಲಿ ಯಾವನಾದರೂ ಯೆಹೋವನಿಗೆ ಪಶುವನ್ನು ಕಾಣಿಕೆಯಾಗಿ ಸಮರ್ಪಿಸಬೇಕೆಂದಿದ್ದರೆ ಅವನು ಅದನ್ನು ಹಿಂಡಿನ ದನಗಳಿಂದಾಗಲಿ ಅಥವಾ ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಸಮರ್ಪಿಸಬೇಕು.
“ ‘ಅವನು ದನವನ್ನು ಸರ್ವಾಂಗಹೋಮವಾಗಿ ಸಮರ್ಪಿಸುವುದಾದರೆ ಪೂರ್ಣಾಂಗವಾದ ಗಂಡನ್ನು ತರಬೇಕು. ತನ್ನನ್ನು ಯೆಹೋವನು ಮೆಚ್ಚುವಂತೆ ದೇವದರ್ಶನದ ಗುಡಾರದ ಬಾಗಿಲಿಗೆ ಅದನ್ನು ತರಬೇಕು. ಅವನು ಆ ಯಜ್ಞ ಪಶುವಿನ ತಲೆಯ ಮೇಲೆ ಕೈಯಿಡಬೇಕು; ಆಗ ಅದು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದಕ್ಕಾಗಿ ಅಂಗೀಕಾರವಾಗುವುದು.
“ ‘ಅವನು ಆ ಹೋರಿಯನ್ನು ಯೆಹೋವನ ಎದುರಿನಲ್ಲಿ ವಧಿಸಿದ ಮೇಲೆ ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಯಜ್ಞವೇದಿಯ ಸುತ್ತಲೂ ಎರಚಬೇಕು. ಅನಂತರ ಅವನು ಆ ಯಜ್ಞಪಶುವಿನ ಚರ್ಮವನ್ನು ಸುಲಿದು ಅದರ ದೇಹವನ್ನು ತುಂಡು ತುಂಡಾಗಿ ಕಡಿಯಬೇಕು. ಆರೋನನ ವಂಶದವರಾದ ಯಾಜಕರು ಯಜ್ಞವೇದಿಯ ಮೇಲೆ ಬೆಂಕಿಯನ್ನಿಟ್ಟು, ಅದರ ಮೇಲೆ ಕಟ್ಟಿಗೆಯನ್ನು ಕೂಡಿಸಿ ಇಡಬೇಕು. ಆಮೇಲೆ ಯಾಜಕರು ಅಂದರೆ ಆರೋನನ ಮಕ್ಕಳು, ಆ ತುಂಡುಗಳನ್ನು, ತಲೆಯನ್ನು ಮತ್ತು ಕೊಬ್ಬನ್ನು ಅದರ ಮೇಲೆ ಕ್ರಮವಾಗಿ ಇಡಬೇಕು. ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ನೀರಿನಲ್ಲಿ ತೊಳೆದನಂತರ ಯಾಜಕನು ಅದನ್ನು ಪೂರ್ತಿಯಾಗಿ ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗುತ್ತದೆ.
10 “ ‘ಒಬ್ಬನು ಆಡನ್ನಾಗಲಿ ಅಥವಾ ಕುರಿಯನ್ನಾಗಲಿ ಸರ್ವಾಂಗಹೋಮವನ್ನಾಗಿ ಅರ್ಪಿಸಬೇಕೆಂದಿದ್ದರೆ ಅವನು ಪೂರ್ಣಾಂಗವಾದ ಗಂಡನ್ನು ತರಬೇಕು. 11 ಅದನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಉತ್ತರ ಭಾಗದಲ್ಲಿ ವಧಿಸಬೇಕು. ತರುವಾಯ ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಹಾಕಬೇಕು. 12 ಅವನು ಆ ಪಶುವಿನ ದೇಹವನ್ನು ತುಂಡು ತುಂಡಾಗಿ ಕಡಿದ ಮೇಲೆ ಯಾಜಕನು ಆ ತುಂಡುಗಳನ್ನು, ತಲೆಯನ್ನು ಮತ್ತು ಕೊಬ್ಬನ್ನು ಯಜ್ಞವೇದಿಯ ಮೇಲಣ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು. 13 ಅದರ ಕರುಳುಗಳನ್ನು ಹಾಗು ಕಾಲುಗಳನ್ನು ನೀರಿನಲ್ಲಿ ತೊಳೆದನಂತರ ಯಾಜಕನು ಅದನ್ನು ಪೂರ್ತಿಯಾಗಿ ಯಜ್ಞವೇದಿಯ ಮೇಲೆ ಸುಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗಿದೆ.
14 “ ‘ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸುವಂಥದ್ದು ಪಕ್ಷಿಜಾತಿಯಾಗಿದ್ದರೆ ಅದು ಬೆಳವಕ್ಕಿಯಾಗಲಿ ಅಥವಾ ಪಾರಿವಾಳದ ಮರಿಯಾಗಲಿ ಆಗಿರಬೇಕು. 15 ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು, ಕುತ್ತಿಗೆ ಮುರಿದು ಅದನ್ನು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು. ಅವನು ಅದರ ರಕ್ತವನ್ನು ಯಜ್ಞವೇದಿಯ ಪಕ್ಕದಲ್ಲಿ ಹರಿಯುವಂತೆ ಮಾಡಿ ಹಿಂಗಿಸಬೇಕು. 16 ಅದರ * 1:16 ಅಥವಾ ಎರೆ ಚೀಲ.ಕರುಳುಗಳನ್ನು ಮತ್ತು ರೆಕ್ಕೆಗಳನ್ನು ತೆಗೆದುಬಿಟ್ಟು ಯಜ್ಞವೇದಿಯ ಪೂರ್ವದಿಕ್ಕಿನಲ್ಲಿರುವ ಬೂದಿಯ ಸ್ಥಳದಲ್ಲಿ ಹಾಕಬೇಕು. 17 ಅವನು ಆ ಪಕ್ಷಿಯನ್ನು ರೆಕ್ಕೆಗಳ ಮಧ್ಯದಲ್ಲಿ ಇಬ್ಭಾಗವಾಗಿ ಹರಿಯಬೇಕು, ಅವನು ಅದನ್ನು ವಿಭಾಗಿಸಬಾರದು. ಆದರೆ ರೆಕ್ಕೆಗಳನ್ನು ಪೂರಾ ಕಿತ್ತುಹಾಕಬಾರದು. ಅನಂತರ ಯಾಜಕನು ಅದನ್ನು ಯಜ್ಞವೇದಿಯ ಮೇಲಣ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗಿದೆ.

*1:16 1:16 ಅಥವಾ ಎರೆ ಚೀಲ.