3
ನಾಲಿಗೆಯನ್ನು ಬಿಗಿ ಹಿಡಿಯುವುದು ಅವಶ್ಯ
ನನ್ನ ಪ್ರಿಯರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವುದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ. ಏಕೆಂದರೆ ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವುದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಪರಿಪೂರ್ಣನೂ ತನ್ನ ಇಡೀ ದೇಹವನ್ನೇ ಸ್ವಾಧೀನದಲ್ಲಿಟ್ಟುಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ.
ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ, ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವುದಕ್ಕೆ ಆಗುತ್ತದೆ. ಹಡಗುಗಳ ಉದಾಹರಣೆಯೂ ಅದರಂತೆ ಇದೆ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ನಡೆಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ಅವುಗಳನ್ನು ತಿರುಗಿಸುತ್ತಾನೆ. ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಒಂದು ಸಣ್ಣ ಬೆಂಕಿ ಕಿಡಿಯು ದೊಡ್ಡಕಾಡನ್ನೇ ಸುಟ್ಟುಬಿಡುತ್ತದೆ ನೋಡಿರಿ. ನಮ್ಮ ದೇಹದ ಅಂಗಗಳಲ್ಲಿ ನಾಲಿಗೆಯು ಸಹ ಬೆಂಕಿಯೂ ದುಷ್ಟ ಲೋಕವೂ ಆಗಿದೆ. ಹೀಗೆ ನಾಲಿಗೆಯು ನಮ್ಮ ಅಂಗಗಳಲ್ಲಿ ಇದ್ದು, ಇಡೀ ದೇಹವನ್ನೆಲ್ಲಾ ಮಲಿನಗೊಳಿಸುತ್ತದೆ. ಅದು ನರಕದ ಬೆಂಕಿಯಿಂದ ಹೊತ್ತಿಕೊಂಡು, ಮಾನವರ ಇಡೀ ಜೀವನಕ್ಕೆ ಬೆಂಕಿ ಹಚ್ಚುವದಾಗಿದೆ.
ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಮಾನವರು ಹತೋಟಿಗೆ ತರುತ್ತಾರೆ ಮತ್ತು ತಂದಿದ್ದಾರೆ. ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿಕೊಂಡಿದೆ.
ಅದೇ ನಾಲಿಗೆಯಿಂದ ನಮ್ಮ ತಂದೆಯಾದ ಕರ್ತದೇವರನ್ನು ಕೊಂಡಾಡುತ್ತೇವೆ, ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಸೃಷ್ಟಿಸಲಾದ ಮನುಷ್ಯರನ್ನು ನಾವು ಶಪಿಸುತ್ತೇವೆ. 10 ಅದೇ ಬಾಯಿಂದ ಸ್ತುತಿ ಮತ್ತು ಶಾಪ ಬರುತ್ತವೆ. ನನ್ನ ಪ್ರಿಯರೇ, ಇವುಗಳು ಹೀಗಿರಬಾರದು. 11 ಒಂದೇ ಬುಗ್ಗೆಯಿಂದ ಸಿಹಿನೀರನ್ನೂ ಉಪ್ಪುನೀರನ್ನೂ ಒಂದೇ ಸ್ಥಳದಿಂದ ಹೊರಡಿಸುವುದುಂಟೇ? 12 ನನ್ನ ಪ್ರಿಯರೇ, ಅಂಜೂರದ ಮರವು ಎಣ್ಣೇಮರದ ಕಾಯನ್ನು ಬಿಡುವುದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಉಪ್ಪುನೀರಿನ ಬುಗ್ಗೆಯು ಸಿಹಿನೀರನ್ನು ಕೊಡಲು ಎಂದಿಗೂ ಸಾಧ್ಯವಿಲ್ಲ.
ನಿಜವಾದ ಜ್ಞಾನದ ಲಕ್ಷಣಗಳು
13 ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಜ್ಞಾನದಿಂದ ಬರುವ ದೀನತ್ವದಲ್ಲಿ ತನ್ನ ಕ್ರಿಯೆಗಳನ್ನು ಒಳ್ಳೆಯ ಜೀವನದಿಂದ ತೋರಿಸಲಿ. 14 ನಿಮ್ಮ ಹೃದಯದೊಳಗೆ ಕಹಿಯಾದ ಹಗೆತನವನ್ನೂ ಸ್ವಾರ್ಥ ಉದ್ದೇಶವನ್ನು ಕೂಡಿಟ್ಟು ಕೊಂಡಿರುವಲ್ಲಿ, ನೀವು ಜ್ಞಾನದ ಕುರಿತು ಹೊಗಳಿಕೊಳ್ಳಬೇಡಿರಿ ಮತ್ತು ಸತ್ಯವನ್ನು ನಿರಾಕರಿಸಬೇಡಿರಿ. 15 ಅಂಥ ಜ್ಞಾನವು ದೈವಿಕ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು. ಅದು ಆತ್ಮಿಕವಾದದ್ದಲ್ಲ. ಅದು ದೆವ್ವಗಳಿಗೆ ಸಂಬಂಧಪಟ್ಟದ್ದು. 16 ಏಕೆಂದರೆ ನಿಮ್ಮಲ್ಲಿ ಹೊಟ್ಟೆಕಿಚ್ಚೂ ಸ್ವಾರ್ಥ ಉದ್ದೇಶವೂ ಇರುವಲ್ಲಿ ಗಲಿಬಿಲಿಯೂ ಸಕಲ ವಿಧವಾದ ಕೆಟ್ಟ ಅಭ್ಯಾಸವೂ ಇರುತ್ತವೆ.
17 ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ. 18 ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುತ್ತಾರೆ.