16
ಹಾಗರಳು ಮತ್ತು ಇಷ್ಮಾಯೇಲ್
1 ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಹಾಗರಳೆಂಬ ಈಜಿಪ್ಟಿನ ದಾಸಿ ಇದ್ದಳು. 2 ಆಗ ಸಾರಯಳು ಅಬ್ರಾಮನಿಗೆ, “ನಾನು ಮಕ್ಕಳನ್ನು ಹೆರದಂತೆ ಯೆಹೋವ ದೇವರು ನನಗೆ ಅಡ್ಡಿ ಮಾಡಿದ್ದಾರೆ. ದಯಮಾಡಿ ನೀನು ನನ್ನ ದಾಸಿಯ ಬಳಿಗೆ ಹೋಗು. ಒಂದು ವೇಳೆ ನಾನು ಅವಳ ಮೂಲಕ ಕುಟುಂಬವನ್ನು ಕಟ್ಟಬಲ್ಲೆ,” ಎಂದಳು.
ಅಬ್ರಾಮನು ಸಾರಯಳ ಮಾತನ್ನು ಕೇಳಿದನು. 3 ಅಬ್ರಾಮನು ಕಾನಾನ್ ದೇಶದಲ್ಲಿ ಹತ್ತು ವರ್ಷ ವಾಸಿಸಿದ ತರುವಾಯ, ಅಬ್ರಾಮನ ಹೆಂಡತಿಯಾದ ಸಾರಯಳು ಈಜಿಪ್ಟಿನವಳಾದ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು. 4 ಅವನು ಹಾಗರಳನ್ನು ಕೂಡಿದನು. ಆಗ ಅವಳು ಗರ್ಭಿಣಿಯಾದಳು.
ತಾನು ಗರ್ಭಿಣಿಯಾದೆನೆಂದು ತಿಳಿದಾಗ, ಅವಳು ತನ್ನ ಯಜಮಾನಿಯನ್ನು ತಿರಸ್ಕರಿಸಿದಳು. 5 ಸಾರಯಳು ಅಬ್ರಾಮನಿಗೆ, “ನನಗೆ ಆದ ಅನ್ಯಾಯಕ್ಕೆ ನೀನೇ ಹೊಣೆ. ನಾನು ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರಕ್ಕೆ ಯೋಗ್ಯಳಾದೆನು. ಯೆಹೋವ ದೇವರು ನಿನಗೂ ನನಗೂ ನ್ಯಾಯತೀರಿಸಲಿ,” ಎಂದಳು.
6 ಆದರೆ ಅಬ್ರಾಮನು ಸಾರಯಳಿಗೆ, “ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ. ನಿನ್ನ ಮನಸ್ಸಿಗೆ ಬಂದಂತೆ ಮಾಡು,” ಎಂದನು. ಆಗ ಸಾರಯಳು ಹಾಗರಳನ್ನು ಬಾಧಿಸಿದ್ದರಿಂದ, ಅವಳು ಸಾರಯಳಿಂದ ಓಡಿ ಹೋದಳು.
7 ಯೆಹೋವ ದೇವರ ದೂತನು ಮರುಭೂಮಿಯಲ್ಲಿ ಶೂರಿನ ಮಾರ್ಗವಾಗಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಹಾಗರಳನ್ನು ಕಂಡು, 8 “ಸಾರಯಳ ದಾಸಿ ಹಾಗರಳೇ, ನೀನು ಎಲ್ಲಿಂದ ಬಂದೆ? ನೀನು ಎಲ್ಲಿಗೆ ಹೋಗುತ್ತೀ?” ಎಂದು ವಿಚಾರಿಸಿದನು.
ಅವಳು, “ನನ್ನ ಯಜಮಾನಿ ಸಾರಯಳನ್ನು ಬಿಟ್ಟು ಓಡಿ ಹೋಗುತ್ತಿದ್ದೇನೆ,” ಎಂದಳು.
9 ಯೆಹೋವ ದೇವರ ದೂತನು ಆಕೆಗೆ, “ನಿನ್ನ ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಆಕೆಗೆ ಅಧೀನಳಾಗಿರು,” ಎಂದನು. 10 ಇದಲ್ಲದೆ ಯೆಹೋವ ದೇವರ ದೂತನು ಅವಳಿಗೆ, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ಹೆಚ್ಚಿಸುತ್ತೇನೆ,” ಎಂದನು.
11 ಅನಂತರ ಯೆಹೋವ ದೇವರ ದೂತನು ಆಕೆಗೆ ಹೀಗೆ ಹೇಳಿದನು:
“ನೀನು ಈಗ ಗರ್ಭಿಣಿಯಾಗಿರುವೆ,
ಒಬ್ಬ ಮಗನನ್ನು ಹೆರುವೆ.
ಅವನಿಗೆ, ಇಷ್ಮಾಯೇಲ್*ಇಷ್ಮಾಯೇಲ್ ಅಂದರೆ ದೇವರು ಕೇಳಿಸಿಕೊಳ್ಳುತ್ತಾರೆ. ಎಂದು ಹೆಸರಿಡಬೇಕು.
ಏಕೆಂದರೆ ಯೆಹೋವ ದೇವರು ನಿನ್ನ ವ್ಯಥೆಗೆ ಕಿವಿಗೊಟ್ಟಿದ್ದಾರೆ.
12 ಅವನು ಕಾಡುಕತ್ತೆಯಂತೆ ಇರುವನು.
ಪ್ರತಿಯೊಬ್ಬರಿಗೂ ವಿರೋಧವಾಗಿ ಅವನು ಕೈ ಎತ್ತುವನು,
ಪ್ರತಿಯೊಬ್ಬರ ಕೈಯೂ ಅವನ ವಿರೋಧವಾಗಿ ಇರುವುದು.
ಅವನು ತನ್ನ ಸಹೋದರರೆಲ್ಲರ
ಎದುರಿನಲ್ಲಿ ವಾಸವಾಗಿರುವನು.”
13 ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವ ದೇವರಿಗೆ, “ನೀವು ನನ್ನನ್ನು ನೋಡುವ ದೇವರು,” ಎಂದು ಹೆಸರಿಟ್ಟಳು. ಏಕೆಂದರೆ, “ನನ್ನನ್ನು ನೋಡುವ ದೇವರನ್ನು ನಾನು ಇಲ್ಲಿ ನೋಡಿದೆ,” ಎಂದುಕೊಂಡಳು. 14 ಆದ್ದರಿಂದ ಆ ಬಾವಿಗೆ, ಬೇರ್ ಲಹೈರೋಯಿ†ಬೇರ್ ಲಹೈರೋಯಿ ಅಂದರೆ ಜೀವಿಸುವವರ ಬಾವಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
15 ತರುವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳ ಮಗನಿಗೆ ಅಬ್ರಾಮನು ಇಷ್ಮಾಯೇಲ್ ಎಂದು ಹೆಸರಿಟ್ಟನು. 16 ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ, ಅಬ್ರಾಮನು ಎಂಬತ್ತಾರು ವರ್ಷದವನಾಗಿದ್ದನು.