10
ದೇವದೂತನ ದರ್ಶನ
1 ಪಾರಸಿಯ ಅರಸ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಪ್ರಕಟಣೆಯಾಯಿತು. ಅದರ ಸಂದೇಶವು ಸತ್ಯವಾದದ್ದು. ಅದು ಮಹಾ ಯುದ್ಧ ವಿಷಯವಾಗಿದೆ. ಸಂದೇಶದ ಅರ್ಥವು ಅವನಿಗೆ ಒಂದು ದರ್ಶನದಲ್ಲಿ ಬಂದಿತು.
2 ಆ ಸಮಯದಲ್ಲಿ ದಾನಿಯೇಲನೆಂಬ ನಾನು, ಮೂರು ವಾರಗಳವರೆಗೂ ದುಃಖಪಡುತ್ತಿದ್ದೆನು. 3 ಆ ಮೂರು ವಾರಗಳು ಕಳೆಯುವವರೆಗೂ, ನಾನು ರುಚಿಕರವಾದ ರೊಟ್ಟಿಯನ್ನು ತಿನ್ನಲಿಲ್ಲ. ಮಾಂಸವನ್ನಾದರೂ, ದ್ರಾಕ್ಷಾರಸವನ್ನಾದರೂ ನನ್ನ ಬಾಯಿಗೆ ಮುಟ್ಟಿಸಲಿಲ್ಲ. ನಾನು ಎಣ್ಣೆಯನ್ನು ಹಚ್ಚಿಕೊಳ್ಳಲೇ ಇಲ್ಲ.
4 ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ, ನಾನು ಟೈಗ್ರಿಸ್ ಎಂಬ ಮಹಾನದಿಯ ದಡದ ಮೇಲೆ ಇರುವಾಗ, 5 ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು. ಆಗ, ನಾರುಮಡಿಯನ್ನು ಧರಿಸಿದ್ದ ಒಬ್ಬ ಮನುಷ್ಯನನ್ನು ಕಂಡೆನು. ಆತನ ನಡುವು ಊಫಜಿನ ಅತ್ಯುತ್ತಮ ಬಂಗಾರದಿಂದ ಬಿಗಿದಿತ್ತು. 6 ಆತನ ದೇಹವು ಪೀತರತ್ನದ ಹಾಗೆಯೂ, ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ, ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ; ಆತನ ಮಾತುಗಳ ಶಬ್ದವು, ಜನಸಮೂಹದ ಸಪ್ಪಳದ ಹಾಗೆಯೂ ಇದ್ದವು.
7 ದಾನಿಯೇಲನೆಂಬ ನಾನು ಒಬ್ಬನೇ ಆ ದರ್ಶನವನ್ನು ನೋಡಿದೆನು. ನನ್ನ ಸಂಗಡವಿದ್ದ ಜನರು ಆ ದರ್ಶನವನ್ನು ನೋಡಲಿಲ್ಲ. ಆದರೆ ಅವರು ಭಯಭ್ರಾಂತರಾಗಿ ಓಡಿಹೋಗಿ ಅಡಗಿಕೊಂಡರು. 8 ನಾನು ಒಬ್ಬನೇ ಉಳಿದು, ಈ ಅದ್ಭುತ ದರ್ಶನವನ್ನು ನೋಡಿದೆನು. ನನ್ನಲ್ಲಿ ತ್ರಾಣವು ಇರಲಿಲ್ಲ. ನನ್ನ ಮುಖವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು. 9 ಆದರೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು. ಆತನ ಮಾತುಗಳ ಧ್ವನಿಯನ್ನು ಕೇಳಿದಾಗ, ಮುಖ ಕೆಳಗೆಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆ ಇತ್ತು.
10 ಒಂದು ಕೈ ನನ್ನನ್ನು ಮುಟ್ಟಿ, ನನ್ನ ಮೊಣಕಾಲುಗಳೂ, ನನ್ನ ಅಂಗೈಗಳೂ ನಡುಗುವಂತೆ ಮಾಡಿತು. 11 ಆತನು ನನಗೆ, “ದಾನಿಯೇಲನೇ, ಅತಿ ಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ಏಕೆಂದರೆ ನಾನು ಈಗ ನಿನ್ನ ಬಳಿಗೆ ಕಳುಹಿಸಲಾಗಿದ್ದೇನೆ,” ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಮೇಲೆ, ನಾನು ನಡುಗುತ್ತಲೇ ನಿಂತೆನು.
12 ಆಗ ಅವನು ನನಗೆ, “ದಾನಿಯೇಲನೇ, ನೀನು ಭಯಪಡಬೇಡ. ಏಕೆಂದರೆ ನೀನು ತಿಳಿದುಕೊಳ್ಳುವುದಕ್ಕೂ, ನಿನ್ನ ದೇವರ ಮುಂದೆ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ಪ್ರಾರ್ಥನೆಯು ದೇವರಿಗೆ ಮುಟ್ಟಿತು. ಆ ನಿನ್ನ ಮಾತುಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ. 13 ಆದರೆ ಪಾರಸಿಯ ರಾಜ್ಯದ ರಾಜಪುತ್ರನು ಇಪ್ಪತ್ತೊಂದು ದಿನ ನನ್ನನ್ನು ಎದುರಿಸಿ ನಿಂತನು. ಆದರೆ ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು. ಏಕೆಂದರೆ ನಾನು ಆ ಪಾರಸಿಯ ಅರಸನಿಂದ ತಡೆಹಿಡಿಯಲಾಗಿದ್ದೆನು. 14 ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಸಂಭವಿಸುವುದು ಎಂಬುದನ್ನು ತಿಳಿಸುವುದಕ್ಕೋಸ್ಕರ ನಾನೀಗ ಬಂದಿದ್ದೇನೆ. ಏಕೆಂದರೆ ದರ್ಶನವು ಮುಂದೆ ಬರಲಿಕ್ಕಿರುವ ಸಮಯವನ್ನು ಕುರಿತಾಗಿರುತ್ತದೆ,” ಎಂದನು.
15 ಅವನು ನನಗೆ ಈ ಮಾತುಗಳನ್ನು ಹೇಳುತ್ತಿದ್ದಾಗ, ನಾನು ನನ್ನ ಮುಖವನ್ನು ನೆಲದ ಕಡೆಗೆ ತಿರುಗಿಸಿ ಸುಮ್ಮನಿದ್ದೆನು. 16 ಆಗ ಮಾನವನಂತೆ ಇರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ನಾನು ಬಾಯಿತೆರೆದು ಮಾತನಾಡಿ, ನನ್ನ ಮುಂದೆ ನಿಂತಿದ್ದವನಿಗೆ, “ನನ್ನ ಒಡೆಯನೇ, ಆ ದರ್ಶನದ ನಿಮಿತ್ತ, ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ, ನಾನು ನಿತ್ರಾಣನಾಗಿದ್ದೇನೆ. 17 ನನ್ನ ಒಡೆಯನ ದಾಸನಾದ ನನ್ನಂಥವನು ನನ್ನ ಒಡೆಯನಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ, ಉಸಿರಾಡಿಸಲೂ ಆಗದು.”
18 ಆಮೇಲೆ ಪುನಃ ಮನುಷ್ಯನಂತಿದ್ದ ಒಬ್ಬ ನನ್ನನ್ನು ಬಲಪಡಿಸಿ, 19 “ಅತಿ ಪ್ರಿಯನೇ, ಭಯಪಡಬೇಡ, ನಿನಗೆ ಸಮಾಧಾನವಾಗಲಿ, ಬಲವಾಗಿರು, ಈಗ ಬಲಶಾಲಿಯಾಗಿರು,” ಎಂದನು.
ಅವನು ನನ್ನ ಸಂಗಡ ಮಾತನಾಡಿದಾಗ ನಾನು ಬಲವನ್ನು ಹೊಂದಿ, “ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ,” ಎಂದು ಹೇಳಿದೆನು.
20 ಅವನು, “ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ. ಈಗ ನಾನು ಪಾರಸಿಯದ ರಾಜಪುತ್ರನ ಸಂಗಡ ಯುದ್ಧಮಾಡಲು ಹಿಂದಿರುಗಬೇಕು. ನಾನು ಹೋದ ಮೇಲೆ, ಗ್ರೀಕಿನ ರಾಜಕುಮಾರನು ಬರುವನು. 21 ಆದರೆ ಸತ್ಯ ಗ್ರಂಥದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುತ್ತೇನೆ. ನಿಮ್ಮ ರಾಜಕುಮಾರನಾದ ಮೀಕಾಯೇಲನ ಹೊರತು ಮತ್ತೆ ಯಾರೂ ಅವರಿಗೆ ವಿರೋಧವಾಗಿ ನನಗೆ ಸಹಕಾರ ಕೊಡುವುದಿಲ್ಲ.”