9
1 ಆದರೂ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬುಲೂನ್ ನಾಡು ಮತ್ತು ನಫ್ತಾಲಿ ನಾಡುಗಳನ್ನು ಅವರು ಅವಮಾನಕ್ಕೆ ಗುರಿಮಾಡಿ, ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಇತರ ಜನರಿರುವ ಗಲಿಲಾಯ ನಾಡು, ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾರೆ.
2 ಕತ್ತಲೆಯಲ್ಲಿ ನಡೆಯುವ ಈ ಜನರಿಗೆ
ಮಹಾ ಬೆಳಕು ಕಾಣಿಸಿತು,
ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ
ಬೆಳಕು ಉದಯಿಸಿತು.
3 ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ
ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ.
ಸುಗ್ಗಿ ಕಾಲದ ಸಂತೋಷದಂತೆಯೂ,
ಕೊಳ್ಳೆಯನ್ನು ಹಂಚಿಕೊಳ್ಳುವಾಗ
ಉಲ್ಲಾಸಿಸುವ ಹಾಗೆಯೂ ನಿಮ್ಮ
ಮುಂದೆ ಸಂತೋಷಿಸುವರು.
4 ಏಕೆಂದರೆ ಅವನ ನೊಗವನ್ನೂ,
ಬೆನ್ನನ್ನು ಹೊಡೆದ ಕೋಲನ್ನೂ,
ಬಿಟ್ಟೀ ಹಿಡಿದವನ ದೊಣ್ಣೆಯನ್ನೂ,
ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.
5 ಯುದ್ಧವೀರರ ಪ್ರತಿ ಯುದ್ಧವು ಗಲಿಬಿಲಿಯ ಗದ್ದಲದಿಂದ
ರಕ್ತದಲ್ಲಿ ಹೊರಳಾಡಿಸಿದ ವಸ್ತ್ರಗಳು ಆಗಿರುತ್ತವೆ.
ಆದರೆ ಇವು ಬೆಂಕಿಗೆ ಆಹುತಿಯಾಗುತ್ತವೆ.
ಅದು ಬೆಂಕಿಗೆ ಇಂಧನವಾಗಿರುತ್ತದೆ.
6 ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ,
ಆ ಮಗನನ್ನು ನಮಗಾಗಿ ಕೊಡಲಾಗಿದೆ.
ಆಡಳಿತವು ಅವರ ಬಾಹುವಿನ ಮೇಲಿರುವುದು,
ಅದ್ಭುತವಾದವರು ಸಮಾಲೋಚಕರು,
ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ,
ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.
7 ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ
ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು,
ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ
ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು,
ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು
ಇದನ್ನು ನೆರವೇರಿಸುವುದು.
ಇಸ್ರಾಯೇಲರ ವಿರುದ್ಧ ದೇವರ ರೌದ್ರ
8 ಯೆಹೋವ ದೇವರು ಯಾಕೋಬನಿಗೆ ವಿರೋಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದರು,
ಅದು ಇಸ್ರಾಯೇಲರಿಗೆ ತಗುಲಿತು.
9 ಗರ್ವದಿಂದಲೂ, ಹೆಮ್ಮೆಯಿಂದಲೂ
ಹೇಳಿಕೊಳ್ಳುವ ಎಲ್ಲಾ ಜನರಿಗೂ
ಎಫ್ರಾಯೀಮ್ಯರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ
ಈ ಮಾತು ಗೊತ್ತಾಗುವುದು. ಅದೇನೆಂದರೆ,
10 “ಇಟ್ಟಿಗೆಗಳು ಬಿದ್ದು ಹೋದರೂ
ಕೆತ್ತಿದ ಕಲ್ಲುಗಳಿಂದ ಕಟ್ಟುವೆವು.
ಅತ್ತಿಮರಗಳನ್ನು ಕಡಿದಿದ್ದರೂ
ಅಲ್ಲಿಯೇ ನಾವು ದೇವದಾರು ವೃಕ್ಷಗಳನ್ನು ನೆಡುವೆವು,”
11 ಹೀಗಿರುವುದರಿಂದ ಯೆಹೋವ ದೇವರು ರೆಚೀನನ ವೈರಿಗಳನ್ನು
ಅವನಿಗೆ ವಿರೋಧವಾಗಿ ಎಬ್ಬಿಸಿ,
12 ಅವನ ಶತ್ರುಗಳಾದ ಪೂರ್ವದಿಂದ ಅರಾಮ್ಯರನ್ನು ಮುಂದೆಯೂ,
ಪಶ್ಚಿಮದಿಂದ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವರು.
ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿಬಿಡುವರು.
ಏಕೆಂದರೆ, ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
13 ಆದರೂ ಜನರು ತಮ್ಮನ್ನು ಶಿಕ್ಷಿಸಿದ ದೇವರ ಕಡೆಗೆ ತಿರುಗದೆಯೂ,
ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕದೆಯೂ ಇದ್ದರು.
14 ಆದಕಾರಣ ಯೆಹೋವ ದೇವರು ಇಸ್ರಾಯೇಲಿನಿಂದ ತಲೆ
ಬಾಲಗಳನ್ನೂ ಖರ್ಜೂರದ ಕೊಂಬೆಗಳನ್ನೂ ಒಂದೇ ದಿನದಲ್ಲಿ ಕಡಿದುಹಾಕುವರು.
15 ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು,
ಸುಳ್ಳು ಬೋಧಿಸುವ ಪ್ರವಾದಿಯು ಬಾಲವಾಗಿರುವನು.
16 ಈ ಜನರನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ,
ಅವರನ್ನು ಹಿಂಬಾಲಿಸುವವರು ನಾಶವಾಗುವರು.
17 ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ.
ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ.
ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ,
ಕೇಡು ಮಾಡುವವನೂ ಆಗಿದ್ದಾನೆ.
ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ.
ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
18 ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ,
ಮುಳ್ಳುಗಳನ್ನು ನುಂಗಿಬಿಟ್ಟು,
ಅಡವಿಯ ಪೊದೆಗಳನ್ನು ಹತ್ತಿಕೊಳ್ಳಲು,
ಅದು ಹೊಗೆ ಹೊಗೆಯಾಗಿ ಸುತ್ತಿಕೊಂಡು ಮೇಲಕ್ಕೆ ಏರುತ್ತದೆ.
19 ಸೇನಾಧೀಶ್ವರ ಯೆಹೋವ ದೇವರ ಕೋಪದಿಂದ
ದೇಶವು ಒಣಗಿಹೋಗಿದೆ,
ಜನರು ಉರಿಯುವ ಸೌದೆಯಂತಿದ್ದಾರೆ.
ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ.
20 ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು
ತಿಂದರೂ ಹಸಿದೇ ಇರುವನು,
ಅವನು ಎಡಗಡೆಯಲ್ಲಿರುವುದನ್ನು ತಿಂದರೂ
ಅವು ಅವನನ್ನು ತೃಪ್ತಿಪಡಿಸಲಾರವು.
ಒಬ್ಬೊಬ್ಬನೂ ತನ್ನ ನೆರೆಯವನನ್ನು
ಹಾನಿ ಮಾಡುತ್ತಿದ್ದಾನೆ.
21 ಹೀಗೆ ಮನಸ್ಸೆಯು ಎಫ್ರಾಯೀಮನ್ನು ಮತ್ತು ಎಫ್ರಾಯೀಮು ಮನಸ್ಸೆಯನ್ನು ಹಾನಿ ಮಾಡುತ್ತಿವೆ.
ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು.
ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ,
ಅವರ ಕೈ ಇನ್ನೂ ಚಾಚಿಯೇ ಇದೆ.