13
ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನಾಶ
ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು. ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ? ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ. ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ? ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.
ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ. ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.
“ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು. ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’ ”
ಸಬ್ಬತ್ ದಿನದಲ್ಲಿ ಒಬ್ಬ ಸ್ತ್ರೀ ಗುಣವಾದದ್ದು
10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು, 11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು. 12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ, 13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.
15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ? 16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.
17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.
ಸಾಸಿವೆಕಾಳಿನ ಸಾಮ್ಯ ಹಾಗೂ ಹುಳಿಹಿಟ್ಟಿನ ಸಾಮ್ಯ
18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ? 19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.
20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ? 21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ*ಸುಮಾರು ಮೂವತ್ತು ಸೇರು ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
ಇಕ್ಕಟ್ಟಾದ ಬಾಗಿಲು
22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು. 23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು,
ಯೇಸು ಅವರಿಗೆ, 24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. 25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ,
“ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.
26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.
27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. 29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು. 30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
ಯೆರೂಸಲೇಮಿಗಾಗಿ ಯೇಸುವಿನ ಶೋಕ
31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.
32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ. 33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!
34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು. 35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ಕೀರ್ತನೆ 118:26 ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

*13:21 ಸುಮಾರು ಮೂವತ್ತು ಸೇರು

13:35 ಕೀರ್ತನೆ 118:26