2
ಸುಳ್ಳು ಬೋಧಕರು ಮತ್ತು ಅವರ ನಾಶನವು
ಆದರೆ ಆ ಕಾಲದಲ್ಲಿ ಸುಳ್ಳು ಪ್ರವಾದಿಗಳು ಸಹ ಜನರಲ್ಲಿ ಕಾಣಿಸಿಕೊಂಡರು. ಅದೇ ಪ್ರಕಾರ ನಿಮ್ಮಲ್ಲಿಯೂ ಈಗ ಸುಳ್ಳು ಬೋಧಕರು ಕಾಣಿಸಿಕೊಳ್ಳುವರು. ಅಂಥವರು ಹಾನಿಕರವಾದ ಸುಳ್ಳು ಬೋಧನೆಗಳನ್ನು ರಹಸ್ಯವಾಗಿ ಸಭೆಯೊಳಗೆ ತರುವರು. ತಮ್ಮನ್ನು ಕೊಂಡುಕೊಂಡ ಸಾರ್ವಭೌಮ ಕರ್ತ ಆಗಿರುವವರನ್ನೇ ಅಲ್ಲಗಳೆಯುವರು. ಹೀಗೆ ಅವರು ತಮ್ಮ ಮೇಲೆ ವಿನಾಶವನ್ನು ತಾವೇ ಬರಮಾಡಿಕೊಳ್ಳುವರು. ಆ ಸುಳ್ಳು ಬೋಧಕರ ಅಸಹ್ಯ ಕೃತ್ಯಗಳನ್ನು ಅನೇಕರು ಅನುಸರಿಸುವರು. ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು. ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತುಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು. ಅಂಥವರಿಗೆ ಬಹುಕಾಲದ ಹಿಂದೆಯೇ ದೇವರ ತೀರ್ಪು ಸಿದ್ಧಪಡಿಸಲಾಗಿದೆ. ಅವರಿಗಾಗುವ ವಿನಾಶವು ತೂಕಡಿಸುವುದಿಲ್ಲ.
ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕೆ ಬಂಧಿಸಿ, ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದರು. ದೇವರು ಪುರಾತನ ಜಗತ್ತನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದರು. ಆದರೆ ನೀತಿಯನ್ನು ಸಾರುತ್ತಿದ್ದ ನೋಹನನ್ನು ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ರಕ್ಷಿಸಿದರು. ದೇವರು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದರು. ದೇವರು ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದರು. ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ, ಕೇಳುತ್ತಾ, ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು. ಕರ್ತದೇವರು ಭಕ್ತರನ್ನು ಸಂಕಟದೊಳಗಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವರಾಗಿದ್ದಾರೆ. 10 ಆದರೆ ಮುಖ್ಯವಾಗಿ ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವರು.
ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ. ದುರಹಂಕಾರದಿಂದ ಸ್ವರ್ಗೀಯ ಜೀವಿಗಳನ್ನು ದೂಷಿಸುತ್ತಾರೆ. 11 ಆದರೂ ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಸ್ವರ್ಗೀಯ ಜೀವಿಗಳ ವಿರೋಧವಾಗಿ ಕರ್ತದೇವರ ಮುಂದೆ ಇವರು ನ್ಯಾಯತೀರ್ಪನ್ನು ತರುವುದಿಲ್ಲ. 12 ಆದರೆ ಬೇಟೆಗಾಗಿ ಹುಟ್ಟಿರುವ ವಿವೇಕಹೀನ ಮೃಗಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಮಾಡುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ಮೃಗಗಳಂತೆ ಸಂಪೂರ್ಣ ನಾಶವಾಗುವರು.
13 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯನ್ನು ಹಗಲಲ್ಲಿ ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಕಳಂಕಕ್ಕೂ, ನಿಂದೆಗೂ ಕಾರಣರಾಗಿದ್ದಾರೆ. 14 ಇವರು ಕಾಮುಕದಿಂದ ತುಂಬಿದ ಕಣ್ಣು ಮತ್ತು ಪಾಪವನ್ನು ಬಿಡಲೊಲ್ಲದ ಚಪಲಚಿತ್ತರೂ ಮರುಳುಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. 15 ಇವರು ನೇರವಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. 16 ಆದರೆ ಅವನ ದುಷ್ಟತನಕ್ಕೆ ಖಂಡನೆಯಾಯಿತು. ಮೂಕ ಕತ್ತೆಯು*ನೋಡಿರಿ, ಅರಣ್ಯ 22:28-35 ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿಮಾಡಿತು.
17 ಈ ಸುಳ್ಳು ಬೋಧಕರು ನೀರಿಲ್ಲದ ಬಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ಕಾರ್ಗತ್ತಲು ಇಟ್ಟಿರುವುದು. 18 ತಪ್ಪಾದ ಮಾರ್ಗದಲ್ಲಿ ಬಾಳುವವರಿಂದ ತಪ್ಪಿಸಿಕೊಂಡವರನ್ನು ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಅವರನ್ನು ಮರುಳುಗೊಳಿಸುತ್ತಾರೆ. 19 ಇಂಥವರು ಸ್ವಾತಂತ್ರ್ಯಕೊಡುತ್ತೇವೆಂದು ಅವರಿಗೆ ವಾಗ್ದಾನ ಮಾಡುತ್ತಾರೆ. ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತು ಹೋಗಿರುವನೋ, ಅವನು ಅದರ ದಾಸತ್ವದೊಳಗಿರುವನಷ್ಟೆ. 20 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನಹೊಂದಿ ಲೋಕದ ಮಾಲಿನ್ಯಗಳನ್ನು ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. 21 ಅವರು ನೀತಿಮಾರ್ಗವನ್ನು ತಿಳಿದುಕೊಂಡ ಮೇಲೆ ತಮಗೆ ಕೊಡಲಾದ ಪವಿತ್ರ ಆಜ್ಞೆಯಿಂದ ತೊಲಗಿ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು. 22 “ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ತಿರುಗಿಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡಲು ತಿರುಗಿಕೊಂಡಿತು!”ಜ್ಞಾನೋಕ್ತಿ 26:11 ಎಂಬ ನಿಜವಾದ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.

*2:16 ನೋಡಿರಿ, ಅರಣ್ಯ 22:28-35

2:22 ಜ್ಞಾನೋಕ್ತಿ 26:11