15
ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು,
ಬಿರುನುಡಿಯು ಸಿಟ್ಟನ್ನೇರಿಸುವುದು.
ಜ್ಞಾನಿಗಳ ನಾಲಿಗೆಯು ತಿಳಿವಳಿಕೆಯನ್ನು ಸಾರ್ಥಕ ಮಾಡುವುದು,
ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಾರುವುದು.
ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು,
ಆತನು ಕೆಟ್ಟವರನ್ನು ಮತ್ತು ಒಳ್ಳೆಯವರನ್ನು ನೋಡುತ್ತಲೇ ಇರುವನು.
ಸಂತೈಸುವ ನಾಲಿಗೆ ಜೀವವೃಕ್ಷವು,
ಬಲತ್ಕರಿಸುವ ನಾಲಿಗೆ ಮನಮುರಿಯುವುದು.
ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು,
ಗದರಿಕೆಯನ್ನು ಗಮನಿಸುವವನು ಜಾಣನು.
ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ,
ದುಷ್ಟನ ಆದಾಯವು ನಷ್ಟಕ್ಕೆ ದಾರಿ.
ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು.
ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ.
ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ,
ಶಿಷ್ಟರ ಬಿನ್ನಹ ಆತನಿಗೆ ಇಷ್ಟ.
ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ,
ಧರ್ಮಾಸಕ್ತನು ಆತನಿಗೆ ಪ್ರಿಯ.
10 ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ,
ಗದರಿಕೆಯನ್ನು ಕೇಳದವನಿಗೆ ಸಾವು.
11 ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ
ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ.
12 ಧರ್ಮನಿಂದಕನು ಗದರಿಕೆಯನ್ನು ಕೇಳನು,
ಜ್ಞಾನಿಗಳ ಸಂಗಡ ಸೇರನು.
13 ಹರ್ಷ ಹೃದಯದಿಂದ ಹಸನ್ಮುಖ,
ಮನೋವ್ಯಥೆಯಿಂದ ಆತ್ಮಭಂಗ.
14 ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು,
ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು.
15 ದೀನನ ದಿನಗಳೆಲ್ಲಾ ದುಃಖಭರಿತ,
ಹರ್ಷಹೃದಯನಿಗೆ ನಿತ್ಯವೂ ಔತಣ.
16 ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ
ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು.
17 ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ,
ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.
18 ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು,
ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.
19 ಸೋಮಾರಿಯ ಮಾರ್ಗ ಮುಳ್ಳುಬೇಲಿ,
ಯಥಾರ್ಥವಂತನ ಮಾರ್ಗ ರಾಜಮಾರ್ಗ.
20 ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು,
ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.
21 ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು,
ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು.
22 ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು,
ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು.
23 ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ!
ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ!
24 ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು;
ಅದು ಅವನನ್ನು ಪಾತಾಳದಿಂದ ತಪ್ಪಿಸುವುದು.
25 ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು;
ವಿಧವೆಯ ಮೇರೆಯನ್ನು ನೆಲೆಗೊಳಿಸುವನು.
26 ಕುಯುಕ್ತಿಯು ಯೆಹೋವನಿಗೆ ಅಸಹ್ಯ,
ನಯನುಡಿಯು ಆತನಿಗೆ ಪ್ರಿಯ.
27 ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು.
ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.
28 ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ,
ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ.
29 ಯೆಹೋವನು ದುಷ್ಟರಿಗೆ ದೂರ,
ಶಿಷ್ಟರ ಬಿನ್ನಹಕ್ಕೆ ಹತ್ತಿರ.
30 *ಮೂಲತಃ ಕಣ್ಣಿನ ಬೆಳಕು.ಹಸನ್ಮುಖ ಹೃದಯಕ್ಕೆ ಆನಂದ,
ಮೂಲತಃ ಕಿವಿಗೆ ಬಿದ್ದ ಒಳ್ಳೆಯ ಸುದ್ದಿ ಎಲುಬಿಗೆ ಪುಷ್ಟಿ.ಶುಭಸಮಾಚಾರ ದೇಹಕ್ಕೆ ಆರೋಗ್ಯ.
31 ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು,
ಜ್ಞಾನಿಗಳ ನಡುವೆ ನೆಲೆಗೊಳ್ಳುವನು.
32 ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು,
ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು.
33 ಯೆಹೋವನ ಭಯವೇ ಜ್ಞಾನೋಪದೇಶ,
ಗೌರವಕ್ಕೆ ಮೊದಲು ವಿನಯ.

*15:30 ಮೂಲತಃ ಕಣ್ಣಿನ ಬೆಳಕು.

15:30 ಮೂಲತಃ ಕಿವಿಗೆ ಬಿದ್ದ ಒಳ್ಳೆಯ ಸುದ್ದಿ ಎಲುಬಿಗೆ ಪುಷ್ಟಿ.