37
ಯೋಸೇಫನ ಕನಸುಗಳು
1 ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸವಾಗಿದ್ದನು.
2 ಇದು ಯಾಕೋಬನ ವಂಶದವರ ಚರಿತ್ರೆ:
ಯೋಸೇಫನು ಹದಿನೇಳು ವರ್ಷದವನಾಗಿದ್ದಾಗ, ತನ್ನ ಸಹೋದರರ ಸಂಗಡ ಅಂದರೆ, ತನ್ನ ತಂದೆಯ ಹೆಂಡತಿಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಮಕ್ಕಳ ಸಂಗಡ ಕುರಿಮಂದೆಗಳನ್ನು ಕಾಯುತ್ತಿದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.
3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನ ವಯಸ್ಸಿನಲ್ಲಿ ಹುಟ್ಟಿದ ಮಗನಾಗಿದ್ದುದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ, ಅವನಿಗೆ ಅನೇಕ ಬಣ್ಣಗಳ ಅಂಗಿಯನ್ನು ಹೊಲಿಸಿಕೊಟ್ಟನು. 4 ತಮ್ಮ ತಂದೆಯು ಅವನನ್ನು ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿಮಾಡುತ್ತಿರುವುದನ್ನು ಅವನ ಸಹೋದರರು ಕಂಡು, ಅವನನ್ನು ದ್ವೇಷಿಸಿ, ಅವನ ಸಂಗಡ ಸಮಾಧಾನದಿಂದ ಮಾತಾಡದೆಹೋದರು.
5 ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ, ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. 6 ಅವನು ಅವರಿಗೆ, “ನಾನು ಕಂಡ ಈ ಕನಸನ್ನು ಹೇಳುತ್ತೇನೆ ಕೇಳಿರಿ. 7 ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು. ನನ್ನ ಸಿವುಡು ಎದ್ದುನಿಂತಿತು. ಆಗ ನಿಮ್ಮ ಸಿವುಡುಗಳು ತಿರುಗಿ ನನ್ನ ಸಿವುಡಿಗೆ ಅಡ್ಡಬಿದ್ದವು,” ಎಂದನು.
8 ಆಗ ಅವನ ಸಹೋದರರು ಅವನಿಗೆ, “ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವೆಯೋ? ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ?” ಎಂದು ಹೇಳಿ, ಅವನ ಕನಸು ಮತ್ತು ಅವನ ಮಾತುಗಳಿಗೆ ಅವನನ್ನು ಮತ್ತಷ್ಟೂ ದ್ವೇಷಿಸಿದರು.
9 ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ, “ಇನ್ನೊಂದು ಕನಸನ್ನು ಕಂಡಿದ್ದೇನೆ. ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದನು.
10 ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ತಿಳಿಸಿದಾಗ, ಅವನ ತಂದೆಯು ಅವನನ್ನು ಗದರಿಸಿ, “ನೀನು ಕಂಡ ಈ ಕನಸು ಏನು? ನಾನು, ನಿನ್ನ ತಾಯಿ, ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬರಬೇಕೋ?” ಎಂದನು. 11 ಹೀಗೆ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
ಯೋಸೇಫನನ್ನು ಮಾರಾಟ ಮಾಡಿದ್ದು
12 ಅವನ ಸಹೋದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವುದಕ್ಕೆ ಹೋದರು. 13 ಆದ್ದರಿಂದ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಸಹೋದರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ. ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು,” ಎಂದನು.
ಅದಕ್ಕೆ ಅವನು, “ಆಗಲಿ ಹೋಗುತ್ತೇನೆ,” ಎಂದನು.
14 ಯಾಕೋಬನು ಅವನಿಗೆ, “ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ, ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು,” ಎಂದು ಹೇಳಿ ಹೆಬ್ರೋನ್ ಕಣಿವೆಯಿಂದ ಕಳುಹಿಸಿದನು.
ಯೋಸೇಫನು ಶೆಕೆಮಿಗೆ ಬಂದಾಗ, 15 ಒಬ್ಬಾನೊಬ್ಬ ಮನುಷ್ಯನು ಯೋಸೇಫನು ಹೊಲದಲ್ಲಿ ಅಲೆದಾಡುವುದನ್ನು ಕಂಡು ಅವನಿಗೆ, “ನೀನು ಏನು ಹುಡುಕುತ್ತಿದ್ದೀ?” ಎಂದು ಕೇಳಿದನು.
16 ಅದಕ್ಕೆ ಅವನು, “ನನ್ನ ಸಹೋದರರನ್ನು ಹುಡುಕುತ್ತಿದ್ದೇನೆ, ಅವರು ತಮ್ಮ ಮಂದೆಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆಂದು ದಯವಿಟ್ಟು ನನಗೆ ಹೇಳು,” ಎಂದನು.
17 ಆ ಮನುಷ್ಯನು, “ಅವರು ಇಲ್ಲಿಂದ ಹೊರಟು ಹೋದರು. ಅವರು, ‘ನಾವು ದೋತಾನಿಗೆ ಹೋಗೋಣ,’ ಎಂದು ಮಾತಾಡುವದನ್ನು ನಾನು ಕೇಳಿಸಿಕೊಂಡೆ,” ಎಂದನು.
ಆಗ ಯೋಸೇಫನು ತನ್ನ ಸಹೋದರರನ್ನು ಹುಡುಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು. 18 ಅವರು ದೂರದಿಂದ ಅವನನ್ನು ನೋಡಿದಾಗ, ಅವನು ಸಮೀಪಕ್ಕೆ ಬರುವ ಮುಂಚೆಯೇ ಅವನನ್ನು ಕೊಂದುಹಾಕಬೇಕೆಂದು ಅವನಿಗೆ ವಿರೋಧವಾಗಿ ಒಳಸಂಚು ಮಾಡಿಕೊಂಡರು.
19 ಅವರು, “ಇಗೋ, ಈ ಕನಸುಗಾರ ಬರುತ್ತಿದ್ದಾನೆ, 20 ಬನ್ನಿರಿ, ಈಗ ಅವನನ್ನು ಕೊಂದು, ಯಾವುದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ. ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
21 ಆದರೆ ರೂಬೇನನು ಅದನ್ನು ಕೇಳಿ, ಅವನನ್ನು ಅವರ ಕೈಗಳಿಂದ ತಪ್ಪಿಸಿ, “ಅವನನ್ನು ಕೊಲ್ಲುವುದು ಬೇಡ,” ಎಂದನು. 22 ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ, ತನ್ನ ತಂದೆಯ ಬಳಿಗೆ ತಿರುಗಿ ಕರೆದುಕೊಂಡುಹೋಗುವ ಉದ್ದೇಶದಿಂದ ಅವರಿಗೆ, “ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ಗುಂಡಿಯಲ್ಲಿ ಹಾಕಿರಿ, ಆದರೆ ಅವನ ಮೇಲೆ ಕೈಹಾಕಬೇಡಿರಿ,” ಎಂದನು.
23 ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ, ಅವರು ಯೋಸೇಫನ ಮೇಲಿದ್ದ ಬಣ್ಣಗಳ ಅಂಗಿಯನ್ನು ತೆಗೆದರು. 24 ಅವನನ್ನು ತೆಗೆದುಕೊಂಡು ಗುಂಡಿಯಲ್ಲಿ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು.
25 ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು.
26 ಆಗ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ಸಹೋದರನನ್ನು ಕೊಂದುಹಾಕಿ, ಅವನ ರಕ್ತವನ್ನು ಮರೆಮಾಡುವುದರಲ್ಲಿ ಲಾಭವೇನು? 27 ಬನ್ನಿರಿ, ಇಷ್ಮಾಯೇಲರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಏಕೆಂದರೆ ಅವನು ನಮ್ಮ ಸಹೋದರನೂ ನಮ್ಮ ದೇಹವೂ ರಕ್ತವೂ ಆಗಿದ್ದಾನೆ,” ಎಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು.
28 ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ*ಸುಮಾರು 230 ಗ್ರಾಂ ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು.
29 ರೂಬೇನನು ಗುಂಡಿಯ ಬಳಿಗೆ ತಿರುಗಿ ಬಂದಾಗ, ಯೋಸೇಫನು ಗುಂಡಿಯಲ್ಲಿ ಇಲ್ಲದ್ದರಿಂದ, ತನ್ನ ವಸ್ತ್ರಗಳನ್ನು ಹರಿದುಕೊಂಡನು. 30 ಅವನು ತನ್ನ ಸಹೋದರರ ಬಳಿಗೆ ತಿರುಗಿ ಹೋಗಿ, “ಬಾಲಕನು ಅಲ್ಲಿ ಇಲ್ಲವಲ್ಲಾ, ನಾನು ಎಲ್ಲಿಗೆ ಹೋಗಲಿ?” ಎಂದನು.
31 ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು, ಒಂದು ಹೋತವನ್ನು ಕೊಯ್ದು, ಆ ಅಂಗಿಯನ್ನು ರಕ್ತದಲ್ಲಿ ಅದ್ದಿ, 32 ಆ ಬಣ್ಣದ ಅಂಗಿಯನ್ನು ಅವರು ತಮ್ಮ ತಂದೆಯ ಬಳಿಗೆ ತಂದು, “ಇದು ನಮಗೆ ಸಿಕ್ಕಿತು, ಇದು ನಿನ್ನ ಮಗನ ಅಂಗಿಯೋ ಏನೋ ನೋಡು,” ಎಂದು ಹೇಳಿದರು.
33 ಯಾಕೋಬನು ಅದನ್ನು ಗುರುತು ಹಿಡಿದು, “ಇದು ನನ್ನ ಮಗನ ಅಂಗಿ ಹೌದು, ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು, ಯೋಸೇಫನನ್ನು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದನು.
34 ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು. 35 ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.
36 ಇದರೊಂದಿಗೆ, ಆ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಪೋಟೀಫರನಿಗೆ ಮಾರಿದರು. ಇವನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.