10
ಯೆಹೋವನು ಕುಗ್ಗಿದವರನ್ನು ರಕ್ಷಿಸಬೇಕೆಂದು ಬೇಡಿಕೊಳ್ಳುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
1 ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ?
ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ?
2 ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ;
ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ.
3 ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ;
*ಅಥವಾ ದುಷ್ಟನು ಲಾಭಬಡುಕನನ್ನು ಹರಸುತ್ತಾನೆ.ಲಾಭಬಡುಕನು ಯೆಹೋವನನ್ನು ದೂಷಿಸಿ ತಿರಸ್ಕರಿಸುತ್ತಾನೆ.
4 ದುಷ್ಟನು ಸೊಕ್ಕಿನ ಮುಖದಿಂದ, “ಯೆಹೋವನು ವಿಚಾರಿಸುವುದಿಲ್ಲ” ಎಂದು ಹೇಳಿಕೊಂಡು,
ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ.
5 ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ;
ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ
ಅದು ಅವನ ಗ್ರಹಿಕೆಗೆ ಬರುವುದಿಲ್ಲ;
ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.
6 ಅವನು, “ನಾನು ಕದಲುವುದೇ ಇಲ್ಲ;
ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ.
7 ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ;
ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ.
8 ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು,
ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ.
ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.
9 ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು.
ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.
10 ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ,
ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ.
11 ಆ ದುಷ್ಟನು ತನ್ನೊಳಗೆ, “ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ;
ಆತನು ನೋಡುವುದೇ ಇಲ್ಲ” ಅಂದುಕೊಳ್ಳುತ್ತಾನೆ.
12 ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ;
ಅವನನ್ನು ರಕ್ಷಿಸುವುದಕ್ಕೆ ಕೈಚಾಚು.
13 “ದೇವರು ವಿಚಾರಿಸುವುದೇ ಇಲ್ಲ” ಎಂದು ಹೇಳುತ್ತಾ,
ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು?
14 ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ;
ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು;
ದಿಕ್ಕಿಲ್ಲದವನಿಗೆ ನೀನೇ ದಿಕ್ಕು.
15 ದುಷ್ಟನ ಭುಜಬಲವನ್ನು ಮುರಿದುಹಾಕು,
ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು.
16 ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು;
ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.
17 ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ;
ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ.
18 ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ.
ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.