7
ತೀರ್ಪು ಮಾಡುವುದು
“ತೀರ್ಪುಮಾಡಬೇಡಿರಿ, ಆಗ ನಿಮಗೂ ಸಹ ತೀರ್ಪಾಗುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿನ ಪ್ರಕಾರವೇ ನಿಮಗೂ ತೀರ್ಪಾಗುವುದು, ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು.
“ನೀನು ನಿನ್ನ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? ನಿನ್ನ ಕಣ್ಣಿನಲ್ಲಿಯೇ ಮರದ ದಿಮ್ಮಿ ಇರುವಾಗ, ನಿನ್ನ ಸಹೋದರನಿಗೆ, ‘ನಾನು ನಿನ್ನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆದುಬಿಡುತ್ತೇನೆ,’ ಎಂದು ನೀನು ಹೇಳುವುದು ಹೇಗೆ? ಕಪಟಿಯೇ, ಮೊದಲು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು. ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು, ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.
“ಪವಿತ್ರವಾದದ್ದನ್ನು ನಾಯಿಗಳಿಗೆ ಕೊಡಬೇಡಿರಿ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಚೆಲ್ಲಬೇಡಿರಿ. ಹಾಗೆ ಮಾಡಿದರೆ ಹಂದಿಗಳು ಮುತ್ತುಗಳನ್ನು ತಮ್ಮ ಕಾಲುಗಳಿಂದ ತುಳಿದು ಹಾಕಿಯಾವು. ನಾಯಿಗಳು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.
ಬೇಡಿರಿ, ಹುಡುಕಿರಿ, ತಟ್ಟಿರಿ
“ಬೇಡಿಕೊಳ್ಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.
“ನಿಮ್ಮಲ್ಲಿ ಯಾವನಾದರೂ ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಅವನಿಗೆ ಕಲ್ಲನ್ನು ಕೊಡುವನೇ? 10 ಇಲ್ಲವೆ ಮೀನನ್ನು ಕೇಳಿದರೆ ಅವನಿಗೆ ಹಾವನ್ನು ಕೊಡುವನೇ? 11 ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತಮ್ಮಲ್ಲಿ ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯವುಗಳನ್ನು ಕೊಡುವರಲ್ಲವೇ! 12 ಆದ್ದರಿಂದ, ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಬಯಸುತ್ತೀರೋ, ಅದರಂತೆಯೇ ನೀವು ಅವರಿಗೆ ಮಾಡಿರಿ; ಇದೇ ನಿಯಮ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶವು.
ಇಕ್ಕಟ್ಟಾದ ಹಾಗೂ ವಿಶಾಲ ಬಾಗಿಲು
13 “ಇಕ್ಕಟ್ಟಾದ ಬಾಗಿಲಿನಿಂದ ಪ್ರವೇಶಿಸಿರಿ. ಏಕೆಂದರೆ ನಾಶಕ್ಕೆ ಒಯ್ಯುವ ಬಾಗಿಲು, ಅಗಲವೂ ಅದರ ಮಾರ್ಗವು ವಿಶಾಲವೂ ಆಗಿವೆ; ಅದರೊಳಗೆ ಪ್ರವೇಶಿಸುವವರು ಅನೇಕರು. 14 ಜೀವಕ್ಕೆ ಒಯ್ಯುವ ಬಾಗಿಲು ಇಕ್ಕಟ್ಟಾದದ್ದೂ ದಾರಿಯು ಕಷ್ಟಕರವಾದದ್ದೂ ಆಗಿದೆ; ಅದನ್ನು ಕಂಡು ಹಿಡಿಯುವವರು ಕೆಲವರು ಮಾತ್ರ.
ಮರ ಹಾಗೂ ಫಲ
15 “ಕುರಿಯ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆ. ಏಕೆಂದರೆ ಅವರು ಒಳಗೆ ಕ್ರೂರವಾದ ತೋಳಗಳಾಗಿದ್ದಾರೆ. 16 ಅವರವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಿಂದ ದ್ರಾಕ್ಷಿಯನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಕೀಳುವರೋ? 17 ಅದರಂತೆಯೇ, ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಆದರೆ ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು, ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡಲಾರದು. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 20 ಆದ್ದರಿಂದ ಅವರವರ ಫಲಗಳಿಂದಲೇ ನೀವು ಅವರನ್ನು ತಿಳಿದುಕೊಳ್ಳುವಿರಿ.
ನಿಜ ಹಾಗೂ ಸುಳ್ಳು ಶಿಷ್ಯರು
21 “ನನ್ನನ್ನು, ‘ಸ್ವಾಮೀ, ಸ್ವಾಮೀ,’ ಎಂದು ಹೇಳುವವರೆಲ್ಲರೂ ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ. ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಅದರಲ್ಲಿ ಪ್ರವೇಶಿಸುವನು. 22 ಆ ದಿನದಲ್ಲಿ, ‘ಕರ್ತದೇವರೇ, ಕರ್ತದೇವರೇ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು. 23 ಆಗ ನಾನು ಅವರಿಗೆ, ‘ನಿಮ್ಮನ್ನು ನಾನೆಂದೂ ಅರಿಯೆನು, ನಿಯಮ ಮೀರಿ ಬಾಳಿದವರೇ ನನ್ನಿಂದ ತೊಲಗಿಹೋಗಿರಿ!’*ಕೀರ್ತನೆ 6:8; ಕೀರ್ತನೆ 119:115 ಎಂದು ಹೇಳಿಬಿಡುವೆನು.
ಬುದ್ಧಿವಂತ ಹಾಗೂ ಬುದ್ಧಿಹೀನ
24 “ಆದ್ದರಿಂದ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವ ಪ್ರತಿಯೊಬ್ಬನೂ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಸಮಾನ. 25 ಮಳೆಯು ಸುರಿದು ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಆ ಮನೆ ಬೀಳಲಿಲ್ಲ. ಏಕೆಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಕಟ್ಟಲಾಗಿತ್ತು. 26 ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬನು ಅವುಗಳಂತೆ ನಡೆಯದೆ ಹೋದರೆ, ಅವನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಸಮಾನ. 27 ಮಳೆಯು ಸುರಿದು, ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆಗ ಆ ಮನೆ ಕುಸಿದು ಬಿತ್ತು. ಅದರ ಬೀಳುವಿಕೆಯು ಭಯಂಕರವಾಗಿತ್ತು,” ಎಂದರು.
28 ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಅವರ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. 29 ಏಕೆಂದರೆ, ಯೇಸು ಅವರ ನಿಯಮ ಬೋಧಕರಂತೆ ಬೋಧಿಸದೆ, ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು.

*7:23 ಕೀರ್ತನೆ 6:8; ಕೀರ್ತನೆ 119:115