2
ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಮಾನವೀಯ ಜ್ಞಾನದಿಂದಾಗಲಿ ದೇವರ ವಾಕ್ಯವನ್ನು ಸಾರುವವನಾಗಿ ಬರಲಿಲ್ಲ. ಶಿಲುಬೆಗೆ ಹಾಕಲಾದ ಯೇಸು ಕ್ರಿಸ್ತನನ್ನೇ ಹೊರತು ನಿಮ್ಮಲ್ಲಿ ಬೇರೆ ಯಾವುದನ್ನೂ ತಿಳಿಯದವನಾಗಿರುವೆನೆಂದು ತೀರ್ಮಾನಿಸಿಕೊಂಡೆನು. ನಾನು ನಿಮ್ಮ ಬಳಿಗೆ ಬಂದಾಗ ಬಲಹೀನನೂ ಬಹಳವಾಗಿ ಭಯಪಟ್ಟು ನಡುಗುವವನೂ ಆಗಿದ್ದೆನು. ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಜ್ಞಾನ ಹಾಗೂ ಮನವೊಲಿಸುವ ವಾಕ್ಯಗಳನ್ನು ಪ್ರಯೋಗಿಸದೆ, ದೇವರಾತ್ಮನ ಶಕ್ತಿಯನ್ನೇ ಪ್ರಯೋಗಿಸಿದೆನು. ನಿಮ್ಮ ನಂಬಿಕೆಯು ಮನುಷ್ಯ ಜ್ಞಾನದ ಮೇಲೆ ಅವಲಂಬಿಸದೆ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕೆಂದು ನಾನು ಹೀಗೆ ಮಾಡಿದೆನು.
ಪವಿತ್ರಾತ್ಮ ದೇವರ ಜ್ಞಾನ
ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ. ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ. ಇದನ್ನು ಇಹಲೋಕದ ಅಧಿಕಾರಿಗಳಲ್ಲಿ ಒಬ್ಬರಾದರೂ ಅರಿಯಲಿಲ್ಲ. ಅರಿತಿದ್ದರೆ, ಅವರು ಮಹಿಮೆಯುಳ್ಳ ಕರ್ತದೇವರನ್ನು ಶಿಲುಬೆಗೇರಿಸುತ್ತಿರಲಿಲ್ಲ. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ:
“ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು
ಯಾವ ಕಣ್ಣೂ ಕಾಣಲಿಲ್ಲ,
ಯಾವ ಕಿವಿಯೂ ಕೇಳಲಿಲ್ಲ,
ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”*ಯೆಶಾಯ 64:4
10 ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ.
ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ. 11 ಮನುಷ್ಯನ ಆಲೋಚನೆಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವುದು? ಹಾಗೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಗ್ರಹಿಸಲಾರರು. 12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ. 13 ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ. 14 ಆದರೆ ಭೌತಿಕ ಮನುಷ್ಯನುಪೌಲನು ಮನುಷ್ಯರನ್ನು ಮೂರು ವ್ಯಕ್ತಿಗಳಾಗಿ ವಿಂಗಡಿಸಿದ್ದಾನೆ. ಮೊದಲನೆಯದಾಗಿ ತಮ್ಮ ಮನಸ್ಸಿನ ಭಾವನೆಗಳ ಬದುಕುವವರು ಮತ್ತು ದೇವರ ಆತ್ಮ ಇಲ್ಲದವರು. ಎರಡನೆಯದಾಗಿ ದೈಹಿಕ ಆಸೆಗಳನ್ನು ಅನುಸರಿಸುವವರು ದೈಹಿಕರು. ಮೂರನೆಯದಾಗಿ ಪವಿತ್ರಾತ್ಮ ದೇವರನ್ನು ಅನುಸರಿಸುವವರು ಆತ್ಮಿಕರು. ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು. 15 ಆದರೆ ಆತ್ಮಿಕ ಮನುಷ್ಯನು ಎಲ್ಲವನ್ನೂ ವಿವೇಚಿಸಿಕೊಳ್ಳುತ್ತಾನೆ. ಆದರೆ ಅವನಿಗೆ ಬೇರೆ ಯಾರೂ ತೀರ್ಪುಮಾಡಲಾಗದು. 16 ಏಕೆಂದರೆ,
“ಕರ್ತದೇವರ ಮನಸ್ಸನ್ನು ತಿಳಿದುಕೊಂಡು,
ಅವರಿಗೆ ಉಪದೇಶಿಸುವವನಾರು?”ಯೆಶಾಯ 40:13
ಆದರೆ ನಮಗೆ ಕ್ರಿಸ್ತ ಯೇಸುವಿನ ಮನಸ್ಸು ಇದೆ.

*2:9 ಯೆಶಾಯ 64:4

2:14 ಪೌಲನು ಮನುಷ್ಯರನ್ನು ಮೂರು ವ್ಯಕ್ತಿಗಳಾಗಿ ವಿಂಗಡಿಸಿದ್ದಾನೆ. ಮೊದಲನೆಯದಾಗಿ ತಮ್ಮ ಮನಸ್ಸಿನ ಭಾವನೆಗಳ ಬದುಕುವವರು ಮತ್ತು ದೇವರ ಆತ್ಮ ಇಲ್ಲದವರು. ಎರಡನೆಯದಾಗಿ ದೈಹಿಕ ಆಸೆಗಳನ್ನು ಅನುಸರಿಸುವವರು ದೈಹಿಕರು. ಮೂರನೆಯದಾಗಿ ಪವಿತ್ರಾತ್ಮ ದೇವರನ್ನು ಅನುಸರಿಸುವವರು ಆತ್ಮಿಕರು.

2:16 ಯೆಶಾಯ 40:13