2
ಯೇಸು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದ್ದು
ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂದಿರುಗಿದಾಗ, ಅವರು ಮನೆಗೆ ಬಂದಿದ್ದಾರೆಂಬ ವಾರ್ತೆಯು ಜನರಲ್ಲಿ ಹಬ್ಬಿತು. ಜನರು ಗುಂಪಾಗಿ ಕೂಡಿಬಂದದ್ದರಿಂದ ಮನೆಯೊಳಗಾಗಲಿ ಬಾಗಿಲ ಬಳಿಯಲ್ಲಾಗಲಿ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದರು. ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಅಲ್ಲಿಗೆ ಬಂದರು. ಜನರ ಗುಂಪಿನ ನಿಮಿತ್ತ ಅವನನ್ನು ಯೇಸುವಿನ ಬಳಿಗೆ ತರಲು ಸಾಧ್ಯವಾಗದೆ ಹೋಯಿತು. ಆದ್ದರಿಂದ ಅವರು ಯೇಸು ಇದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಒಡೆದು ತೆರೆದು, ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
ಅಲ್ಲಿ ಕುಳಿತಿದ್ದ ಕೆಲವು ನಿಯಮ ಬೋಧಕರು, “ಈತನು ಏಕೆ ಹೀಗೆ ಮಾತನಾಡುತ್ತಾನೆ? ಈತನು ದೇವದೂಷಣೆ ಮಾಡುತ್ತಿದ್ದಾನೆ! ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮೊಳಗೇ ಆಲೋಚಿಸಿಕೊಳ್ಳುತ್ತಿದ್ದರು.
ಯೇಸು ಅವರು ಯೋಚಿಸುತ್ತಿರುವುದನ್ನು ಕೂಡಲೇ ತಮ್ಮ ಆತ್ಮದಲ್ಲಿ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುವುದೇಕೆ? ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ,’ ಎಂದು ಹೇಳುವುದೋ? 10 ಆದರೆ ಮನುಷ್ಯಪುತ್ರನಾದ*ಮನುಷ್ಯಪುತ್ರ ಎಂಬುದು ಯೇಸುವನ್ನು ಸೂಚಿಸುತ್ತದೆ. ಯೇಸು ಈ ರೀತಿಯಾಗಿ ತಮ್ಮ ಬಗ್ಗೆ ಮಾತನಾಡುತ್ತಿದ್ದರು. ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, 11 “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು. 12 ಕೂಡಲೇ ಅವನು ಎದ್ದು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಆಗ ಎಲ್ಲರು ವಿಸ್ಮಯಗೊಂಡು, “ಇಂಥದ್ದನ್ನು ನಾವು ಹಿಂದೆಂದೂ ಕಂಡಿರಲಿಲ್ಲ!” ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
ಲೇವಿಯನ್ನು ಕರೆದದ್ದು
13 ಯೇಸು ಪುನಃ ಸರೋವರದ ತೀರಕ್ಕೆ ಹೋದರು. ಜನರೆಲ್ಲರೂ ಯೇಸುವಿನ ಬಳಿಗೆ ಬಂದರು. ಯೇಸು ಅವರಿಗೆ ಉಪದೇಶಿಸಿದರು. 14 ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದ ಕಟ್ಟೆಯಲ್ಲಿ ಕುಳಿತಿದ್ದ ಅಲ್ಫಾಯನ ಮಗ ಲೇವಿಯನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
15 ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ತಿರಸ್ಕಾರ ಹೊಂದಿದ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. ಬಹುಜನರು ಅವರನ್ನು ಹಿಂಬಾಲಿಸುತ್ತಿದ್ದರು. 16 ಫರಿಸಾಯರಾದ ನಿಯಮ ಬೋಧಕರು ಪಾಪಿಗಳ ಮತ್ತು ಸುಂಕದವರ ಸಂಗಡ ಯೇಸು ಊಟಮಾಡುವುದನ್ನು ಕಂಡು, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
17 ಯೇಸು ಇದನ್ನು ಕೇಳಿಸಿಕೊಂಡು ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ, ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು.
ಉಪವಾಸದ ವಿಷಯದಲ್ಲಿ ಪ್ರಶ್ನೆ
18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸಮಾಡುತ್ತಿದ್ದರು. ಆಗ ಕೆಲವರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
19 ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ಹೇಗೆ ಉಪವಾಸ ಮಾಡುವರು? ಮದುಮಗನು ಅವರ ಸಂಗಡ ಇರುವವರೆಗೆ ಅವರು ಉಪವಾಸ ಮಾಡಲಾಗದು. 20 ಆದರೆ ಮದುಮಗನು ಅವರಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆಗ ಅವರು ಉಪವಾಸ ಮಾಡುವರು.
21 “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಹಚ್ಚಿದರೆ, ಆ ತೇಪೆಯು ಬಟ್ಟೆಯನ್ನು ಹಿಂಜಿ ಹರಕನ್ನು ಇನ್ನೂ ದೊಡ್ಡದು ಮಾಡುತ್ತದೆ. 22 ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ,” ಎಂದು ಹೇಳಿದರು.
ಯೇಸು ಸಬ್ಬತ್ ದಿನಕ್ಕೂ ಒಡೆಯ
23 ಒಂದು ಸಬ್ಬತ್ ದಿನದಂದು ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಯೇಸುವಿನ ಶಿಷ್ಯರು ನಡೆಯುತ್ತಾ ಹೋಗುವಾಗ ತೆನೆಗಳನ್ನು ಮುರಿದುಕೊಂಡರು. 24 ಆಗ ಫರಿಸಾಯರು ಯೇಸುವಿಗೆ, “ಇಲ್ಲಿ ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಏಕೆ ಮಾಡುತ್ತಾರೆ?” ಎಂದು ಹೇಳಿದರು.
25 ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗಲೂ ಅವಶ್ಯಕತೆಯಲ್ಲಿದ್ದಾಗಲೂ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೋ? 26 ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ, ದೇವರ ಆಲಯದೊಳಗೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ನಿಯಮ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನು,” ಎಂದರು.
27 ಅನಂತರ ಯೇಸು ಅವರಿಗೆ, “ಮನುಷ್ಯನು ಸಬ್ಬತ್ ದಿನಕ್ಕಾಗಲಿ ಅಲ್ಲ, ಸಬ್ಬತ್ ದಿನವು ಮನುಷ್ಯನಿಗಾಗಿ ಮಾಡಲಾಯಿತು. 28 ಆದ್ದರಿಂದ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದೇನೆ,” ಎಂದು ಹೇಳಿದರು.

*2:10 ಮನುಷ್ಯಪುತ್ರ ಎಂಬುದು ಯೇಸುವನ್ನು ಸೂಚಿಸುತ್ತದೆ. ಯೇಸು ಈ ರೀತಿಯಾಗಿ ತಮ್ಮ ಬಗ್ಗೆ ಮಾತನಾಡುತ್ತಿದ್ದರು.