9
1 ದೇವಜನರಿಗೆ ಸಹಾಯ ಮಾಡುವುದನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯವಿಲ್ಲ. 2 ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ. 3 ಆದರೂ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಮಗಿರುವ ಹೊಗಳಿಕೆಯು ಸುಳ್ಳಾಗಿರಬಾರದೆಂದು ಸಹೋದರರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ನೀವು ಸಹ ನಾನು ನಿಮಗೆ ಹೇಳಿದಂತೆ, ಇದಕ್ಕಾಗಿ ಸಿದ್ಧರಾಗಿರುವಿರಿ ಎಂದು ಭಾವಿಸುತ್ತೇನೆ. 4 ಏಕೆಂದರೆ, ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಜೊತೆಯಲ್ಲಿ ಬಂದು, ನೀವು ಇನ್ನೂ ಸಿದ್ಧರಿಲ್ಲದೆ ಇರುವುದನ್ನು ಕಂಡರೆ, ನಿಮಗೆ ಬೇಸರವಾಗುವುದಲ್ಲದೆ, ನಿಮ್ಮ ಬಗ್ಗೆ ಭರವಸೆಯಿಟ್ಟಿರುವುದಕ್ಕೆ ನಾವು ಸಹ ನಾಚಿಕೆಪಡುವ ಸನ್ನಿವೇಶ ಬರಬಾರದು. 5 ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು.
ಉದಾರತೆಯ ಚಿಂತನೆ
6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. 7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ. 8 ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ. 9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ,
“ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು;
ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.”*ಕೀರ್ತನೆ 112:9
10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು. 11 ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.
12 ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು. 13 ನಿಮ್ಮ ಸ್ವಭಾವವನ್ನು ರುಜುಪಡಿಸಿದ ಈ ಸೇವೆಯ ನಿಮಿತ್ತವಾಗಿಯೂ, ಕ್ರಿಸ್ತ ಯೇಸುವಿನ ಸುವಾರ್ತೆಯ ಅರಿಕೆಯನ್ನು ಅನುಸರಿಸುವ ನಿಮ್ಮ ವಿಧೇಯತೆಗಾಗಿಯೂ ಇತರರು ದೇವರನ್ನು ಸ್ತುತಿಸುವರು. ಹೀಗೆ, ನೀವು ಅವರಿಗೂ ಪ್ರತಿಯೊಬ್ಬರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವರು. 14 ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು. 15 ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತೋತ್ರವಾಗಲಿ!