142
ಇಕ್ಕಟ್ಟಿನಲ್ಲಿದ್ದವನ ಪ್ರಾರ್ಥನೆ
ದಾವೀದನ ಪದ್ಯ, ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ.
ಕೀರ್ತ 140; 1ಸಮು 22; 24
ನಾನು ಯೆಹೋವನಿಗೆ ಮೊರೆಯಿಡುವೆನು,
ಯೆಹೋವನಿಗೆ ಕೂಗಿ ಬಿನ್ನೈಸುವೆನು.
ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು,
ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.
ನನ್ನ ಆತ್ಮವು ಕುಂದಿಹೋದಾಗ,
ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ,
ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.
ನಾನು ನನ್ನ ಬಲಗಡೆಗೆ ನೋಡಲು,
ಅಲ್ಲಿ ಸಹಾಯಕರು ಯಾರೂ ಇಲ್ಲ,
ಆಶ್ರಯವೂ ನಾಶವಾಯಿತು,
ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ.
ಯೆಹೋವನೇ, ನಾನು ನಿನಗೆ, “ನೀನೇ ನನ್ನ ಶರಣನೂ,
ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ” ಎಂದು ಕೂಗಿ ಮೊರೆಯಿಟ್ಟಿದ್ದೇನೆ.
ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ.
ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು,
ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ.
ಸೆರೆಯಿಂದ ನನ್ನನ್ನು ಬಿಡಿಸು,
ನಿನ್ನ ನಾಮವನ್ನು ಕೀರ್ತಿಸುವೆನು.
ನೀತಿವಂತರು ನಿನ್ನ ಮಹೋಪಕಾರಕ್ಕಾಗಿ,
ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.