ಚೆಫನ್ಯನು
ಗ್ರಂಥಕರ್ತೃತ್ವ
ಚೆಫನ್ಯ 1:1 ರಲ್ಲಿ, ಗ್ರಂಥಕರ್ತನು ತನ್ನನ್ನು ತಾನು “ಕೂಷಿಯನ ಮಗನೂ, ಗೆದಲ್ಯನ ಮೊಮ್ಮಗನೂ, ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನು” ಎಂದು ಪರಿಚಯಿಸಿಕೊಳ್ಳುತ್ತಾನೆ. ಚೆಫನ್ಯ ಎಂಬ ಹೆಸರಿಗೆ “ದೇವರಿಂದ ಕಾಪಾಡಲ್ಪಟ್ಟವನು” ಎಂಬರ್ಥವಿದೆ, ಯೆರೆಮೀಯ ಪುಸ್ತಕದಲ್ಲಿ ಪ್ರಖ್ಯಾತನಾದ ಯಾಜಕನಿದ್ದಾನೆ (21:1; 29:25, 29; 37:3; 52:24), ಆದರೆ ಚೆಫನ್ಯನಿಗೆ ಮೇಲಣ ಬರಹದಲ್ಲಿರುವ ಹೆಸರಿನೊಂದಿಗೆ ಯಾವುದೇ ಸಂಬಂಧವಿಲ್ಲ. ಚೆಫನ್ಯನಿಗೆ ಅವನ ಪೂರ್ವಜರ ಆಧಾರದ ಮೇಲೆ ರಾಜಮನೆತನದ ಹಿನ್ನಲೆಯುಳ್ಳವನಾಗಿದ್ದಾನೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಯೆಶಾಯ ಮತ್ತು ಮೀಕನ ಸಮಯದಿಂದ ಯೆಹೂದದ ವಿರುದ್ಧವಾಗಿ ಪ್ರವಾದಿಸಿ ಬರೆದಂಥ ಪ್ರವಾದಿಗಳಲ್ಲಿ ಚೆಫನ್ಯನು ಮೊದಲನೆಯವನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 640-607 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಯೆಹೂದದ ಅರಸನಾದ ಯೋಷೀಯನ ಆಳ್ವಿಕೆಯಲ್ಲಿ ಚೆಫನ್ಯನು ಪ್ರವಾದಿಸಿದನೆಂದು ಈ ಪುಸ್ತಕವು ನಮಗೆ ಹೇಳುತ್ತದೆ (ಚೆಫನ್ಯ 1:1).
ಸ್ವೀಕೃತದಾರರು
ಯೆಹೂದದ ಜನರು (ದಕ್ಷಿಣ ರಾಜ್ಯ) ಮತ್ತು ಎಲ್ಲೆಡೆಯಿರುವ ದೇವರ ಜನರಿಗಿರುವ ಸಾಮಾನ್ಯ ಪತ್ರ.
ಉದ್ದೇಶ
ಚೆಫನ್ಯನ ನ್ಯಾಯತೀರ್ಪಿನ ಮತ್ತು ಪ್ರೋತ್ಸಾಹದ ಸಂದೇಶವು ಮೂರು ಪ್ರಮುಖ ಸಿದ್ಧಾಂತಗಳನ್ನೊಳಗೊಂಡಿವೆ, ದೇವರು ಎಲ್ಲಾ ರಾಷ್ಟ್ರಗಳ ಮೇಲೆ ಸಾರ್ವಭೌಮತ್ವವನ್ನು ಹೊಂದಿದ್ದಾನೆ, ನ್ಯಾಯದ ತೀರ್ಪಿನ ದಿನದಂದು ದುಷ್ಟರು ಶಿಕ್ಷಿಸಲ್ಪಡುತ್ತಾರೆ ಮತ್ತು ನೀತಿವಂತರು ವಿಮೋಚಿಸಲ್ಪಡುತ್ತಾರೆ, ದೇವರು ಪಶ್ಚಾತ್ತಾಪಪಡುವವರನ್ನು ಮತ್ತು ತನ್ನಲ್ಲಿ ಭರವಸೆಯನ್ನಿಡುವವರನ್ನು ಆಶೀರ್ವದಿಸುತ್ತಾನೆ.
ಮುಖ್ಯಾಂಶ
ಕರ್ತನ ಮಹಾ ದಿನ
ಪರಿವಿಡಿ
1. ಬರಲಿರುವ ಕರ್ತನ ದಿನದ ವಿನಾಶ — 1:1-18
2. ನಿರೀಕ್ಷೆಯ ವಿರಾಮ — 2:1-3
3. ದೇಶಗಳ ವಿನಾಶ — 2:4-15
4. ಯೆರೂಸಲೇಮಿನ ವಿನಾಶ — 3:1-7
5. ಹಿಂತಿರುಗುವಿಕೆಯ ನಿರೀಕ್ಷೆ — 3:8-20
1
1 ಆಮೋನನ ಮಗನೂ, ಯೆಹೂದದ ಅರಸನಾದ ಯೋಷೀಯನ ಕಾಲದಲ್ಲಿ ಕೂಷಿಯನ ಮಗನೂ, ಗೆದಲ್ಯನ ಮೊಮ್ಮಗನೂ, ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವನು ದಯಪಾಲಿಸಿದ ವಾಕ್ಯ.
ಮುಂಬರಲಿರುವ ನಾಶನ
2 ಯೆಹೋವನು ಇಂತೆನ್ನುತ್ತಾನೆ, “ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು.
3 ಮನುಷ್ಯರನ್ನೂ, ಪಶುಗಳನ್ನೂ, ಮತ್ತು ಆಕಾಶದ ಪಕ್ಷಿಗಳನ್ನೂ, ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ,
ಅವುಗಳಿಗೆ ಅಡ್ಡಬೀಳುವ ದುಷ್ಟರನ್ನೂ ಸಂಹರಿಸುವೆನು; ಭೂಮಿಯ ಮೇಲಿಂದ ದುಷ್ಟರ ಸಂತಾನವನ್ನೂ ಕಿತ್ತುಹಾಕುವೆನು” ಇದು ಯೆಹೋವನ ನುಡಿ.
ಯೆಹೂದಕ್ಕೆ ದೇವರ ದಂಡನೆ ತಪ್ಪದು
4 “ನಾನು ಯೆಹೂದದ ಮೇಲೂ ಮತ್ತು ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ,
ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ, ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮ ಮಾಡುವೆನು,
5 ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣವನ್ನು ಪೂಜಿಸುವವರನ್ನೂ,
ಯೆಹೋವನ ಭಕ್ತರೆಂದು ಪ್ರತಿಜ್ಞೆ ಮಾಡಿಕೊಂಡು ಆರಾಧಿಸಿ ಮಲ್ಕಾಮನ*ಮಲ್ಕಾಮನ ಇದು ವಿಗ್ರಹ, ಆಮೋನ್ಯರ ದೇವತೆ. ಮೇಲೆ ಆಣೆಯಿಡುವವರನ್ನೂ,
6 ಯೆಹೋವನನ್ನು ಆಶ್ರಯಿಸದೆ, ಯೆಹೋವನ ದರ್ಶನವನ್ನು ಬಯಸದೇ, ಯೆಹೋವನ ಮಾರ್ಗ ಬಿಟ್ಟವರನ್ನೂ ಧ್ವಂಸ ಮಾಡುವೆನು.”
7 ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ, ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿತು;
ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಪ್ರತಿಷ್ಠಿಸಿದ್ದಾನೆ.
8 “ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ,
ರಾಜವಂಶದವರನ್ನೂ, ವಿದೇಶ ವಸ್ತ್ರದಾರಿಗಳೆಲ್ಲರನ್ನೂ ದಂಡಿಸುವೆನು.
9 ಹೊಸ್ತಿಲನ್ನು ದಾಟಿ ಮೋಸ ಹಿಂಸೆಗಳಿಂದ ದೋಚಿದ್ದನ್ನು,
ತಮ್ಮ ಒಡೆಯನ ಮನೆಯೊಳಗೆ†ಒಡೆಯನ ಮನೆಯೊಳಗೆ ಅಥವಾ ತಮ್ಮ ದೇವಸ್ಥಾನದೊಳಗೆ. ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು.
10 ಅದೇ ದಿನದಲ್ಲಿ ಮೀನುಬಾಗಿಲಿನಿಂದ ಕೂಗಾಟ,
ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿನಿಂದ ಭೀಕರ ಶಬ್ದವನ್ನು ಕೇಳುವಿರಿ,
ಅಂತು ದೊಡ್ಡ ಗದ್ದಲವಾಗುವುದು” ಇದು ಯೆಹೋವನ ನುಡಿ.
11 ಯೆರುಸಲೇಮ್ ಜಿಲ್ಲೆಯ ಮಾರುಕಟ್ಟೆಯಲ್ಲಿ ವಾಸಿಸುವವರೇ, ಕೂಗಿರಿ,
ಏಕೆಂದರೆ ಎಲ್ಲಾ ವರ್ತಕರ ಜನರೆಲ್ಲಾ ಹಾಳಾದರು, ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.
12 ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು,
ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು;
ಯೆಹೋವನು ಮೇಲನ್ನಾಗಲಿ, ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ,
ಮಡ್ಡಿಯಂತೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು.
13 ಅವರ ಆಸ್ತಿಯು ಸೂರೆಯಾಗುವುದು, ಅವರ ಮನೆಗಳು ಹಾಳಾಗುವವು;
ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು, ದ್ರಾಕ್ಷಾತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು.
ಯೆಹೋವನ ದಿನದ ವಿವರಣೆ
14 ಯೆಹೋವನ ಮಹಾದಿನವು ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ;
ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ!
15 ಆ ದಿನದ ಸುದ್ದಿ ಕಹಿಯಾದುದು, ಅದು ರೌದ್ರದ ದಿನ, ಶ್ರಮಸಂಕಟಗಳ ದಿನ,
ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ,
ಕಾರ್ಮುಗಿಲ ಕಗ್ಗತ್ತಲ ದಿನ!
16 ಕೋಟೆಗಳನ್ನೂ, ದೊಡ್ಡ ಕೊತ್ತಲುಗಳನ್ನೂ ಹಿಡಿಯಲು,
ಆರ್ಭಟಿಸಿ ಕೊಂಬೂದುವ ದಿನ.
17 ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ
ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು;
ಅವರ ರಕ್ತವು ಧೂಳಿನಂತೆ ಚೆಲ್ಲಿ ಹೋಗುವುದು, ಅವರ ಮಾಂಸವು ಮಲದ ಹಾಗೆ ಬಿದ್ದಿರುವುದು!
18 ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು;
ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು;
ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು!