2
ಇಸ್ರಾಯೇಲರು ಯೆಹೋವ ದೇವರನ್ನು ತೃಣೀಕರಿಸಿದ್ದು
1 ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು: 2 “ನೀನು ಹೋಗಿ ಯೆರೂಸಲೇಮ್ ನಗರಕ್ಕೆ ಕೇಳಿಸುವಂತೆ ಈ ಸಂದೇಶವನ್ನು ಸಾರು:
“ಯೆಹೋವ ದೇವರು ಹೀಗೆನ್ನುತ್ತಾರೆ,
“ ‘ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು,
ನವವಧುವಾಗಿ ನನಗೆ ತೋರಿಸಿದ ಪ್ರೇಮವನ್ನು,
ಹಾಗು ಬಿತ್ತನೆ ಇಲ್ಲದ ಅರಣ್ಯ ಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ
ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ,
ಇದು ನಿನ್ನ ಹಿತಕ್ಕಾಗಿಯೇ.
3 ಇಸ್ರಾಯೇಲು ಯೆಹೋವ ದೇವರಿಗೆ ಪರಿಶುದ್ಧವೂ,
ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿದೆ
ಅವಳನ್ನು ತಿಂದು ಬಿಟ್ಟವರೆಲ್ಲರೂ ಅಪರಾಧಿಗಳಾಗುವರು.
ಅವರಿಗೆ ಕೇಡು ಬರುವುದು,’ ”
ಎಂದು ಯೆಹೋವ ದೇವರು ಹೇಳುತ್ತಾರೆ.
4 ಓ ಯಾಕೋಬಿನ ಮನೆತನವೇ,
ಇಸ್ರಾಯೇಲಿನ ಮನೆತನದ ಎಲ್ಲಾ ಕುಲಗಳೇ,
ಯೆಹೋವ ದೇವರ ವಾಕ್ಯವನ್ನು ನೀವು ಕೇಳಿರಿ.
5 ಯೆಹೋವ ದೇವರು ಹೀಗೆ ಹೇಳುತ್ತಾರೆ:
“ನಿಮ್ಮ ತಂದೆಗಳು ನನಗೆ ದೂರವಾಗಿ
ವ್ಯರ್ಥತ್ವವನ್ನು ಹಿಂದಟ್ಟಿ,
ವ್ಯರ್ಥವಾಗುವ ಹಾಗೆ
ನನ್ನಲ್ಲಿ ಏನು ತಪ್ಪನ್ನು ಕಂಡಿದ್ದಾರೆ?
6 ಅವರು, ‘ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿ
ನಮ್ಮನ್ನು ಮರುಭೂಮಿಯಲ್ಲಿ ಕಾಡು ಕುಳಿಗಳು ಉಳ್ಳ ದೇಶದಲ್ಲಿ,
ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ,
ಒಬ್ಬರೂ ಹಾದುಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡೆಸಿದ ಯೆಹೋವ ದೇವರು ಎಲ್ಲಿ?’
ಎಂದು ಪ್ರಶ್ನೆ ಮಾಡಲಿಲ್ಲ.
7 ನಾನು ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಸಾರವನ್ನೂ,
ಮೇಲನ್ನೂ ತಿನ್ನುವ ಹಾಗೆ ಕರೆದುಕೊಂಡು ಬಂದೆನು.
ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ,
ನನ್ನ ಸೊತ್ತನ್ನು ಅಸಹ್ಯ ಮಾಡಿದಿರಿ.
8 ಯಾಜಕರು, ‘ಯೆಹೋವ ದೇವರು ಎಲ್ಲಿ?’
ಎಂದು ಕೇಳಲಿಲ್ಲ.
ದೈವನಿಯಮವನ್ನು ಉಪದೇಶಿಸುವವರು ನನ್ನನ್ನು ತಿಳಿಯಲಿಲ್ಲ.
ನಾಯಕರು ನನಗೆ ವಿರೋಧವಾಗಿ ದ್ರೋಹಮಾಡಿದರು.
ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು.
ಪ್ರಯೋಜನವಿಲ್ಲದವುಗಳನ್ನು ಹಿಂದಟ್ಟಿದರು.
9 “ಆದ್ದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯವಾಡುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
“ಇದಲ್ಲದೆ ನಿಮ್ಮ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.
10 ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ.
ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳಿದುಕೊಳ್ಳಿರಿ.
ಅಂಥದ್ದು ಉಂಟೋ ಎಂದು ನೋಡಿರಿ.
11 ಜನಾಂಗವು ತಮ್ಮ ದೇವರುಗಳನ್ನು
ಅವು ದೇವರುಗಳಲ್ಲದೆ ಇದ್ದರೂ ಬದಲು ಮಾಡಿದ್ದುಂಟೋ?
ಆದರೆ ನನ್ನ ಜನರು
ತಮ್ಮ ವೈಭವವಾದ ದೇವರನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ.
12 ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ,
ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ,”
ಎಂದು ಯೆಹೋವ ದೇವರು ಹೇಳುತ್ತಾರೆ.
13 “ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ.
ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು,
ತಮಗೆ ನೀರು ಹಿಡಿಯಲಾರದ ಒಡಕ ತೊಟ್ಟಿಗಳನ್ನೂ ಕೆತ್ತಿದ್ದಾರೆ.
14 ಇಸ್ರಾಯೇಲನು ಸೇವಕನೋ? ಮನೆಯಲ್ಲಿ ಹುಟ್ಟಿದ ಗುಲಾಮನೋ?
ಅವನು ಏಕೆ ಸುಲಿಗೆಯಾದನು?
15 ಪ್ರಾಯದ ಸಿಂಹಗಳು
ಅವನಿಗೆ ವಿರೋಧವಾಗಿ ಗರ್ಜಿಸಿ, ಅಬ್ಬರಿಸುತ್ತವೆ.
ಅವನ ದೇಶವನ್ನು ಹಾಳು ಮಾಡುತ್ತವೆ.
ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ.
16 ನೋಫ್ ಮತ್ತು ತಹಪನೇಸ್ ಪಟ್ಟಣಗಳವರು
ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ.
17 ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ
ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟಿದ್ದರಿಂದಲೇ
ಇದನ್ನು ನಿನಗೆ ನೀನೇ ಮಾಡಿಕೊಂಡೆಯಲ್ಲವೋ?
18 ಈಗ ಶೀಹೋರಿನ ನೀರು ಕುಡಿಯುವುದಕ್ಕಾಗಿ
ಈಜಿಪ್ಟಿನ ದಾರಿಯಲ್ಲಿ ನಿನಗೇನು ಕೆಲಸ?
ಯೂಫ್ರೇಟೀಸ್ ನದಿಯ ನೀರು ಕುಡಿಯುವುದಕ್ಕಾಗಿ
ಅಸ್ಸೀರಿಯದ ದಾರಿಯಲ್ಲಿ ನಿನಗೇನು ಕೆಲಸ?
19 ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು.
ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು.
ಹೀಗಿರುವುದರಿಂದ ನೀನು
ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ,
ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ,
ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,”
ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
20 “ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು,
ನಿನ್ನ ಬಂಧನಗಳನ್ನು ಹರಿದುಬಿಟ್ಟೆನು.
ಆದರೆ, ‘ನಾನು ಸೇವೆಮಾಡುವುದಿಲ್ಲ!’ ಎಂದು ನೀನು ಹೇಳಿದೆ.
ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ,
ಒಂದೊಂದು ಹಸುರಾದ ಮರದ ಕೆಳಗೂ
ನೀನು ವೇಶ್ಯೆಯಾಗಿ ನಡೆದಿದ್ದೀ.
21 ಅತ್ಯುತ್ತಮ ಬೀಜದಿಂದ ಬೆಳೆದ
ಉತ್ಕೃಷ್ಟ ದ್ರಾಕ್ಷಾಲತೆಯನ್ನಾಗಿ ನಿನ್ನನ್ನು ನೆಟ್ಟಿದೆ.
ಆದರೆ ನೀನು ಕಾಡುದ್ರಾಕ್ಷಿಬಳ್ಳಿಯ
ಹಾಳು ರೆಂಬೆಗಳಾದದ್ದು ಹೇಗೆ?
22 ನೀನು ಸಾಬೂನಿನಿಂದ ತೊಳೆದುಕೊಂಡರೂ,
ಬಹಳ ಸಾಬೂನು ಹಾಕಿಕೊಂಡರೂ
ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ,”
ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
23 “ಇದಲ್ಲದೆ ನೀನು, ‘ನಾನು ಅಶುದ್ಧನಲ್ಲ,
ಬಾಳನನ್ನು ಹಿಂಬಾಲಿಸಲಿಲ್ಲ,’ ಎಂದು ಹೇಳುವುದು ಹೇಗೆ?
ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು.
ನೀನು ಮಾಡಿದ್ದನ್ನು ತಿಳಿದುಕೋ.
ನೀನು ತೀವ್ರವಾಗಿ ಸಂಚಾರ ಮಾಡುವ
ಹೆಣ್ಣು ಒಂಟೆಯೇ.
24 ಮರುಭೂಮಿಯ ಅಭ್ಯಾಸವುಳ್ಳ ಕಾಡುಕತ್ತೆಯೇ.
ಅವಳ ಅತ್ಯಾಶೆಯಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತಾಳೆ.
ಅವಳ ಮದವನ್ನು ಯಾರು ತಡೆಯುವರು?
ಅವಳನ್ನು ಹುಡುಕುವವರೆಲ್ಲರೂ ಆಯಾಸ ಪಡುವುದಿಲ್ಲ.
ಅವಳ ಸಂಗಮಿಸುವ ಋತುಗಳಲ್ಲಿ ಅವಳನ್ನು ಕಾಣುವರು.
25 ಆದರೆ ನಾನು, ‘ನಿನ್ನ ಕಾಲು ಸವೆಯದಂತೆಯೂ,
ನಿನ್ನ ಗಂಟಲು ಆರದಂತೆಯೂ ತಡೆದುಕೋ,’ ಎಂದೆನು.
ಆದರೆ ನೀನು, ‘ಇಲ್ಲ, ನಿರೀಕ್ಷೆ ಇಲ್ಲ,
ನಾನು ಅನ್ಯದೇವರುಗಳನ್ನು ಪ್ರೀತಿಸುತ್ತೇನೆ,
ಅವುಗಳ ಹಿಂದೆ ನಾನು ಹೋಗುತ್ತೇನೆ,’ ಎಂದು ಹೇಳಿದೆ.
26 “ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ
ಇಸ್ರಾಯೇಲ್ ಜನರಿಗೆ ನಾಚಿಕೆ ಆಯಿತು.
ಅವರ ಅರಸರು, ಅಧಿಪತಿಗಳು,
ಯಾಜಕರು, ಪ್ರವಾದಿಗಳು, ಇವರೆಲ್ಲರೂ ನಾಚಿಕೆಗೆ ಈಡಾಗುವರು.
27 ಅವರು ಮರಕ್ಕೆ, ‘ನೀನು ನನ್ನ ತಂದೆ,’ ಎಂದೂ
ಕಲ್ಲಿಗೆ, ‘ನೀನು ನನ್ನನ್ನು ಹೆತ್ತಿದ್ದೀ,’ ಎಂದೂ ಹೇಳುತ್ತಾರಲ್ಲಾ.
ಏಕೆಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ.
ಆದರೂ ಅವರ ಕಷ್ಟಕಾಲದಲ್ಲಿ ಎದ್ದು,
‘ನಮ್ಮನ್ನು ರಕ್ಷಿಸು,’ ಎಂದು ಮೊರೆಯಿಡುವರು.
28 ಆದರೆ ನೀನು ನಿನಗೋಸ್ಕರ ಮಾಡಿಕೊಂಡ
ನಿನ್ನ ದೇವರುಗಳು ಎಲ್ಲಿ?
ನಿನ್ನ ಕಷ್ಟಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ,
ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ
ನಿನ್ನ ದೇವರುಗಳು ಇದ್ದಾರೆ.
29 “ಏಕೆ ನನ್ನ ಸಂಗಡ ವಾದಿಸುತ್ತೀರಿ?
ನೀವೆಲ್ಲರೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದೀರಿ,”
ಎಂದು ಯೆಹೋವ ದೇವರು ಹೇಳುತ್ತಾರೆ.
30 “ನಾನು ನಿಮ್ಮ ಜನರನ್ನು ದಂಡಿಸಿದ್ದು ವ್ಯರ್ಥವಾಯಿತು.
ಅವರು ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ.
ನಿಮ್ಮ ಸ್ವಂತ ಖಡ್ಗವು ನಾಶಮಾಡುವ ಸಿಂಹದಂತೆ
ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
31 “ಇಸ್ರಾಯೇಲರೇ, ನೀವು ಯೆಹೋವ ದೇವರ ವಾಕ್ಯವನ್ನು ಗಮನಿಸಿರಿ:
“ನಾನು ಇಸ್ರಾಯೇಲಿನ ಮರುಭೂಮಿಯಾದೆನೋ?
ಗಾಡಾಂಧಕಾರದ ದೇಶವಾದೆನೋ?
ನನ್ನ ಜನರು, ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ,
ನಾವು ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವುದಿಲ್ಲ,’
ಎಂದು ಹೇಳುವುದು ಹೇಗೆ?
32 ಯುವತಿಯು ತನ್ನ ಆಭರಣಗಳನ್ನೂ
ಇಲ್ಲವೆ ಮದಲಗಿತ್ತಿ ತನ್ನ ಒಡ್ಯಾಣವನ್ನು ಮರೆತುಬಿಡುವಳೋ?
ಆದರೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು
ನನ್ನನ್ನು ಮರೆತುಬಿಟ್ಟಿದ್ದಾರೆ.
33 ಪ್ರಿಯಕರರನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಏಕೆ ಚಂದ ಮಾಡಿಕೊಳ್ಳುತ್ತೀ?
ಇದರಿಂದ ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
34 ಇದಲ್ಲದೆ ನಿನ್ನ ಸೆರಗುಗಳಲ್ಲಿ
ಅಪರಾಧವಿಲ್ಲದ ಬಡವರ ರಕ್ತವು ಸಿಕ್ಕಿದೆ.
ಅಂತರಂಗದ ಶೋಧನೆಯಿಂದಲ್ಲ,
ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೀ.
35 ಆದರೂ ನೀನು, ‘ನಾನು ನಿರಪರಾಧಿಯಾಗಿರುವ ಕಾರಣ
ನಿಶ್ಚಯವಾಗಿ ದೇವರ ಕೋಪವು ನನ್ನನ್ನು ಬಿಟ್ಟು ತಿರುಗುವುದು,’ ಎಂದು ಹೇಳುತ್ತೀ.
ನೀನು, ‘ನಾನು ಪಾಪಮಾಡಲಿಲ್ಲ’ ಎಂದು ಹೇಳುವುದರಿಂದ ಇಗೋ,
ನಾನು ನಿನಗೆ ನ್ಯಾಯತೀರಿಸುವೆನು.
36 ನಿನ್ನ ಮಾರ್ಗವನ್ನು ಬೇರೆ ಮಾಡಿಕೊಳ್ಳುವಷ್ಟು
ಏಕೆ ಬಹಳವಾಗಿ ತಿರುಗಾಡುತ್ತೀ?
ಅಸ್ಸೀರಿಯದ ನಿಮಿತ್ತ ನಾಚಿಕೆ ಪಟ್ಟ ಹಾಗೆ
ಈಜಿಪ್ಟಿನ ನಿಮಿತ್ತವೂ ನಾಚಿಕೆಪಡುವೆ.
37 ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ
ಇಟ್ಟುಕೊಂಡು ಹೊರಟು ಹೋಗುವೆ.
ಏಕೆಂದರೆ ಯೆಹೋವ ದೇವರು ನೀನು ಭರವಸೆ ಇಟ್ಟವುಗಳನ್ನು ತಿರಸ್ಕರಿಸಿದ್ದಾರೆ,
ಅವುಗಳ ಮುಖಾಂತರ ನಿನ್ನ ಕಾರ್ಯ ಸಫಲವಾಗುವುದಿಲ್ಲ.”