27
ಯೂದನು ನೇಣು ಹಾಕಿಕೊಂಡದ್ದು
1 ಬೆಳಗಾದಾಗ, ಎಲ್ಲಾ ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವುದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು. 2 ಅವರು ಯೇಸುವನ್ನು ಕಟ್ಟಿ, ಕರೆದುಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದರು.
3 ಯೇಸುವಿಗೆ ದ್ರೋಹಮಾಡಿದ ಯೂದನು ಗುರುವಿಗೆ ಮರಣ ದಂಡನೆಯ ತೀರ್ಪಾದದ್ದನ್ನು ಕಂಡು ವಿಷಾದಿಸಿ, ಆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಮರಳಿ ತಂದನು. 4 ಅವನು, “ನಾನು ನಿರಪರಾಧಿಯ ರಕ್ತಕ್ಕೆ ದ್ರೋಹ ಬಗೆದು ಪಾಪಮಾಡಿದ್ದೇನೆ,” ಎಂದನು.
ಅದಕ್ಕೆ ಅವರು, “ನಮಗೇನು? ನೀನೇ ಅದನ್ನು ನೋಡಿಕೋ,” ಎಂದರು.
5 ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ನೇಣು ಹಾಕಿಕೊಂಡನು.
6 ಆಗ ಮುಖ್ಯಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು, “ಇವುಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ನ್ಯಾಯವಲ್ಲ. ಅದು ರಕ್ತದ ಕ್ರಯವಾಗಿದೆ,” ಎಂದರು. 7 ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಳಿಡುವುದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು. 8 ಈ ಕಾರಣದಿಂದ ಆ ಹೊಲವನ್ನು “ರಕ್ತದ ಹೊಲ” ಎಂದು ಈ ದಿನದವರೆಗೆ ಕರೆಯಲಾಗುತ್ತಿದೆ. 9 ಹೀಗೆ ಪ್ರವಾದಿ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ, “ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, 10 ಕರ್ತನು ನನಗೆ ಆಜ್ಞಾಪಿಸಿದಂತೆ ಅವುಗಳನ್ನು, ‘ಕುಂಬಾರನ ಹೊಲ’ ಕೊಳ್ಳಲು ಕೊಟ್ಟರು,”*ಜೆಕರ್ಯ 11:12,13; ಯೆರೆ 19:1-13; 32:6-9 ಎಂಬುದು.
ಪಿಲಾತನು ಯೇಸುವನ್ನು ಮರಣದಂಡನೆಗೆ ಒಪ್ಪಿಸಿದ್ದು
11 ಯೇಸು ರಾಜ್ಯಪಾಲನ ಮುಂದೆ ನಿಂತಿದ್ದರು. ಆಗ ಅವನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
ಅದಕ್ಕೆ ಯೇಸು ಅವನಿಗೆ, “ನೀನೇ ಹೇಳುತ್ತಿದ್ದಿ,” ಎಂದರು.
12 ಆಗ ಮುಖ್ಯಯಾಜಕರೂ ಹಿರಿಯರೂ ಯೇಸುವಿನ ಮೇಲೆ ದೂರು ಹೇಳುತ್ತಿದ್ದರೂ ಅವರು ಏನೂ ಉತ್ತರ ಕೊಡಲಿಲ್ಲ. 13 ಆಗ ಪಿಲಾತನು ಯೇಸುವಿಗೆ, “ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುತ್ತಿರುವುದು ನಿನಗೆ ಕೇಳಿಸುವುದಿಲ್ಲವೋ?” ಎಂದನು. 14 ಒಂದು ಮಾತಿಗಾದರೂ ಯೇಸು ಅವನಿಗೆ ಉತ್ತರ ಕೊಡದೆ ಇದ್ದುದರಿಂದ ರಾಜ್ಯಪಾಲನು ಅತ್ಯಾಶ್ಚರ್ಯಪಟ್ಟನು.
15 ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಕೊಡುವ ಪದ್ಧತಿಯಿತ್ತು. 16 ಆ ಸಮಯದಲ್ಲಿ ಬರಬ್ಬನೆಂಬ†ಬರಬ್ಬನ ಪ್ರಾರಂಭದ ಹೆಸರು ಯೇಸು ಪ್ರಸಿದ್ಧ ಸೆರೆಯಾಳು ಅವರಲ್ಲಿ ಇದ್ದನು. 17 ಜನಸಮೂಹ ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಿಮಗೆ ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು. 18 ಯೇಸುವನ್ನು ಅವರು ಹೊಟ್ಟೆಕಿಚ್ಚಿನಿಂದ ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.
19 ಪಿಲಾತನು ನ್ಯಾಯಾಸನದ ಮೇಲೆ ಕೂತಿದ್ದಾಗ, ಅವನ ಹೆಂಡತಿಯು ಅವನಿಗೆ, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ. ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ,” ಎಂದು ಹೇಳಿ ಕಳುಹಿಸಿದಳು.
20 ಆದರೆ ಮುಖ್ಯಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸುವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹವನ್ನು ಒಡಂಬಡಿಸಿದರು.
21 ರಾಜ್ಯಪಾಲನು ಅವರಿಗೆ, “ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕೆನ್ನುತ್ತೀರಿ?” ಎಂದು ಕೇಳಲು ಅವರು,
“ಬರಬ್ಬನನ್ನು,” ಎಂದರು.
22 ಪಿಲಾತನು ಅವರಿಗೆ, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಅವರೆಲ್ಲರೂ,
“ಆತನನ್ನು ಶಿಲುಬೆಗೆ ಹಾಕಿಸು,” ಎಂದು ಹೇಳಿದರು.
23 ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು,
“ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
24 ಪಿಲಾತನು ತನ್ನ ಯತ್ನ ನಡೆಯಲಿಲ್ಲವೆಂದೂ ಅದಕ್ಕೆ ಬದಲಾಗಿ ಗದ್ದಲವೇ ಹೆಚ್ಚಾಗುತ್ತದೆಂದೂ ನೋಡಿ, ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು, “ಈ ನೀತಿವಂತನ ರಕ್ತದ ವಿಷಯದಲ್ಲಿ ನಾನು ನಿರಪರಾಧಿ, ಇದಕ್ಕೆ ನೀವೇ ಜವಾಬ್ದಾರಿ,” ಎಂದನು.
25 ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.
26 ಆಗ ಪಿಲಾತನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
ಯೇಸುವನ್ನು ಸೈನಿಕರು ಅಪಹಾಸ್ಯಮಾಡಿದ್ದು
27 ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜಭವನದೊಳಕ್ಕೆ ತೆಗೆದುಕೊಂಡುಹೋಗಿ ಸೈನ್ಯದ ಪೂರ್ಣತಂಡವನ್ನು ಯೇಸುವಿನ ಸುತ್ತಲೂ ಕೂಡಿಸಿದರು. 28 ಅವರು ಯೇಸುವಿನ ಬಟ್ಟೆಗಳನ್ನು ತೆಗೆದುಹಾಕಿ ಕಡುಗೆಂಪು ನಿಲುವಂಗಿಯನ್ನು ಅವರಿಗೆ ತೊಡಿಸಿದರು. 29 ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು, ಯೇಸುವಿನ ತಲೆಯ ಮೇಲಿಟ್ಟು, ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವನ್ನು ಹಾಸ್ಯಮಾಡಿದರು. 30 ಅವರು ಯೇಸುವಿನ ಮೇಲೆ ಉಗುಳಿ, ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು. 31 ಹೀಗೆ ಹಾಸ್ಯ ಮಾಡಿದ ಮೇಲೆ, ಆ ನಿಲುವಂಗಿಯನ್ನು ಯೇಸುವಿನಿಂದ ತೆಗೆದುಹಾಕಿ ಅವರ ವಸ್ತ್ರವನ್ನು ಹೊದಿಸಿ, ಯೇಸುವನ್ನು ಶಿಲುಬೆಗೆ ಹಾಕುವುದಕ್ಕಾಗಿ ನಡೆಸಿಕೊಂಡು ಹೋದರು.
ಯೇಸುವನ್ನು ಶಿಲುಬೆಗೆ ಹಾಕಿದರು
32 ಅವರು ಹೊರಗೆ ಹೋಗುತ್ತಿರುವಾಗ, ಕುರೇನೆ ಗ್ರಾಮದ ಸೀಮೋನನೆಂಬ ಮನುಷ್ಯನನ್ನು ಕಂಡು, ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು. 33 ಆಮೇಲೆ ಅವರು “ಗೊಲ್ಗೊಥಾ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಬಂದರು. ಅದರ ಅರ್ಥ “ತಲೆಬುರುಡೆಯ ಸ್ಥಳ” ಎಂಬುದು. 34 ಆಗ ಅವರು ಯೇಸುವಿಗೆ ಕಹಿ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಯೇಸು ಅದನ್ನು ರುಚಿ ನೋಡಿ ಕುಡಿಯಲು ಇಷ್ಟಪಡಲಿಲ್ಲ. 35 ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ, ಅವರ ಬಟ್ಟೆಗಳಿಗಾಗಿ ಸೈನಿಕರು ಚೀಟುಹಾಕಿ ಹಂಚಿಕೊಂಡರು 36 ಮತ್ತು ಅವರು ಅಲ್ಲಿ ಕೆಳಗೆ ಕುಳಿತು ಕಾವಲು ಕಾಯುತ್ತಿದ್ದರು. 37 ಯೇಸುವಿನ ತಲೆಯ ಮೇಲ್ಭಾಗದಲ್ಲಿ ಅವರ ವಿರುದ್ಧ ದೋಷಾರೋಪಣೆಯನ್ನು ಬರೆದಿಟ್ಟರು. ಅದೇನೆಂದರೆ:
ಈತನು ಯೆಹೂದ್ಯರ ಅರಸನಾದ ಯೇಸು.
38 ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು. 39 ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ, 40 “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ, ನೀನು ದೇವಪುತ್ರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ,” ಎಂದರು. 41 ಅದೇ ಮೇರೆಗೆ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವನ್ನು ಹಾಸ್ಯಮಾಡಿ, 42 “ಈತನು ಬೇರೆಯವರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು! ಈತನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗೆ ಇಳಿದು ಬರಲಿ. ಆಗ ನಾವು ಈತನನ್ನು ನಂಬುವೆವು. 43 ಈತನು ದೇವರಲ್ಲಿ ಭರವಸೆ ಇಟ್ಟಿದ್ದಾನೆ. ದೇವರಿಗೆ ಈತನಲ್ಲಿ ಇಷ್ಟವಿದ್ದರೆ, ದೇವರೇ ಈತನನ್ನು ಈಗ ಬಿಡಿಸಲಿ, ಏಕೆಂದರೆ ಈತನು, ‘ನಾನು ದೇವಪುತ್ರನು’ ಎಂದು ಹೇಳಿದ್ದಾನೆ,” ಎಂದರು. 44 ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು.
ಯೇಸುವಿನ ಮರಣ
45 ಆಗ ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದರೆ, “ನನ್ನ ದೇವರೇ, ನನ್ನ ದೇವರೇ ಏಕೆ ನನ್ನನ್ನು ಕೈಬಿಟ್ಟಿದ್ದೀ?”‡ಕೀರ್ತನೆ 22:1 ಎಂದು ಮಹಾಧ್ವನಿಯಿಂದ ಕೂಗಿ ಹೇಳಿದರು.
47 ಆಗ ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
48 ಕೂಡಲೇ ಅವರಲ್ಲಿ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯುವುದಕ್ಕೆ ಕೊಟ್ಟನು. 49 ಉಳಿದವರು, “ಇರಲಿ ಬಿಡು, ಎಲೀಯನು ಬಂದು ಈತನನ್ನು ರಕ್ಷಿಸುವನೇನೋ ನೋಡೋಣ,” ಎಂದರು.
50 ಯೇಸು ತಿರುಗಿ ಗಟ್ಟಿಯಾಗಿ ಕೂಗಿ, ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.
51 ಅದೇ ಸಮಯದಲ್ಲಿ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. ಭೂಮಿಯು ಕಂಪಿಸಿತು. ಬಂಡೆಗಳು ಸೀಳಿಹೋದವು. 52 ಇದಲ್ಲದೆ ಸಮಾಧಿಗಳು ತೆರೆದುಕೊಂಡವು. ಮರಣ ಹೊಂದಿದ ಅನೇಕ ಭಕ್ತರ ದೇಹಗಳು ಎದ್ದವು. 53 ಯೇಸು ಪುನರುತ್ಥಾನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪವಿತ್ರ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
54 ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಸಂಭವಿಸಿದ್ದೆಲ್ಲವನ್ನೂ ಕಂಡು ಬಹಳವಾಗಿ ಭಯಪಟ್ಟು, “ನಿಜವಾಗಿಯೂ ಈತನು ದೇವಪುತ್ರನಾಗಿದ್ದನು,” ಎಂದರು.
55 ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ, ಅವರಿಗೆ ಸೇವೆಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು. 56 ಅವರಲ್ಲಿ ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಜೆಬೆದಾಯನ ಮಕ್ಕಳ ತಾಯಿ ಇದ್ದರು.
ಯೇಸುವಿನ ಸಮಾಧಿ
57 ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು. 58 ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿಕೊಂಡನು. ಆಗ ಪಿಲಾತನು ದೇಹವನ್ನು ಅವನಿಗೆ ಒಪ್ಪಿಸುವಂತೆ ಅಪ್ಪಣೆಕೊಟ್ಟನು. 59 ಯೋಸೇಫನು ಆ ದೇಹವನ್ನು ತೆಗೆದುಕೊಂಡ ಮೇಲೆ, ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿ, 60 ಬಂಡೆಯಲ್ಲಿ ತಾನು ಕೊರೆದಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು, ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು. 61 ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.
ಸಮಾಧಿಯ ಹತ್ತಿರ ಕಾವಲುಗಾರರು
62 ಮರುದಿನ, ಅಂದರೆ ಪಸ್ಕಹಬ್ಬದ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರು, ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು, 63 “ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿರುವಾಗ, ‘ಮೂರು ದಿನಗಳಾದ ಮೇಲೆ ನಾನು ತಿರುಗಿ ಏಳುವೆನು,’ ಎಂದು ಹೇಳಿದ್ದು ನಮಗೆ ನೆನಪಿದೆ. 64 ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ಆತನನ್ನು ಕದ್ದುಕೊಂಡು ಹೋಗಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿಯಾರು. ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು. ಆದಕಾರಣ ಮೂರನೆಯ ದಿನದವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆಕೊಡಬೇಕು,” ಎಂದರು.
65 ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲಾ, ಹೋಗಿ ನಿಮಗೆ ತಿಳಿದಮಟ್ಟಿಗೆ ಅದನ್ನು ಭದ್ರಪಡಿಸಿರಿ,” ಎಂದನು. 66 ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ, ಕಾವಲನ್ನು ಇಟ್ಟರು.