7
ನ್ಯಾಯಸಭೆಗೆ ಸ್ತೆಫನನ ಉಪನ್ಯಾಸ
ಆಗ ಮಹಾಯಾಜಕನು, “ಈ ಸಂಗತಿಗಳು ನಿಜವೋ?” ಎಂದು ಸ್ತೆಫನನನ್ನು ಪ್ರಶ್ನಿಸಿದನು.
ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ*ಅಥವಾ ಖಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು, ‘ನಿನ್ನ ಸ್ವದೇಶವನ್ನು ಬಂಧುಗಳನ್ನು ಬಿಟ್ಟು, ನಾನು ನಿನಗೆ ತೋರಿಸುವ ನಾಡಿಗೆ ಹೋಗು,’ಆದಿ 12:1 ಎಂದು ಹೇಳಿದರು.
“ಅದರಂತೆ ಅಬ್ರಹಾಮನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿಅಥವಾ ಖಾರಾನಿನಲ್ಲಿ ಬಂದು ನೆಲೆಸಿದನು. ಅವನ ತಂದೆಯ ಮರಣದ ನಂತರ ನೀವು ಈಗ ವಾಸಿಸುತ್ತಿರುವ ಈ ನಾಡಿಗೆ ದೇವರು ಅವನನ್ನು ಬರಮಾಡಿದರು. ದೇವರು ಅವನಿಗೆ ಇಲ್ಲಿ ಕಾಲಿಡುವಷ್ಟು ಸ್ಥಳವನ್ನಾಗಲಿ, ಯಾವುದೇ ಬಾಧ್ಯಸ್ತಿಕೆಯನ್ನಾಗಲಿ ಕೊಡಲಿಲ್ಲ. ಆದರೆ ಅಬ್ರಹಾಮನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ಅವನೂ ಅವನ ನಂತರ ಅವನ ಸಂತತಿಯವರೂ ದೇಶವನ್ನು ಹೊಂದುವರೆಂದು ದೇವರು ಅವನಿಗೆ ವಾಗ್ದಾನ ಮಾಡಿದರು. ಇದಲ್ಲದೆ ದೇವರು ಅಬ್ರಹಾಮನೊಂದಿಗೆ ಮಾತನಾಡಿ, ‘ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು. ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು. ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ಅನಂತರ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು,’§ಆದಿ 15:13,14 ಎಂದು ದೇವರು ಹೇಳಿದರು. ಆಮೇಲೆ ದೇವರು ಅಬ್ರಹಾಮನಿಗೆ ಸುನ್ನತಿಯ ಒಡಂಬಡಿಕೆಯನ್ನೂ ಕೊಟ್ಟರು. ಅಬ್ರಹಾಮನಿಗೆ ಇಸಾಕನು ಜನಿಸಿದನು. ಇಸಾಕನು ಜನಿಸಿದ ಎಂಟನೆಯ ದಿನ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿಸಿದನು. ಅನಂತರ ಇಸಾಕನಿಗೆ ಯಾಕೋಬನು ಜನಿಸಿದನು. ಯಾಕೋಬನು ನಮ್ಮ ಹನ್ನೆರಡು ಮಂದಿ ಪಿತೃಗಳಿಗೆ ತಂದೆಯಾದನು.
“ಈ ಪಿತೃಗಳು ಯೋಸೇಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗಿದ್ದು, 10 ಅವನನ್ನು ಎಲ್ಲಾ ಸಂಕಟಗಳಿಂದ ಬಿಡಿಸಿದರು. ದೇವರು ಯೋಸೇಫನಿಗೆ ಜ್ಞಾನವನ್ನು ಕೊಟ್ಟು ಈಜಿಪ್ಟಿನ ಅರಸನಾದ ಫರೋಹನ ಮೆಚ್ಚುಗೆಗೆ ಪಾತ್ರನಾಗುವಂತೆ ಮಾಡಿದರು. ಹೀಗೆ ಯೋಸೇಫನನ್ನು ಈಜಿಪ್ಟ್ ದೇಶದ ಮೇಲೆಯೂ ತನ್ನ ಅರಮನೆಯ ಮೇಲೆಯೂ ಅಧಿಕಾರಿಯನ್ನಾಗಿ ಫರೋಹನು ನೇಮಿಸಿದನು.
11 “ಆ ಕಾಲದಲ್ಲಿ ಈಜಿಪ್ಟ್ ಮತ್ತು ಕಾನಾನ್ ದೇಶಗಳ ಎಲ್ಲಾ ಕಡೆಗಳಲ್ಲಿಯೂ ಕ್ಷಾಮ ಬಂದು ಜನರು ಬಹಳ ಬಾಧೆಪಟ್ಟರು, ನಮ್ಮ ಪಿತೃಗಳಿಗೆ ಆಹಾರ ದೊರೆಯದೇ ಹೋಯಿತು. 12 ಈಜಿಪ್ಟಿನಲ್ಲಿ ದವಸಧಾನ್ಯ ದೊರೆಯುವುದೆಂದು ಯಾಕೋಬನಿಗೆ ತಿಳಿದುಬಂದಾಗ, ಅವನು ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು. 13 ಅವರು ಎರಡನೆಯ ಸಾರಿ ಅಲ್ಲಿಗೆ ಹೋದಾಗ, ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದನು. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ಗೊತ್ತಾಯಿತು. 14 ಇದಾದನಂತರ, ಯೋಸೇಫನು ತನ್ನ ತಂದೆ ಯಾಕೋಬನನ್ನು ಅವನ ಕುಟುಂಬದವರೆಲ್ಲರನ್ನೂ, ಒಟ್ಟು ಎಪ್ಪತ್ತೈದು ಜನರನ್ನು ಕರೆಕಳುಹಿಸಿದನು. 15 ಆಗ ಯಾಕೋಬನು ಈಜಿಪ್ಟಿಗೆ ಹೋದನು, ಅಲ್ಲಿಯೇ ಅವನೂ ನಮ್ಮ ಪಿತೃಗಳೂ ಮೃತರಾದರು. 16 ಅವರ ಮೃತಶರೀರವನ್ನು ಶೇಕೆಮಿಗೆ ತಂದರು. ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಕ್ರಯಕೊಟ್ಟು ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಟ್ಟರು.
17 “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರುವ ಕಾಲವು ಹತ್ತಿರ ಬಂದಾಗ, ಈಜಿಪ್ಟಿನಲ್ಲಿ ನಮ್ಮ ಜನರ ಸಂಖ್ಯೆ ಬಹಳ ಹೆಚ್ಚಾಯಿತು. 18 ಆಗ, ‘ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.’*ವಿಮೋ 1:8 19 ಆ ಅರಸನು ನಮ್ಮ ಜನರೊಂದಿಗೆ ಕುಯುಕ್ತಿಯಿಂದ ವರ್ತಿಸುತ್ತಾ, ಅವರ ಕೂಸುಗಳು ಸಾಯುವಂತೆ ಬಿಸಾಡಿಬಿಡಬೇಕೆಂದು, ನಮ್ಮ ಪಿತೃಗಳನ್ನು ಕಠಿಣವಾಗಿ ಹಿಂಸಿಸಿದನು.
20 “ಆ ಸಮಯದಲ್ಲಿಯೇ ಮೋಶೆ ಜನಿಸಿದನು. ಅವನು ದೇವರ ದೃಷ್ಟಿಯಲ್ಲಿ ಸುಂದರನಾಗಿದ್ದನು. ಮೂರು ತಿಂಗಳುಗಳ ಕಾಲ ಅವನು ತನ್ನ ತಂದೆಯ ಮನೆಯಲ್ಲೇ ಬೆಳೆದನು. 21 ಆಮೇಲೆ ಅವನನ್ನು ಮನೆಯಿಂದ ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ತೆಗೆದುಕೊಂಡು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಮೋಶೆಯು ಈಜಿಪ್ಟಿನವರ ಸಕಲ ವಿದ್ಯೆಗಳಲ್ಲಿ ತರಬೇತಿ ಹೊಂದಿ, ಮಾತಿನಲ್ಲಿಯೂ ಕೃತ್ಯದಲ್ಲಿಯೂ ಸಮರ್ಥನಾದನು.
23 “ಮೋಶೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಬಂಧುಗಳಾದ ಇಸ್ರಾಯೇಲ್ ಪುತ್ರರನ್ನು ಸಂದರ್ಶಿಸಬೇಕೆಂದು ತೀರ್ಮಾನಿಸಿದನು. 24 ತನ್ನ ಬಂಧುಗಳಲ್ಲಿ ಒಬ್ಬನನ್ನು ಈಜಿಪ್ಟಿನವನೊಬ್ಬನು ಹೊಡೆಯುತ್ತಿರುವುದನ್ನು ಕಂಡು, ಮೋಶೆ ಆ ಈಜಿಪ್ಟಿನವನನ್ನು ಕೊಂದುಹಾಕಿ ಸೇಡು ತೀರಿಸಿದನು. 25 ದೇವರು ಸ್ವಜನರಿಗೆ ತನ್ನ ಮೂಲಕವಾಗಿ ಬಿಡುಗಡೆಯನ್ನು ಕೊಡುವನೆಂದು ಅವರು ಅರ್ಥ ಮಾಡಿಕೊಳ್ಳುವರೆಂದು ಮೋಶೆ ಭಾವಿಸಿದ್ದನು. ಸ್ವಜನರೋ, ಇದನ್ನು ಅರ್ಥಮಾಡಿಕೊಳ್ಳಲಿಲ್ಲ. 26 ಮರುದಿನ ಇಬ್ಬರು ಇಸ್ರಾಯೇಲರು ಜಗಳವಾಡುತ್ತಿರುವುದನ್ನು ಮೋಶೆ ಕಂಡು, ‘ಗೆಳೆಯರೇ, ನೀವು ಸಹೋದರರಲ್ಲವೇ; ಒಬ್ಬರಿಗೊಬ್ಬರು ಏಕೆ ಜಗಳಮಾಡುತ್ತಿದ್ದೀರಿ?’ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.
27 “ಆದರೆ ಹೊಡೆಯುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು? 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ವಿಮೋ 2:14 ಎಂದು ಕೇಳಿದನು. 29 ಮೋಶೆ ಇದನ್ನು ಕೇಳಿ, ಮಿದ್ಯಾನಿಗೆ ಓಡಿಹೋದನು. ಅಲ್ಲಿ ಪರದೇಶದವನಂತೆ ಬದುಕಿ, ಇಬ್ಬರು ಗಂಡು ಮಕ್ಕಳನ್ನು ಪಡೆದನು.
30 “ನಲವತ್ತು ವರ್ಷಗಳು ಗತಿಸಿದ ತರುವಾಯ ಸೀನಾಯಿ ಪರ್ವತದ ಮರುಭೂಮಿಯಲ್ಲಿ ಉರಿಯುವ ಪೊದೆಯಲ್ಲಿ ದೇವದೂತನೊಬ್ಬನು ಮೋಶೆಗೆ ದರ್ಶನ ಕೊಟ್ಟನು. 31 ಇದನ್ನು ಮೋಶೆ ಕಂಡಾಗ ಆ ನೋಟಕ್ಕೆ ಅತ್ಯಾಶ್ಚರ್ಯಪಟ್ಟನು. ಅದನ್ನು ಸಮೀಪದಿಂದ ನೋಡಲು ಹೊರಟಾಗ, ಕರ್ತದೇವರ ಧ್ವನಿಯನ್ನು ಅವನು ಕೇಳಿಸಿಕೊಂಡನು. 32 ‘ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ, ಇಸಾಕನ, ಯಾಕೋಬನ ದೇವರು,’ವಿಮೋ 3:6 ಎಂಬ ವಾಣಿಯನ್ನು ಕೇಳಿಸಿಕೊಂಡ ಮೋಶೆ ಭಯದಿಂದ ನಡುಗುತ್ತಾ ನೇರವಾಗಿ ದೃಷ್ಟಿಸಲು ಧೈರ್ಯಗೊಳ್ಳಲಿಲ್ಲ.
33 “ಆಗ ಕರ್ತದೇವರು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ. 34 ಈಜಿಪ್ಟಿನಲ್ಲಿ ನನ್ನ ಜನರ ದುರವಸ್ಥೆಯನ್ನು ನಾನು ಕಂಡಿದ್ದೇನೆ. ಅವರ ನರಳಾಟವನ್ನು ಕೇಳಿಸಿಕೊಂಡಿದ್ದೇನೆ. ಅವರನ್ನು ಬಿಡುಗಡೆ ಮಾಡಲು ನಾನಿಳಿದು ಬಂದಿದ್ದೇನೆ. ಇಲ್ಲಿ ಬಾ, ನಾನು ನಿನ್ನನ್ನು ಹಿಂದಿರುಗಿ ಈಜಿಪ್ಟಿಗೆ ಕಳುಹಿಸುತ್ತೇನೆ,’§ವಿಮೋ 3:5-10 ಎಂದರು.
35 “ ‘ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?’ ಎಂಬ ಮಾತುಗಳಿಂದ ಇಸ್ರಾಯೇಲರು ತಿರಸ್ಕರಿಸಿದಂಥ ಆ ಮೋಶೆಯೇ ಇವನು. ಉರಿಯುವ ಪೊದೆಯಲ್ಲಿ ದರ್ಶನ ಕೊಟ್ಟು ದೇವದೂತನ ಮುಖಾಂತರವಾಗಿ ದೇವರೇ ಇವನನ್ನು ಅವರ ಅಧಿಕಾರಿಯನ್ನಾಗಿಯೂ ವಿಮೋಚಕನ್ನಾಗಿಯೂ ಕಳುಹಿಸಿದರು. 36 ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.
37 “ ‘ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ಸ್ವಂತ ಜನರೊಳಗಿಂದಲೇ ದೇವರು ನಿಮಗೆ ಕಳುಹಿಸುವರು,’*ಧರ್ಮೋ 18:15 ಎಂದು ಇಸ್ರಾಯೇಲರಿಗೆ ಹೇಳಿದವನು ಈ ಮೋಶೆಯೇ. 38 ಇವನು ಇಸ್ರಾಯೇಲರು ಅರಣ್ಯದಲ್ಲಿ ದೊಡ್ಡಗುಂಪಾಗಿದ್ದಾಗ ಅವರ ಮಧ್ಯದಲ್ಲಿದ್ದವನು. ಸೀನಾಯಿ ಬೆಟ್ಟದ ಮೇಲೆ ಅವನೊಂದಿಗೆ ಮಾತನಾಡಿದ ದೇವದೂತನೊಂದಿಗಿದ್ದವನು. ಇವನು ನಮ್ಮ ಪಿತೃಗಳೊಂದಿಗೂ ಮಧ್ಯಸ್ಥನಾಗಿ ಇದ್ದವನು. ನಮಗೆ ಕೊಡುವುದಕ್ಕಾಗಿ ಜೀವ ವಾಕ್ಯಗಳನ್ನು ಸ್ವೀಕರಿಸಿದವನು ಈ ಮೋಶೆಯೇ.
39 “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಅವರು ಅವನನ್ನು ತಿರಸ್ಕರಿಸಿ, ತಮ್ಮ ಹೃದಯಗಳಲ್ಲಿ ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದಿದ್ದರು. 40 ಅವರು ಆರೋನನಿಗೆ, ‘ನಮಗೆ ಮುಂದಾಗಿ ಹೋಗುವುದಕ್ಕಾಗಿ ನಮಗೆ ದೇವರುಗಳನ್ನು ಮಾಡಿಕೊಡು, ನಮ್ಮನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು,’ವಿಮೋ 32:1 ಎಂದರು. 41 ಆ ಸಮಯದಲ್ಲಿ ಅವರು ಕರುವಿನ ರೂಪದಲ್ಲಿ ಒಂದು ವಿಗ್ರಹ ಮಾಡಿಕೊಂಡರು. ಅದರ ಮುಂದೆ ತಮ್ಮ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಲ್ಲಿ ಹರ್ಷಗೊಂಡರು. 42 ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ:
“ ‘ಇಸ್ರಾಯೇಲಿನ ಮನೆತನದವರೇ,
ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.
43 ಮೊಲೋಖನ ಗುಡಾರವನ್ನೂ
ರೊಂಫಾ ದೇವತೆಯ ನಕ್ಷತ್ರವನ್ನೂ
ನೀವು ನಿರ್ಮಿಸಿಕೊಂಡ ವಿಗ್ರಹಗಳನ್ನೂ ಪೂಜಿಸಿದಿರಿ.
ಆದ್ದರಿಂದ ಬಾಬಿಲೋನಿನ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ,’ಆಮೋ 5:25-27
ಎಂದು ಬರೆದಿರುವ ಪ್ರಕಾರ ಇದು ನೆರವೇರಿತು.
44 “ಅರಣ್ಯದಲ್ಲಿ ದೇವದರ್ಶನ ಗುಡಾರ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ದೇವರು ಮೋಶೆಗೆ ಆಜ್ಞಾಪಿಸಿದಂತೆ, ಅವನಿಗೆ ತೋರಿಸಿದ ಮಾದರಿಯಂತೆ ಅದನ್ನು ರೂಪಿಸಲಾಗಿತ್ತು. 45 ನಮ್ಮ ಪಿತೃಗಳು ದೇವದರ್ಶನ ಗುಡಾರವನ್ನು ಪಡೆದುಕೊಂಡು, ಯೆಹೋಶುವನ ನಾಯಕತ್ವದ ಕೆಳಗೆ ದೇವರು ಅವರೆದುರಿನಲ್ಲಿ ಹೊರದೊಬ್ಬಿದ ದೇಶಗಳ ನಾಡನ್ನು ವಶಪಡಿಸಿಕೊಂಡಾಗ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದರು. ದಾವೀದನ ಕಾಲದವರೆಗೂ ಆ ಗುಡಾರವು ಅಲ್ಲಿಯೇ ಇತ್ತು. 46 ದಾವೀದನು ದೇವರ ದಯೆಯನ್ನು ಹೊಂದಿದವನಾಗಿ ಯಾಕೋಬನ ದೇವರಿಗೆ ದೇವಾಲಯ ಕಟ್ಟಲು ತನಗೆ ಅಪ್ಪಣೆಯಾಗಬೇಕೆಂದು ದೇವರಿಗೆ ಕೇಳಿಕೊಂಡನು. 47 ಆದರೆ ದೇವರಿಗಾಗಿ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
48 “ಹೀಗಿದ್ದರೂ ಮಹೋನ್ನತ ದೇವರು ಮಾನವರು ನಿರ್ಮಿಸಿದ ಆಲಯಗಳಲ್ಲಿ ವಾಸಮಾಡುವುದಿಲ್ಲ. ಪ್ರವಾದಿಯು ಹೇಳಿದಂತೆ:
49 “ ‘ಆಕಾಶವೇ ನನ್ನ ಸಿಂಹಾಸನ,
ಭೂಮಿಯೇ ನನ್ನ ಪಾದ ಪೀಠ.
ನೀವು ನನಗಾಗಿ ಎಂಥಾ ಆಲಯವನ್ನು ಕಟ್ಟುವಿರಿ?
ಎಲ್ಲಿ ನನ್ನ ವಿಶ್ರಾಂತಿಯ ಸ್ಥಳ?
50 ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯಿಂದ ಅಲ್ಲವೇ?’§ಯೆಶಾಯ 66:1,2
ಎಂದು ಕರ್ತದೇವರು ಪ್ರಶ್ನಿಸುತ್ತಾರೆ.
51 “ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ! 52 ನಿಮ್ಮ ಪಿತೃಗಳು ಹಿಂಸೆಪಡಿಸದೆ ಇದ್ದ ಪ್ರವಾದಿ ಒಬ್ಬನಾದರೂ ಇರುವನೇ? ನೀತಿವಂತರಾಗಿರುವ ಒಬ್ಬರು ಬರಲಿದ್ದಾರೆಂದು ಮುಂತಿಳಿಸಿದವರನ್ನು ಸಹ ಅವರು ಕೊಂದುಹಾಕಿದರು. ಈಗ ನೀವೇ ಅವರನ್ನು ಹಿಡಿದುಕೊಟ್ಟು ಕೊಲೆಮಾಡಿದ್ದೀರಿ. 53 ದೇವದೂತರ ಮುಖಾಂತರವಾಗಿ ಜಾರಿಗೆ ಬಂದ ಮೋಶೆಯ ನಿಯಮವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ,” ಎಂದು ಹೇಳಿದನು.
ಸ್ತೆಫನನ ಮೇಲೆ ಕಲ್ಲು ಎಸೆದದ್ದು
54 ಈ ಮಾತುಗಳನ್ನು ಕೇಳಿದಾಗ ಅವರು ರೋಷವುಳ್ಳವರಾಗಿ, ಅವನ ಕಡೆಗೆ ನೋಡಿ, ತಮ್ಮ ಹಲ್ಲುಗಳನ್ನು ಕಡಿದರು. 55 ಆದರೆ ಪವಿತ್ರಾತ್ಮಭರಿತನಾದ ಸ್ತೆಫನನು ಪರಲೋಕದ ಕಡೆಗೆ ನೋಡಿ, ದೇವರ ಮಹಿಮೆಯನ್ನೂ ದೇವರ ಬಲಗಡೆಯಲ್ಲಿ ಯೇಸು ನಿಂತುಕೊಂಡಿರುವುದನ್ನೂ ಕಂಡನು. 56 “ನೋಡಿರಿ, ಪರಲೋಕ ತೆರೆದಿರುವುದನ್ನೂ ಮನುಷ್ಯಪುತ್ರ ಆಗಿರುವ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ಕಾಣುತ್ತಿದ್ದೇನೆ,” ಎಂದನು.
57 ಈ ಮಾತಿಗೆ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು, ಆರ್ಭಟಿಸುತ್ತಾ, ಅವನ ಕಡೆಗೆ ಓಡಿಹೋಗಿ ಅವನನ್ನು ಹೊಡೆದರು. 58 ಅವನನ್ನು ಪಟ್ಟಣದ ಹೊರಗೆ ಎಳೆದುಕೊಂಡು ಹೋಗಿ ಅವನ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಾಕ್ಷಿಗಳು ತಮ್ಮ ಬಟ್ಟೆಗಳನ್ನು ಸೌಲ ಎಂಬ ಹೆಸರಿನ ಒಬ್ಬ ಯುವಕನ ಪಾದಗಳ ಬಳಿಯಲ್ಲಿಟ್ಟಿದ್ದರು.
59 ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು. 60 ಅನಂತರ ಮೊಣಕಾಲೂರಿ, “ಕರ್ತ ಯೇಸುವೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ,” ಎಂದು ಗಟ್ಟಿಯಾಗಿ ಕೂಗಿದನು. ಇದನ್ನು ಹೇಳಿದ ಮೇಲೆ, ಪ್ರಾಣಬಿಟ್ಟನು.

*7:2 ಅಥವಾ ಖಾರಾನಿನಲ್ಲಿ

7:3 ಆದಿ 12:1

7:4 ಅಥವಾ ಖಾರಾನಿನಲ್ಲಿ

§7:7 ಆದಿ 15:13,14

*7:18 ವಿಮೋ 1:8

7:28 ವಿಮೋ 2:14

7:32 ವಿಮೋ 3:6

§7:34 ವಿಮೋ 3:5-10

*7:37 ಧರ್ಮೋ 18:15

7:40 ವಿಮೋ 32:1

7:43 ಆಮೋ 5:25-27

§7:50 ಯೆಶಾಯ 66:1,2