4
ಬಿತ್ತುವವನ ಸಾಮ್ಯ*ಸಾಮ್ಯ - ದೇವರ ರಾಜ್ಯದ ಅಥವಾ ಆತ್ಮೀಕ ವಿಷಯಗಳ ಅರ್ಥವನ್ನು ಪ್ರತಿದಿನ ಬಳಸುವ ವಸ್ತುಗಳ ಮೂಲಕ ನೀತಿಯನ್ನು ವಿವರಿಸುವುದು.
ಮತ್ತಾ 13:1-34; ಲೂಕ 8:4-18; 13:18,19
ಯೇಸುವು ಪುನಃ ಸಮುದ್ರದ ದಡದಲ್ಲಿ ಉಪದೇಶ ಮಾಡತೊಡಗಿದ್ದನು. ಬಹುಜನರು ಆತನ ಬಳಿಗೆ ಸೇರಿಬಂದಿದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕುಳಿತುಕೊಂಡನು; ಆ ಜನರೆಲ್ಲರು ಸಮುದ್ರದ ದಡದಲ್ಲಿ ಸುತ್ತಲೂ ನೆರೆದುಬಂದಿದ್ದರು. ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ: “ಕೇಳಿರಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು; ಆದರೆ ಬಿಸಿಲೇರಿದಾಗ ಬಾಡಿ, ಬೇರಿಲ್ಲದ ಕಾರಣ ಒಣಗಿ ಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆದು ಬಂದು ಫಲಕೊಟ್ಟವು; ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.” ಮತ್ತು ಆತನು “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
10 ಆತನು ಒಬ್ಬನೇ ಇದ್ದಾಗ, ಆತನಿಗೆ ಹತ್ತಿರವಾಗಿದ್ದವರು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಸಾಮ್ಯಗಳ ವಿಷಯವಾಗಿ ಆತನನ್ನು ಕೇಳಿದರು. 11 ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.”
12 ಯೆಶಾ 6:9, 10:“ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ,
ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ,
ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.”
13 ಅನಂತರ ಆತನು ಅವರಿಗೆ ಹೇಳಿದ್ದೇನಂದರೆ, “ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳಿದುಕೊಳ್ಳುವಿರಿ? 14 ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. 15 ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.
16 “ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; 17 ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.
18 “ಇನ್ನು ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು; 19 ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ. 20 ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿರುವವರು” ಅಂದನು.
ದೀಪಸ್ತಂಭದ ಸಾಮ್ಯ
21 ಇದಲ್ಲದೆ ಯೇಸು ಅವರಿಗೆ, ಮತ್ತಾ 5:15; ಲೂಕ 8:16; 11:33:“ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಲ್ಲವೇ? 22 ಮರೆಯಾಗಿರುವಂಥ ಎಲ್ಲವೂ ಬೆಳಕಿಗೆ ಬಾರದೇ ಇರುವುದಿಲ್ಲ;§ಮತ್ತಾ 10:26; ಲೂಕ 8:17; 12:2:ಬಹಿರಂಗವಾಗದಿರುವ ಯಾವ ರಹಸ್ಯಗಳು ಇರುವುದಿಲ್ಲ. 23 *ಮಾರ್ಕ 4:9; ಮತ್ತಾ 11:15; ಪ್ರಕ 2:7,11,17,29; 3:6,13,22.ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಹೇಳಿದನು.
24 ಮತ್ತು ಆತನು ಅವರಿಗೆ; “ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆಯಾಗಿರಿ.ಮತ್ತಾ 7:2; ಲೂಕ 6:38:ನೀವು ಅಳೆಯುವ ಅಳತೆಯಿಂದಲೇ ನಿಮ್ಮನ್ನೂ ಅಳೆಯುವರು; ನಿಮಗೆ ಇನ್ನೂ ಅಧಿಕವಾಗಿ ಸೇರಿಸಿಕೊಡುವರು. 25 ಮತ್ತಾ 25:29; ಲೂಕ 8:18; 19:26:ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಇದ್ದುದನ್ನೂ ತೆಗೆಯಲ್ಪಡುವುದು” ಎಂದು ಹೇಳಿದನು.
ಬೆಳೆಯುವ ಬೀಜದ ಸಾಮ್ಯ
26 ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ 27 ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜದ ಸಸಿ ಮೊಳೆತು ಬೆಳೆಯುವುದು. ಇದರಂತೆ ದೇವರ ರಾಜ್ಯವೂ ಕೂಡ. 28 ಭೂಮಿಯು ಮೊದಲು ಮೊಳಕೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. 29 ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು.
ಸಾಸಿವೆಕಾಳಿನ ಸಾಮ್ಯ
30 ಇನ್ನೂ ಆತನು ಹೇಳಿದ್ದು; “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? 31 ಅದು ಸಾಸಿವೆ ಕಾಳಿನಂತಿರುತ್ತದೆ. ನೆಲದಲ್ಲಿ ಬಿತ್ತುವಾಗ ಅದು ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. 32 ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು.
33 ಆತನು ಈ ರೀತಿಯ ಅನೇಕ ಸಾಮ್ಯಗಳಿಂದ ಜನರಿಗೆ ಅರ್ಥವಾಗುವ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. 34 ಸಾಮ್ಯಗಳಿಲ್ಲದೆ ಆತನು ಒಂದನ್ನೂ ಹೇಳಲಿಲ್ಲಾ. ಆದರೆ ಏಕಾಂತವಾಗಿರುವಾಗ ಆತನು ತನ್ನ ಆಪ್ತ ಶಿಷ್ಯರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದನು.
ಯೇಸು ಸಮುದ್ರದ ಮೇಲಣ ಬಿರುಗಾಳಿಯನ್ನು ನಿಲ್ಲಿಸಿದ್ದು
ಮತ್ತಾ 8:23-27; ಲೂಕ 8:22-25
35 ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು. 36 ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು. 37 ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು. 38 ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು. 39 ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು. 40 ತರುವಾಯ ಆತನು ಅವರನ್ನು, “ಯಾಕೆ ಭಯಪಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ?” ಎಂದು ಕೇಳಲು 41 ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

*^ ಸಾಮ್ಯ - ದೇವರ ರಾಜ್ಯದ ಅಥವಾ ಆತ್ಮೀಕ ವಿಷಯಗಳ ಅರ್ಥವನ್ನು ಪ್ರತಿದಿನ ಬಳಸುವ ವಸ್ತುಗಳ ಮೂಲಕ ನೀತಿಯನ್ನು ವಿವರಿಸುವುದು.

4:12 ಯೆಶಾ 6:9, 10:

4:21 ಮತ್ತಾ 5:15; ಲೂಕ 8:16; 11:33:

§4:22 ಮತ್ತಾ 10:26; ಲೂಕ 8:17; 12:2:

*4:23 ಮಾರ್ಕ 4:9; ಮತ್ತಾ 11:15; ಪ್ರಕ 2:7,11,17,29; 3:6,13,22.

4:24 ಮತ್ತಾ 7:2; ಲೂಕ 6:38:

4:25 ಮತ್ತಾ 25:29; ಲೂಕ 8:18; 19:26: