4
ದೇವರಿಗಾಗಿ ಬಾಳುವುದು
1 ಆದ್ದರಿಂದ ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಮಾಂಸದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅವರಿಗಿದ್ದ ಮನೋಭಾವವನ್ನು ಧರಿಸಿಕೊಳ್ಳಿರಿ. ಏಕೆಂದರೆ ಮಾಂಸದಲ್ಲಿ ಬಾಧೆಪಟ್ಟವರು ಪಾಪಮಾಡುವುದನ್ನು ನಿಲ್ಲಿಸಿಬಿಡುವರು. 2 ಅಂಥವರು ಉಳಿದಿರುವ ತಮ್ಮ ಭೂಲೋಕದ ಬಾಳಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವರು. 3 ದೇವರನ್ನು ಅರಿಯದ ಜನರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಸಾಕಷ್ಟು ಮಾಡಿದ್ದೀರಿ. ಆಗ ನೀವು ಅಶ್ಲೀಲತೆ, ದುರಾಶೆಗಳು, ಕುಡುಕತನ, ಅಮಲೇರುವಿಕೆ, ದುಂದು ಔತಣಗಳು, ಅಸಹ್ಯವಾದ ವಿಗ್ರಹಾರಾಧನೆಗಳು ಇವುಗಳನ್ನು ಮಾಡುತ್ತಿದ್ದೀರಿ. 4 ಆದುದರಿಂದ ನಿಮ್ಮ ಹಳೆಯ ಸ್ನೇಹಿತರೊಂದಿಗೆ ನೀವು ಮುಂಚಿನಂತೆ ಹಳೆಯ ದುಷ್ಕಾರ್ಯಗಳಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ. 5 ಅಂಥವರು ಬದುಕುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕಾಗಿ ಸಿದ್ಧವಾಗಿರುವ ದೇವರಿಗೆ ಲೆಕ್ಕ ಕೊಡಬೇಕಾಗುವುದು. 6 ಈ ಕಾರಣದಿಂದಲೇ ಈಗ ಸತ್ತಿರುವವರಿಗೂ ಸಹ ಬದುಕಿದ್ದಾಗ ಸುವಾರ್ತೆ ಸಾರಲಾಯಿತು. ಆದ್ದರಿಂದ ಎಲ್ಲಾ ಮನುಷ್ಯರಿಗೆ ನೇಮಿಸಿದ ನ್ಯಾಯತೀರ್ಪಿನಂತೆ ಅವರು ದೇಹದಲ್ಲಿ ಮರಣ ಹೊಂದಿದ್ದರೂ, ತಮ್ಮ ಆತ್ಮದಲ್ಲಿ ದೇವರಿಗಾಗಿ ಜೀವಿಸುವರು.
7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ. 8 ಎಲ್ಲಕ್ಕೂ ಮಿಗಿಲಾಗಿ ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ ಇರಲಿ. ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ. 9 ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ. 10 ನೀವು ದೇವರಿಂದ ವಿವಿಧ ಕೃಪಾವರಗಳನ್ನು ಹೊಂದಿರಲಾಗಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿರುವ ವರಗಳನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ. 11 ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.
ಕ್ರಿಸ್ತ ಯೇಸುವಿಗಾಗಿ ಶ್ರಮೆಗಳು
12 ಪ್ರಿಯರೇ, ನಿಮ್ಮನ್ನು ಶೋಧಿಸಲು ಬರುವ ಅಗ್ನಿಪರೀಕ್ಷೆಗೆ ನೀವು ಆಶ್ಚರ್ಯಪಡಬೇಡಿರಿ. ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿತೆಂದು ಯೋಚಿಸಬೇಡಿರಿ. 13 ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ. 14 ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ. 15 ನಿಮ್ಮಲ್ಲಿ ಯಾವನಾದರೂ ಕೊಲೆಗಾರನು, ಕಳ್ಳನು, ದುಷ್ಟನು ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನು ಅನುಭವಿಸಬಾರದು. 16 ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ. 17 ಏಕೆಂದರೆ ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯತೀರ್ಪಿನ ಸಮಯವು ಬಂದಿದೆ. ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರಬಹುದು? 18 ಮತ್ತು,
“ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ,
ಭಕ್ತಿಹೀನನೂ ಪಾಪಿಷ್ಠನೂ ಆಗಿರುವವನ ಗತಿ ಏನು?”*ಜ್ಞಾನೋಕ್ತಿ 11:31
19 ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ತಮ್ಮ ಆತ್ಮಗಳನ್ನು ನಂಬಿಗಸ್ತ ಆಗಿರುವ ಸೃಷ್ಟಿಕರ್ತ ದೇವರಿಗೆ ಒಪ್ಪಿಸಿ, ಒಳ್ಳೆಯದನ್ನು ಮಾಡಲಿ.