16
ಆಸನ ಕಡೆಯ ವರ್ಷಗಳು
ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು, ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಪಟ್ಟಣದ ಸುತ್ತಲೂ ಕೋಟೆಯನ್ನು ಕಟ್ಟಿಸಿದನು.
ಆಗ ಆಸನು ಯೆಹೋವ ದೇವರ ಆಲಯದ ಮತ್ತು ತನ್ನ ಅರಮನೆಯ ಬೊಕ್ಕಸಗಳಿಂದ ಬೆಳ್ಳಿಬಂಗಾರವನ್ನು ತೆಗೆದು, ದಮಸ್ಕದಲ್ಲಿ ವಾಸವಾಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ ಅವನಿಗೆ, “ನನ್ನ ತಂದೆ ಮತ್ತು ನಿನ್ನ ತಂದೆಯ ನಡುವೆ ಇದ್ದಂತೆ ನನ್ನ ಮತ್ತು ನಿನ್ನ ನಡುವೆ ಒಡಂಬಡಿಕೆ ಉಂಟು. ಇಗೋ ನಾನು ಬೆಳ್ಳಿಬಂಗಾರವನ್ನು ನಿನಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ, ನೀನು ಅವನ ಸಂಗಡ ಮಾಡಿದ ಒಡಂಬಡಿಕೆಯನ್ನು ಮುರಿಯಬೇಕು,” ಎಂದು ಹೇಳಿದನು.
ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನ್ನ ಸೈನ್ಯಾಧಿಪತಿಗಳನ್ನು ಕಳುಹಿಸಿದನು. ಅವರು ಇಯ್ಯೋನ್, ದಾನ್ ಆಬೇಲ್ಮಯಿಮ್*ಆಬೇಲ್ಮಯಿಮ್ ಅಥವಾ ಆಬೇಲ್ ಬೇತ್‌ಮಾಕ, ನಫ್ತಾಲ್ಯರ ಸಮಸ್ತ ಉಗ್ರಾಣಗಳ ಪಟ್ಟಣಗಳನ್ನು ವಶಪಡಿಸಿಕೊಂಡರು. ಬಾಷನು ಇದನ್ನು ಕೇಳಿದಾಗ ರಾಮ ಪಟ್ಟಣದ ಸುತ್ತಲೂ ಕೋಟೆ ಕಟ್ಟಿಸುವುದನ್ನು ಬಿಟ್ಟು, ಅದರ ಎಲ್ಲಾ ಕೆಲಸಗಳನ್ನು ನಿಲ್ಲಿಸಿಬಿಟ್ಟನು. ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡು ಹೋದನು. ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ, ಅವುಗಳಿಂದ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.
ಅದೇ ಕಾಲದಲ್ಲಿ ದರ್ಶಿಯಾದ ಹನಾನೀಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ದೇವರಾದ ಯೆಹೋವ ದೇವರ ಮೇಲೆ ಆತುಕೊಳ್ಳದೆ, ಅರಾಮಿನ ಅರಸನ ಮೇಲೆ ಆತುಕೊಂಡದ್ದರಿಂದ, ಅರಾಮಿನ ಅರಸನ ಸೈನ್ಯವು ನಿಮ್ಮ ಕೈಯಿಂದ ತಪ್ಪಿಸಿಕೊಂಡಿತು. ಕೂಷನವರೂ, ಲಿಬಿಯದವರೂ ಮಹಾ ಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ, ರಾಹುತರೂ ಇದ್ದರಲ್ಲವೇ? ಆಗ ನೀನು ಯೆಹೋವ ದೇವರನ್ನು ಆತುಕೊಂಡದ್ದರಿಂದ ದೇವರು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದರು. ಏಕೆಂದರೆ ಯೆಹೋವ ದೇವರಿಗೆ ಪೂರ್ಣವಾಗಿ ಸಮರ್ಪಿಸಿಕೊಂಡವರ ಹೃದಯವನ್ನು ಬಲಪಡಿಸುವುದಕ್ಕೆ ಅವರ ಕಣ್ಣುಗಳು ಭೂಲೋಕದ ಎಲ್ಲಾ ಕಡೆ ಇವೆ. ಆದರೆ ಈಗ ನೀನು ಬುದ್ಧಿಹೀನನಾಗಿ ನಡೆದುಕೊಂಡಿದ್ದೀಯೆ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದನು.
10 ಆಗ ಆಸನು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಇದರ ನಿಮಿತ್ತ ಅವನ ಮೇಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವರನ್ನು ಬಾಧಿಸಿದನು.
11 ಆಸನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಯೆಹೂದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ. 12 ಆದರೆ ಆಸನು ತನ್ನ ಆಳಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು. ಅವನ ರೋಗವು ಅತಿಘೋರವಾಯಿತು. ಆದರೆ ಅವನು ತನ್ನ ರೋಗದಲ್ಲಿ ಯೆಹೋವ ದೇವರನ್ನು ಹುಡುಕದೆ, ವೈದ್ಯರನ್ನು ಹುಡುಕಿದನು. 13 ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ಆಳಿಕೆಯ ನಾಲ್ವತ್ತೊಂದನೆಯ ವರ್ಷದಲ್ಲಿ ಮರಣಹೊಂದಿದನು. 14 ಅವನು ತನಗೋಸ್ಕರ ದಾವೀದನ ಪಟ್ಟಣದಲ್ಲಿ ಅಗಿಸಿದ ಅವನ ಸ್ವಂತ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವರು ತೈಲಗಾರರ ವಿದ್ಯೆಯಿಂದ ಸಿದ್ಧಮಾಡಿದ ಸುಗಂಧಗಳಿಂದಲೂ, ನಾನಾ ವಿಧವಾದ ಪದಾರ್ಥಗಳಿಂದಲೂ ತುಂಬಿದ ಶವ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟರು. ಅವನ ಗೌರವಕ್ಕಾಗಿ ಮಹಾ ಅಗ್ನಿಕುಂಡವನ್ನೇರ್ಪಡಿಸಿದರು.

*16:4 ಆಬೇಲ್ಮಯಿಮ್ ಅಥವಾ ಆಬೇಲ್ ಬೇತ್‌ಮಾಕ