6
ಸಬ್ಬತ್ ದಿನದ ಒಡೆಯ
1 ಒಂದು ಯೆಹೂದ್ಯರ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಆಗ ಅವರ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಕಿಕೊಂಡು ಅದರ ಕಾಳುಗಳನ್ನು ತಿನ್ನುತ್ತಿದ್ದರು. 2 ಫರಿಸಾಯರಲ್ಲಿ ಕೆಲವರು ಅವರಿಗೆ, “ಸಬ್ಬತ್ ದಿನದಲ್ಲಿ ಮೋಶೆಯ ನಿಯಮಕ್ಕೆ ವಿರುದ್ಧವಾಗಿರುವದನ್ನು ನೀವು ಏಕೆ ಮಾಡುತ್ತೀರಿ?” ಎಂದರು.
3 ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?*1 ಅರಸು 21:6 4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ಮೋಶೆ ನಿಯಮಕ್ಕೆ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನಲ್ಲವೇ” ಎಂದರು. 5 ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸಬ್ಬತ್ತಿಗೂ ಕರ್ತ ದೇವರಾಗಿದ್ದೇನೆ,” ಎಂದರು.
6 ಇನ್ನೊಂದು ಸಬ್ಬತ್ ದಿನದಲ್ಲಿ ಯೇಸು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿದರು, ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು. 7 ಆಗ ಫರಿಸಾಯರೂ ನಿಯಮ ಬೋಧಕರೂ ಯೇಸುವಿಗೆ ವಿರೋಧವಾಗಿ ತಪ್ಪು ಕಂಡು ಹಿಡಿಯಬೇಕೆಂದು, ಅವರು ಆ ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಗಮನಿಸಿ ನೋಡುತ್ತಿದ್ದರು. 8 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈಬತ್ತಿದವನಿಗೆ, “ನೀನು ಎದ್ದು ಬಂದು ನಡುವೆ ನಿಂತುಕೋ,” ಎಂದಾಗ ಅವನು ಎದ್ದು ನಿಂತುಕೊಂಡನು.
9 ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು.
10 ಯೇಸು ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದರು. ಅವನು ಹಾಗೆಯೇ ಮಾಡಿದನು. ಆಗ ಅವನ ಕೈ ಸಂಪೂರ್ಣವಾಗಿ ಗುಣವಾಯಿತು. 11 ಆದರೆ ಫರಿಸಾಯರೂ ನಿಯಮ ಬೋಧಕರೂ ತುಂಬಾ ಕೋಪಗೊಂಡು ಯೇಸುವಿಗೆ ಏನಾದರೂ ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
ಹನ್ನೆರಡು ಮಂದಿ ಅಪೊಸ್ತಲರು
12 ಆ ದಿನಗಳಲ್ಲಿ ಯೇಸು ಪ್ರಾರ್ಥಿಸುವುದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ, ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದರು. 13 ಬೆಳಗಾದ ಮೇಲೆ, ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ “ಅಪೊಸ್ತಲರು” ಎಂದು ಹೆಸರಿಟ್ಟರು.
14 ಅವರು ಯಾರೆಂದರೆ: ಪೇತ್ರನೆಂದು ಹೆಸರು ಹೊಂದಿದ ಸೀಮೋನ, ಅವನ ಸಹೋದರ ಅಂದ್ರೆಯ,
ಯಾಕೋಬ,
ಯೋಹಾನ,
ಫಿಲಿಪ್ಪ,
ಬಾರ್ತೊಲೊಮಾಯ,
15 ಮತ್ತಾಯ,
ತೋಮ,
ಅಲ್ಫಾಯನ ಮಗ ಯಾಕೋಬ,
ದೇಶಾಭಿಮಾನಿ†ರೋಮಾಧಿಕಾರಕ್ಕೆ ಎದುರಾಗಿ ಹೋರಾಡುತ್ತಿದ್ದ ಯೆಹೂದ್ಯರ ಒಂದು ಗುಂಪಿನ ಸದಸ್ಯನಾಗಿದ್ದನು. ಎಂದು ಅನ್ನಿಸಿಕೊಂಡ ಸೀಮೋನ,
16 ಯಾಕೋಬನ ಮಗ ಯೂದ,
ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ.
ಆಶೀರ್ವಾದವೂ ಶಾಪವೂ
17 ಯೇಸು ಅವರೊಂದಿಗೆ ಕೆಳಗಿಳಿದು ಸಮತಟ್ಟಾದ ಭೂಮಿಯ ಮೇಲೆ ನಿಂತಿದ್ದಾಗ, ಅವರ ಶಿಷ್ಯರ ಗುಂಪು ಅಲ್ಲದೆ ಯೂದಾಯದಿಂದಲೂ ಯೆರೂಸಲೇಮಿನಿಂದಲೂ ಟೈರ್, ಸೀದೋನ್ ಪಟ್ಟಣಗಳಿರುವ ಸಮುದ್ರ ತೀರದಿಂದಲೂ 18 ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳಿಂದ ಸ್ವಸ್ಥರಾಗುವುದಕ್ಕೂ ಜನರು ದೊಡ್ಡ ಸಮೂಹವಾಗಿ ಬಂದರು. ದುರಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು, 19 ಆಗ ಸಮೂಹದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು, ಏಕೆಂದರೆ ಅವರಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥಮಾಡುತ್ತಿತ್ತು.
20 ಯೇಸು ತಮ್ಮ ಶಿಷ್ಯರನ್ನು ನೋಡಿ, ಹೇಳಿದ್ದೇನೆಂದರೆ:
“ಬಡವರಾದ ನೀವು ಧನ್ಯರು,
ದೇವರ ರಾಜ್ಯವು ನಿಮ್ಮದೇ.
21 ಈಗ ಹಸಿದವರಾದ ನೀವು ಧನ್ಯರು,
ನೀವು ತೃಪ್ತಿಹೊಂದುವಿರಿ.
ಈಗ ಅಳುವವರಾದ ನೀವು ಧನ್ಯರು,
ನೀವು ನಗುವಿರಿ.
22 ಮನುಷ್ಯಪುತ್ರನಾದ ನನ್ನ ನಿಮಿತ್ತ ಜನರು ನಿಮ್ಮನ್ನು ದ್ವೇಷಮಾಡಿ,
ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ,
ನಿಮ್ಮ ಹೆಸರನ್ನು ಕೆಟ್ಟದೆಂದು ತಿರಸ್ಕರಿಸಿದರೆ
ನೀವು ಧನ್ಯರು.
23 “ಆ ದಿನದಲ್ಲಿ ನೀವು ಸಂತೋಷಪಡಿರಿ, ಉಲ್ಲಾಸದಿಂದ ಕುಣಿದಾಡಿರಿ. ಇಗೋ, ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಈ ಜನರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.
24 “ಆದರೆ ಐಶ್ವರ್ಯವಂತರೇ, ನಿಮಗೆ ಕಷ್ಟ,
ಏಕೆಂದರೆ ನೀವು ನಿಮ್ಮ ನೆಮ್ಮದಿಯನ್ನು ಹೊಂದಿದ್ದೀರಿ.
25 ಈಗ ತಿಂದು ತೃಪ್ತಿಯಿಂದಿರುವವರೇ, ನಿಮಗೆ ಕಷ್ಟ,
ಏಕೆಂದರೆ ನಿಮಗೆ ಹಸಿವೆಯಾಗುವುದು.
ಈಗ ನಗುವವರೇ ನಿಮಗೆ ಕಷ್ಟ,
ಏಕೆಂದರೆ ನೀವು ದುಃಖಿಸಿ ಗೋಳಾಡುವಿರಿ.
26 ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೆಯದಾಗಿ ಮಾತನಾಡಿದರೆ ನಿಮಗೆ ಕಷ್ಟ,
ಇವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.
ಶತ್ರುಗಳನ್ನು ಪ್ರೀತಿಸಬೇಕು
27 “ನನ್ನನ್ನು ಆಲಿಸುತ್ತಿರುವವರೆ ನನ್ನ ಮಾತನ್ನು ಕೇಳಿರಿ: ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಮಾಡುವವರಿಗೆ ಒಳ್ಳೆಯದನ್ನು ಮಾಡಿರಿ, 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ. 29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು. 30 ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ. 31 ಇತರರು ನಿಮಗೆ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ.
32 “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ನಿಮಗೇನು ದೊಡ್ಡಸ್ತಿಕೆ ಬಂದೀತು? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುತ್ತಾರೆ. 33 ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ. 34 ಯಾರಿಂದ ತಿರುಗಿ ಪಡೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೀರೋ ಅಂಥವರಿಗೆ ಸಾಲಕೊಟ್ಟರೆ, ಅದರಿಂದ ನಿಮಗೆ ವಿಶೇಷವೇನು? ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟದ್ದನ್ನು ತಿರುಗಿ ಪಡೆಯುವಂತೆ, ಪಾಪಿಗಳಿಗೆ ಸಾಲ ಕೊಡುತ್ತಾರೆ. 35 ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ. 36 ನಿಮ್ಮ ತಂದೆಯು ಕರುಣೆಯುಳ್ಳವರಾಗಿರುವ ಪ್ರಕಾರ, ನೀವೂ ಕರುಣೆಯುಳ್ಳವರಾಗಿರಿ.
ಇತರರನ್ನು ತೀರ್ಪುಮಾಡಬೇಡಿರಿ
37 “ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಇತರರನ್ನು ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಕ್ಷಮಿಸಿರಿ, ಆಗ ನಿಮ್ಮನ್ನೂ ಕ್ಷಮಿಸುವರು. 38 ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು,” ಎಂದರು.
39 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದು: “ಕುರುಡನು ಕುರುಡನಿಗೆ ದಾರಿತೋರಿಸಬಲ್ಲನೋ? ಅವರಿಬ್ಬರೂ ಹಳ್ಳಕ್ಕೆ ಬೀಳುವರಲ್ಲವೇ? 40 ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ, ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನಷ್ಟೇ.
41 “ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? 42 ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೀನು ತೆಗೆಯದೆ ನಿನ್ನ ಸಹೋದರನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು, ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.
ಮರ ಮತ್ತು ಅದರ ಫಲಗಳು
43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಇಲ್ಲವೆ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವುದು. ಏಕೆಂದರೆ ಮನುಷ್ಯರು ಮುಳ್ಳುಗಿಡಗಳಲ್ಲಿ ಅಂಜೂರಗಳನ್ನು ಕೀಳುವುದಿಲ್ಲ, ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿಗಳನ್ನು ಕೊಯ್ಯುವುದಿಲ್ಲ. 45 ಒಳ್ಳೆಯವನು ತನ್ನ ಹೃದಯದ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಆದರೆ ಕೆಟ್ಟವನು ತನ್ನ ಹೃದಯದ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
ಮನೆ ಕಟ್ಟಿದ ಬುದ್ಧಿವಂತ ಹಾಗೂ ಬುದ್ಧಿಹೀನ
46 “ನನ್ನನ್ನು ನೀವು, ‘ಕರ್ತದೇವರೇ, ಕರ್ತದೇವರೇ,’ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವುದು ಏಕೆ? 47 ಯಾರು ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ ಅದರಂತೆ ನಡೆಯುತ್ತಾರೋ, ಅಂಥವರು ಯಾರಿಗೆ ಸಮಾನರಾಗಿದ್ದಾರೆಂದು ನಾನು ನಿಮಗೆ ತೋರಿಸುತ್ತೇನೆ. 48 ಅವರು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ, ಮನೆ ಕಟ್ಟಿದವರಿಗೆ ಸಮಾನರಾಗಿದ್ದಾರೆ. ಪ್ರಳಯವು ಎದ್ದು, ಪ್ರವಾಹವು ಆ ಮನೆಗೆ ರಭಸವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು, ಏಕೆಂದರೆ ಅದು ಬಲವಾಗಿ ಕಟ್ಟಲಾಗಿತ್ತು. 49 ಆದರೆ ನನ್ನ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದೆ ಇರುವವರು, ಅಸ್ತಿವಾರವಿಲ್ಲದೆ ಮರಳಿನ ಮೇಲೆ ಮನೆ ಕಟ್ಟಿದವರಿಗೆ ಹೋಲಿಕೆಯಾಗಿದ್ದಾರೆ. ಪ್ರವಾಹವು ಆ ಮನೆಗೆ ಅಪ್ಪಳಿಸಿದಾಗ, ಕೂಡಲೇ ಅದು ಕುಸಿದು ಬಿತ್ತು. ಹೀಗೆ ಆ ಮನೆಯು ಸರ್ವನಾಶವಾಯಿತು.”