24
ಫೇಲಿಕ್ಸನ ಮುಂದೆ ವಿಚಾರಣೆ
ಐದು ದಿನಗಳ ನಂತರ ಮಹಾಯಾಜಕ ಅನನೀಯನು ಕೆಲವು ಹಿರಿಯರೊಂದಿಗೆ ಕೈಸರೈಯಕ್ಕೆ ಬಂದನು. ತನ್ನೊಂದಿಗೆ ಟೆರ್ಟುಲಸ್ ಎಂಬ ವಕೀಲನನ್ನು ಕರೆದುಕೊಂಡು ಬಂದು, ರಾಜ್ಯಪಾಲನಿಗೆ ಪೌಲನ ವಿರೋಧವಾಗಿ ದೂರುಗಳನ್ನಿಟ್ಟರು. ಪೌಲನನ್ನು ಒಳಗೆ ಕರೆದುಕೊಂಡು ಬಂದಾಗ, ಟೆರ್ಟುಲಸನು ಫೇಲಿಕ್ಸನ ಮುಂದೆ ತಪ್ಪು ಹೊರಿಸಲು ಪ್ರಾರಂಭಿಸಿ, “ಸನ್ಮಾನಿತ ಫೇಲಿಕ್ಸರೇ, ನಿಮ್ಮ ಮೂಲಕ ಬಹಳ ದಿನಗಳಿಂದ ಶಾಂತಿಯನ್ನು ಅನುಭವಿಸುತ್ತಿದ್ದೇವೆ. ನಿಮ್ಮ ಮುಂದಾಲೋಚನೆಯಿಂದ ದೇಶಗಳಿಗೆ ಅನೇಕ ಸುಧಾರಣೆಗಳನ್ನು ತಂದಿರುವಿರಿ. ಎಲ್ಲಾ ಕಡೆಗಳಲ್ಲಿಯೂ ಎಲ್ಲಾ ವಿಧದಲ್ಲಿಯೂ ಬಹು ಕೃತಜ್ಞತೆಯಿಂದ ಇದನ್ನು ಸ್ವಾಗತಿಸುತ್ತೇವೆ. ಆದರೆ ನಿಮಗೆ ಹೆಚ್ಚು ತೊಂದರೆಕೊಟ್ಟು ಬೇಸರಪಡಿಸದೇ ನಾನು ಸಂಕ್ಷೇಪವಾಗಿ ಹೇಳುವ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.
“ಜಗತ್ತಿನಲ್ಲಿ ಇರುವ ಯೆಹೂದ್ಯರ ಮಧ್ಯದಲ್ಲಿ ದಂಗೆಯೆಬ್ಬಿಸಿ ಪೌಲನೆಂಬ ಈ ಮನುಷ್ಯನು ತೊಂದರೆ ಕೊಡುವವನಾಗಿದ್ದಾನೆಂತಲೂ ನಜರೇತಿನವರ ಪಂಗಡಕ್ಕೆ ಇವನು ನಾಯಕನೆಂದೂ ನಾವು ಕಂಡೆವು. ಇವನು ದೇವಾಲಯವನ್ನು ಭ್ರಷ್ಟಮಾಡಲು ಪ್ರಯತ್ನಿಸಿದ್ದರಿಂದ ನಾವು ಇವನನ್ನು ಬಂಧಿಸಿದೆವು. ಆದರೆ ಸಹಸ್ರಾಧಿಪತಿ ಲೂಸ್ಯನು ಮಧ್ಯೆಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡು ಹೋದನು.*ಕೆಲವು ಮೂಲ ಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ. ನೀವೇ ಪೌಲನನ್ನು ವಿಚಾರಣೆ ಮಾಡುವುದರ ಮೂಲಕ ನಾವು ಇವನಿಗೆ ವಿರೋಧವಾಗಿ ತಂದಿರುವ ದೂರುಗಳೆಲ್ಲವೂ ಸತ್ಯವೆಂದು ನಿಮಗೇ ಗೊತ್ತಾಗುವುದು.”
ಆಗ ಈ ಸಂಗತಿಗಳು ಸತ್ಯವಾದವುಗಳೆಂದು ಯೆಹೂದ್ಯರು ಸಹ ಸೇರಿಕೊಂಡು ವಕೀಲನಿಗೆ ದೋಷಾರೋಪಣೆ ಮಾಡಿದರು.
10 ರಾಜ್ಯಪಾಲನು ಪೌಲನಿಗೆ ಮಾತನಾಡಬೇಕೆಂದು ಸನ್ನೆಮಾಡಿದಾಗ, ಪೌಲನು ಕೊಟ್ಟ ಉತ್ತರವಿದು: “ಅನೇಕ ವರ್ಷಗಳಿಂದ ತಾವು ಈ ದೇಶದ ಮೇಲೆ ನ್ಯಾಯಾಧೀಶರಾಗಿರುವುದನ್ನು ನಾನು ಬಲ್ಲೆ. ಆದ್ದರಿಂದ ನಾನು ಸಂತೋಷದಿಂದ ನನ್ನ ಪ್ರತಿವಾದವನ್ನು ತಮ್ಮ ಮುಂದಿಡುತ್ತೇನೆ. 11 ದೇವರ ಆರಾಧನೆ ಮಾಡಲು ಯೆರೂಸಲೇಮಿಗೆ ಹೋಗಿ ಇನ್ನೂ ಹನ್ನೆರಡು ದಿನಗಳು ಮಾತ್ರವಾಯಿತು. ಇದನ್ನು ತಾವು ವಿಚಾರಿಸಿ ತಿಳಿದುಕೊಳ್ಳಬಹುದು. 12 ದೇವಾಲಯದಲ್ಲಾಗಲಿ, ಸಭಾಮಂದಿರದಲ್ಲಾಗಲಿ, ಪಟ್ಟಣದ ಯಾವುದೇ ಸ್ಥಳದಲ್ಲಾಗಲಿ ನಾನು ವಾಗ್ವಾದ ಮಾಡುತ್ತಿದ್ದುದ್ದನ್ನು ಅಥವಾ ಜನರ ಗುಂಪನ್ನು ಕೂಡಿಸುವುದನ್ನು ಇವರು ಕಂಡಿಲ್ಲ. 13 ಈಗ ಅವರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳನ್ನು ನಿಮ್ಮ ಮುಂದೆ ಅವರು ರುಜುಮಾಡಿ ತೋರಿಸಲಾರರು. 14 ಆದರೂ ಅವರು ಒಂದು ಪಂಗಡ ಎಂದು ಕರೆಯುವ ಮಾರ್ಗದ ಅನುಯಾಯಿಯಾಗಿ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮೋಶೆಯ ನಿಯಮ ಒಪ್ಪಿಕೊಳ್ಳುವಂಥದೆಲ್ಲವನ್ನೂ ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವುದೆಲ್ಲವನ್ನೂ ನಾನು ನಂಬುತ್ತೇನೆ. 15 ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಿದೆಯೆಂದು ಈ ಜನರು ಎದುರುನೋಡುವಂತೆಯೇ ದೇವರಲ್ಲಿ ನನಗೂ ನಿರೀಕ್ಷೆಯಿದೆ. 16 ಆದ್ದರಿಂದ ದೇವರ ಮುಂದೆಯೂ ಜನರ ಮುಂದೆಯೂ ನನ್ನ ಮನಸ್ಸಾಕ್ಷಿಯನ್ನು ಯಾವಾಗಲೂ ಶುದ್ಧವಾಗಿಟ್ಟುಕೊಂಡಿರಲು ಪರಿಶ್ರಮಿಸುತ್ತಿದ್ದೇನೆ.
17 “ಅನೇಕ ವರ್ಷಗಳ ನಂತರ ದಾನಧರ್ಮಗಳನ್ನೂ ಕಾಣಿಕೆಗಳನ್ನೂ ನನ್ನ ಸ್ವದೇಶದವರಿಗೆ ಕೊಡಲು ಬಂದೆನು. 18 ನಾನು ಇದನ್ನು ಮಾಡುತ್ತಾ ದೇವಾಲಯದಲ್ಲಿದ್ದಾಗ ನಾನು ಶುದ್ಧಾಚಾರ ಮಾಡುತ್ತಿರುವುದನ್ನು ಇವರು ಕಂಡರು. ನನ್ನೊಂದಿಗೆ ಜನರ ಗುಂಪು ಇರಲಿಲ್ಲ. ನಾನು ಗೊಂದಲವನ್ನೆಬ್ಬಿಸಲಿಲ್ಲ. 19 ಆದರೆ ಏಷ್ಯಾ ಪ್ರಾಂತದ ಕೆಲವು ಜನ ಯೆಹೂದ್ಯರು ಅಲ್ಲಿಗೆ ಬಂದಿದ್ದರು. ಅವರಿಗೆ ನನ್ನ ಮೇಲೆ ಏನಾದರೂ ವಿರೋಧವಿದ್ದರೆ, ಅವರು ನಿಮ್ಮ ಸನ್ನಿಧಿಯಲ್ಲಿ ಈಗ ಬಂದು ನನ್ನ ಮೇಲೆ ಅಪರಾಧ ಹೊರಿಸಲಿ. 20 ಇಲ್ಲವೆ ಇಲ್ಲಿಗೆ ಈಗ ಬಂದವರು ನಾನು ನ್ಯಾಯಸಭೆಯ ಮುಂದೆ ನಿಂತಾಗ ನನ್ನಲ್ಲಿ ಯಾವ ಅಪರಾಧವನ್ನು ಕಂಡರು ಎಂಬುದನ್ನು ಹೇಳಲಿ. 21 ‘ಇಂದು ನಾನು ನಿಮ್ಮ ಮುಂದೆ ನ್ಯಾಯವಿಚಾರಣೆಗೆ ನಿಂತಿರುವುದು ಸತ್ತವರ ಪುನರುತ್ಥಾನಕ್ಕೆ ಸಂಬಂಧಿಸಿದ್ದು,’ ಎಂದು ಅವರ ಮಧ್ಯದಲ್ಲಿ ನಿಂತು ಕೂಗಿದ್ದನ್ನು ಬಿಟ್ಟರೆ ಬೇರೆ ಏನನ್ನೂ ಇವರು ಹೇಳಲಾರರು,” ಎಂದನು.
22 ಈ ಮಾರ್ಗದ ವಿಷಯದ ಬಗ್ಗೆ ಬಹು ಸೂಕ್ಷ್ಮವಾಗಿ ತಿಳಿದುಕೊಂಡಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದಕ್ಕೆ ಹಾಕಿದನು. ಅನಂತರ ಅವನು, “ಸಹಸ್ರಾಧಿಪತಿ ಲೂಸ್ಯನು ಬಂದ ಮೇಲೆ ನಿನ್ನ ಈ ವ್ಯಾಜ್ಯ ತೀರ್ಮಾನಿಸುತ್ತೇನೆ,” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿಡಬೇಕೆಂತಲೂ ಅವನ ಸ್ನೇಹಿತರು ಅವನನ್ನು ಸಂದರ್ಶಿಸಲು ಅಡ್ಡಿಮಾಡಬಾರದೆಂತಲೂ ಶತಾಧಿಪತಿಗೆ ಆಜ್ಞೆಕೊಟ್ಟನು.
24 ಕೆಲವು ದಿನಗಳಾದ ತರುವಾಯ ಫೇಲಿಕ್ಸನು ಯೆಹೂದ್ಯಳಾದ ತನ್ನ ಪತ್ನಿ ದ್ರೂಸಿಲ್ಲಳೊಂದಿಗೆ ಬಂದನು. ಪೌಲನನ್ನು ಕರೆಕಳುಹಿಸಿ ಅವನು ಕ್ರಿಸ್ತ ಯೇಸುವಿನಲ್ಲಿ ನಂಬುವ ವಿಷಯವಾಗಿ ಮಾತನಾಡುವುದನ್ನು ಕೇಳಿದನು. 25 ನೀತಿ, ದಮೆ, ಬರಲಿಕ್ಕಿರುವ ನ್ಯಾಯವಿಚಾರಣೆಯ ಬಗ್ಗೆ ಪೌಲನು ವಿವರಿಸಿದಾಗ, ಫೇಲಿಕ್ಸ್ ಹೆದರಿಕೊಂಡವನಾಗಿ, “ಈಗ ಇಷ್ಟೇ ಸಾಕು! ಸದ್ಯಕ್ಕೆ ನೀನು ಹೋಗಬಹುದು. ಅನಂತರ ನಾನು ಸಮಯ ಸಿಕ್ಕಿದಾಗ ನಿನ್ನನ್ನು ಪುನಃ ಕರೆಯಿಸುತ್ತೇನೆ,” ಎಂದನು. 26 ಅದೇ ಸಮಯದಲ್ಲಿ ಅವನು ಪೌಲನು ತನಗೇನಾದರು ಹಣ ಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ ಅವನೊಂದಿಗೆ ಮಾತನಾಡುತ್ತಿದ್ದನು.
27 ಎರಡು ವರ್ಷಗಳು ಕಳೆದವು. ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ಎಂಬುವನು ರಾಜ್ಯಪಾಲನಾಗಿ ಬಂದನು. ಫೇಲಿಕ್ಸನು ಯೆಹೂದ್ಯರಿಗೆ ಮೆಚ್ಚುಗೆಯನ್ನು ಗಳಿಸಬಯಸಿದವನಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.

*24:7 ಕೆಲವು ಮೂಲ ಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.