99
ಯೆಹೋವರಾಜನ ಪವಿತ್ರತೆಯನ್ನು ಕೊಂಡಾಡುವುದು
ಯೆಶಾ 6
ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;
ಜನಾಂಗಗಳು ನಡುಗಲಿ.
ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ;
ಭೂಮಿಯು ಕಂಪಿಸಲಿ.
ಚೀಯೋನಿನಲ್ಲಿರುವ ಯೆಹೋವನು ದೊಡ್ಡವನು;
ಆತನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು.
ಅವರು ಯೆಹೋವನ ಭಯಂಕರವಾದ ಮಹಾನಾಮವನ್ನು ಕೊಂಡಾಡಲಿ;
ಆತನು ಪರಿಶುದ್ಧನು.
ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ*ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ ಅಥವಾ ಅರಸನಾದ ಯೆಹೋವನು, ಪರಾಕ್ರಮಿಯಾಗಿದ್ದು ನೀತಿಯನ್ನು ಪ್ರೀತಿಸುತ್ತಾನೆ. ;
ಯಥಾರ್ಥವಾದದ್ದನ್ನು ಸ್ಥಾಪಿಸಿದವನೂ,
ಯಾಕೋಬ್ಯರಲ್ಲಿ ನ್ಯಾಯ, ನೀತಿಗಳನ್ನು ಸಿದ್ಧಿಗೆ ತಂದವನೂ ನೀನೇ.
ನಮ್ಮ ಯೆಹೋವ ದೇವರನ್ನು ಘನಪಡಿಸಿರಿ;
ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ.
ಆತನು ಪರಿಶುದ್ಧನು.
ಆತನ ಯಾಜಕರಲ್ಲಿ ಮೋಶೆ ಮತ್ತು ಆರೋನರೂ,
ಆತನ ಹೆಸರಿನಲ್ಲಿ ಪ್ರಾರ್ಥಿಸುವವರೊಳಗೆ ಸಮುವೇಲನೂ ಪ್ರಾರ್ಥಿಸಿದಾಗೆಲ್ಲ,
ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು.
ಆತನು ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತನಾಡುತ್ತಿದ್ದನು;
ಅವರು ಆತನ ವಿಧಿನಿಯಮಗಳನ್ನು ಕೈಕೊಂಡವರು.
ನಮ್ಮ ಯೆಹೋವ ದೇವರೇ, ಅವರಿಗೆ ಸದುತ್ತರ ಕೊಟ್ಟವನು ನೀನೇ.
ನೀನು ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸುತ್ತಿದ್ದರೂ,
ಕ್ಷಮಿಸುವ ದೇವರಾಗಿದ್ದಿ.
ನಮ್ಮ ಯೆಹೋವ ದೇವರನ್ನು ಘನಪಡಿಸಿರಿ;
ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ.
ನಮ್ಮ ಯೆಹೋವ ದೇವರು ಪರಿಶುದ್ಧನು.

*99:4 ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ ಅಥವಾ ಅರಸನಾದ ಯೆಹೋವನು, ಪರಾಕ್ರಮಿಯಾಗಿದ್ದು ನೀತಿಯನ್ನು ಪ್ರೀತಿಸುತ್ತಾನೆ.