15
ಕಳೆದುಹೋದ ಕುರಿಯ ಸಾಮ್ಯ
ಮತ್ತಾ 18:12-14
1 ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ ಆತನ ಬಳಿಗೆ ಬರುತ್ತಿದ್ದರು. 2 ಫರಿಸಾಯರೂ ಶಾಸ್ತ್ರಿಗಳೂ, “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ” ಎಂದು ಹೇಳಿಕೊಂಡು ಗೊಣಗುಟ್ಟುತ್ತಿದ್ದರು.
3 ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. 4 ಅದೇನೆಂದರೆ, “ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದುಹೋದರೆ ಅವನು ತೊಂಬತ್ತೊಂಬತ್ತನ್ನೂ ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೆಯೇ? 5 ಸಿಕ್ಕಿದ ಮೇಲೆ ಅವನು ಸಂತೋಷದಿಂದ ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, 6 ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ, ‘ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಅವರಿಗೆ ಹೇಳುವನಲ್ಲವೇ. 7 ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಶ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಹೆಚ್ಚು ಸಂತೋಷವುಂಟಾಗುವುದೆಂದು ನಿಮಗೆ ಹೇಳುತ್ತೇನೆ.
ಕಳೆದುಹೋದ ನಾಣ್ಯದ ಸಾಮ್ಯ
8 “ಇಲ್ಲವೇ ಒಬ್ಬ ಹೆಂಗಸಿನ ಬಳಿಯಲ್ಲಿ ಹತ್ತು ಬೆಳ್ಳಿನಾಣ್ಯಗಳಿರಲಾಗಿ ಒಂದು ಬೆಳ್ಳಿನಾಣ್ಯ ಕಳೆದು ಹೋದರೆ ದೀಪಹಚ್ಚಿ, ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳೂ? 9 ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಸೇರಿಸಿಕೊಂಡು, ‘ಕಳೆದು ಹೋಗಿದ್ದ ಬೆಳ್ಳಿನಾಣ್ಯ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ’ ಎಂದು ಹೇಳುವಳಲ್ಲವೇ. 10 ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದೆಂದು ನಿಮಗೆ ಹೇಳುತ್ತೇನೆ” ಅಂದನು.
ದುಂದುಗಾರ ಮಗ
11 ಇನ್ನೂ ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. 12 ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು. 13 ಸ್ವಲ್ಪ ದಿನದ ಮೇಲೆ ಆ ಕಿರಿಯ ಮಗನು ತನ್ನ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಹಾಳುಮಾಡಿಕೊಂಡನು. 14 ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. 15 ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. 16 ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಸೆಪಟ್ಟನು, ಆದರೂ ಯಾರೂ ಅವನಿಗೆ ಕೊಡಲಿಲ್ಲ. 17 ಆಗ ಅವನಿಗೆ ಬುದ್ಧಿಬಂದು ಅವನು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವಿದೆ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ. 18 ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪ ಮಾಡಿದ್ದೇನೆ. 19 ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ, ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು’ ಎಂದು ಹೇಳುವೆನು ಅಂದುಕೊಂಡು, 20 ಎದ್ದು ತನ್ನ ತಂದೆಯ ಕಡೆಗೆ ಬಂದನು.
“ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು. 21 ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು, 22 ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ, 23 ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. 24 ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು. 25 ಆದರೆ ಅವನ ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ, 26 ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು, ಇದೇನು ಎಂದು ವಿಚಾರಿಸಿದನು. 27 ಆಳು ಅವನಿಗೆ, ‘ನಿನ್ನ ತಮ್ಮ ಬಂದಿದ್ದಾನೆ. ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ’ ಎಂದು ಹೇಳಿದನು. 28 ಇದನ್ನು ಕೇಳಿ ಹಿರಿಯ ಮಗನು ಕೋಪಗೊಂಡು ಮನೆ ಒಳಕ್ಕೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. 29 ಆದರೆ ಅವನು ತನ್ನ ತಂದೆಗೆ, ‘ನೋಡು, ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. 30 ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ಹಾಳುಮಾಡಿದ ಈ ನಿನ್ನ ಮಗನು ಬಂದಾಗ ಕೊಬ್ಬಿದ ಕರುವನ್ನು ಇವನಿಗೆ ಕೊಯ್ಸಿದಿಯಲ್ಲಾ’ ಎಂದು ಉತ್ತರಕೊಟ್ಟನು. 31 ಅದಕ್ಕೆ ತಂದೆಯು, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲಾ ನಿನ್ನದೇ. 32 ಆದರೆ ಉಲ್ಲಾಸಪಡುವುದೂ ಸಂತೋಷಗೊಳ್ಳುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ; ಪೋಲಿಹೋಗಿದ್ದನು, ಸಿಕ್ಕಿದನು’ ” ಎಂದು ಹೇಳಿದನು.