20
ಚೋಫರನ ವಾದ
ನಾಮಾಥ್ಯನಾದ ಚೋಫರನು ಉತ್ತರಕೊಟ್ಟು ಹೇಳಿದ್ದೇನೆಂದರೆ:
“ನಾನು ತುಂಬಾ ಕಳವಳಗೊಂಡದ್ದರಿಂದ,
ನನ್ನ ಆಲೋಚನೆಗಳು ನನ್ನನ್ನು ಉತ್ತರಿಸಲು ಪ್ರೇರೇಪಿಸಿದವು.
ನನ್ನನ್ನು ಅವಮಾನಿಸುವ ಖಂಡನೆಯನ್ನು ನಾನು ಕೇಳಿದ್ದೇನೆ;
ಆದ್ದರಿಂದ ನನ್ನ ತಿಳುವಳಿಕೆಯು ನನ್ನನ್ನು ಉತ್ತರಿಸಲು ಪ್ರೇರೇಪಿಸುತ್ತದೆ.
 
“ದೇವರು ಮನುಷ್ಯನನ್ನು*ಅಥವಾ ಆದಾಮ
ಭೂಮಿಯಲ್ಲಿ ಇರಿಸಿದ ಕಾಲದಿಂದ ವಿಷಯ ಹೇಗಿದೆ ಎಂಬುದು ನಿನಗೆ ನಿಶ್ಚಯವಾಗಿ ಗೊತ್ತಿದೆ.
ದುಷ್ಟರ ಜಯವು ಅಲ್ಪ ಕಾಲ,
ಭಕ್ತಿಹೀನರ ಸಂತೋಷವು ಕ್ಷಣ ಮಾತ್ರ.
ಹೆಮ್ಮೆಯು ಆಕಾಶಕ್ಕೆ ಏರಿದರೂ,
ಅವನ ತಲೆ ಮೇಘಕ್ಕೆ ಮುಟ್ಟಿದರೂ,
ಗೊಬ್ಬರದ ಹಾಗೆ ಶಾಶ್ವತವಾಗಿ ಅವನು ನಾಶವಾಗುವನು;
ಅವನನ್ನು ನೋಡಿದವರು, ‘ಅವನೆಲ್ಲಿ?’ ಎಂದು ಕೇಳುವರು.
ಭಕ್ತಿಹೀನನು ಕನಸಿನ ಹಾಗೆ ಹಾರಿಹೋಗುವನು, ಇನ್ನೆಂದಿಗೂ ಸಿಗಲಾರನು;
ಅವನು ಕತ್ತಲೆಯ ಹಾಗೆ ಕಾಣದೆ ಹೋಗುವನು.
ಅವನನ್ನು ನೋಡಿದವರು ಇನ್ನು ಮುಂದೆ ನೋಡರು;
ಅವನ ಸ್ಥಳವು ಇನ್ನು ಅವನನ್ನು ಕಾಣದು.
10 ಅವನ ಮಕ್ಕಳು ಬಡವರ ದಯೆಯನ್ನು ಬೇಡುವರು;
ಅವನ ಮಕ್ಕಳ ಕೈಗಳು ಅವನ ಸಂಪತ್ತನ್ನು ಹಿಂತಿರುಗಿಸಬೇಕಾಗುವುದು.
11 ಅವನ ಎಲುಬುಗಳು ಯೌವನದ ಶಕ್ತಿಯಿಂದ ತುಂಬಿತ್ತು,
ಅದು ಅವನ ಸಂಗಡ ಧೂಳಿನಲ್ಲಿ ಮಲಗುವುದು.
 
12 “ಅವನ ಕೆಟ್ಟತನವು ಬಾಯಿಗೆ ಸಿಹಿಯಾಗಿತ್ತು,
ಅವನು ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟುಕೊಂಡಿದ್ದನು.
13 ಅದನ್ನು ಬಿಟ್ಟುಕೊಡಲು ಇಷ್ಟಪಡದೆ,
ತನ್ನ ಬಾಯಿಯೊಳಗೆ ದೀರ್ಘಸಮಯ ಇಟ್ಟುಕೊಂಡರೂ,
14 ಅವನ ಆಹಾರವು ಅವನ ಕರುಳಲ್ಲಿ ಹುಳಿಯಾಗಿ,
ಅದು ಅವನೊಳಗಿನ ಸರ್ಪಗಳ ವಿಷವಾಗುವುದು.
15 ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು;
ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡಿಸಿ ಬಿಡುವನು.
16 ಅವನು ಸರ್ಪಗಳ ವಿಷವನ್ನು ಹೀರುವನು;
ಹಾವಿನ ನಾಲಿಗೆ ಅವನನ್ನು ಕೊಲ್ಲುವುದು.
17 ಅವನು ಜೇನು, ಮೊಸರೂ ಹರಿಯುವ ಹಳ್ಳಗಳನ್ನೂ,
ಸಮೃದ್ಧಿಯಾಗಿ ಹರಿಯುವ ನದಿಗಳನ್ನೂ ನೋಡನು.
18 ಅವನು ತನ್ನ ಪ್ರಯಾಸದ ಫಲವನ್ನು ಸವಿಯದೆ ಪರರಿಗೆ ಕೊಡಬೇಕಾಗುವುದು;
ಅವನು ತಾನು ಪಡೆದ ಲಾಭದ ಆನಂದವನ್ನು ಅನುಭವಿಸುವುದಿಲ್ಲ.
19 ಏಕೆಂದರೆ ಅವನು ಬಡವರನ್ನು ಜಜ್ಜಿ ಅವರನ್ನು ನಿರ್ಗತಿಕರನ್ನಾಗಿ ಮಾಡಿದನು;
ತಾನು ನಿರ್ಮಿಸದ ಮನೆಗಳನ್ನು ವಶಪಡಿಸಿಕೊಂಡಿದ್ದಾನೆ.
 
20 “ಖಂಡಿತವಾಗಿ ಅವನ ಆಕಾಂಕ್ಷೆಗೆ ತೃಪ್ತಿ ಇರುವುದಿಲ್ಲ;
ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಏನೂ ಉಳಿಸಿಕೊಳ್ಳುವುದಿಲ್ಲ.
21 ಅವನಿಗೆ ಆಹಾರವು ಉಳಿಯದು;
ಆದ್ದರಿಂದ ಅವನ ಸಮೃದ್ಧಿಯು ಅಸ್ಥಿರವಾಗಿರುವುದು.
22 ಅವನ ಸಮೃದ್ಧಿಯಿಂದ ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು;
ಘೋರ ದುಃಖವು ಅವನ ಮೇಲೆ ಬರುವುದು.
23 ಅವನ ಹೊಟ್ಟೆ ತುಂಬುವಾಗ,
ದೇವದಂಡನೆ ಅವನ ಮೇಲೆ ಬರುವುದು;
ಹೌದು, ದೇವದಂಡನೆಯು ಅವನ ಮೇಲೆ ಸುರಿಯುವುದು.
24 ಅವನು ಕಬ್ಬಿಣದ ಆಯುಧಕ್ಕೆ ತಪ್ಪಿಸಿಕೊಂಡು ಓಡಿಹೋದರೆ,
ಕಂಚಿನ ಬಾಣ ಅವನನ್ನು ತಿವಿಯುವುದು.
25 ಅವನು ಆ ಬಾಣವನ್ನು ಎಳೆದರೆ, ಅದು ಬೆನ್ನಿನಿಂದ ಹೊರಡುವುದು;
ಅವನ ಪಿತ್ತಕೋಶದಿಂದ ಅದರ ಮಿಂಚುವ ಮೊನೆ ಬರುವುದು;
ಸಾವಿನ ಭಯವು ಅವನನ್ನೂ ಆವರಿಸುವುದು.
26 ಅವನ ನಿಕ್ಷೇಪಗಳಲ್ಲಿ ಅಂಧಕಾರವು ಪೂರ್ಣವಾಗಿ ಕವಿಯುವುದು;
ಯಾರೂ ಹೊತ್ತಿಸದ ಬೆಂಕಿ ಅವನನ್ನು ದಹಿಸುವುದು;
ಅವನ ಗುಡಾರದಲ್ಲಿ ಉಳಿದದ್ದೆಲ್ಲ ನಾಶವಾಗುವುದು.
27 ಆಕಾಶವು ಅವನ ಅಪರಾಧವನ್ನು ಪ್ರಕಟಿಸುವುದು;
ಭೂಮಿಯು ಅವನಿಗೆ ವಿರೋಧವಾಗಿ ಏಳುವುದು.
28 ಅವನ ಮನೆಯ ಧನಧಾನ್ಯವು ತೊಲಗಿ ಹೋಗುವುದು;
ದೇವದಂಡನೆಯ ದಿನದಲ್ಲಿ ಅದು ಪ್ರವಾಹದಿಂದ ಕೊಚ್ಚಿಕೊಂಡು ಹೋಗುವುದು.
29 ದುಷ್ಟನಿಗೆ ದೇವರಿಂದ ಬರುವ ಪಾಲೂ,
ಅವನಿಗೆ ನೇಮವಾಗಿರುವ ಬಾಧ್ಯತೆಯೂ ಇವೇ.”

*20:4 ಅಥವಾ ಆದಾಮ