ಫಿಲೆಮೋನನಿಗೆ
ಪೌಲನು ಬರೆದ ಪತ್ರಿಕೆ
1
ಸುವಾರ್ತೆಯನ್ನು ಸಾರಿದ್ದರಿಂದ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ,
 
ನಮಗೆ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆಮೋನನಿಗೂ ಸಹೋದರಿ ಅಪ್ಫಿಯಳಿಗೂ ನಮ್ಮ ಸಹ ಸೈನಿಕನಾದ ಅರ್ಖಿಪ್ಪನಿಗೂ ನಿಮ್ಮ ಮನೆಯಲ್ಲಿ ಸೇರುವ ಸಭೆಯವರಿಗೂ ಬರೆಯುವುದೇನೆಂದರೆ:
 
ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಇರಲಿ.
 
ಕೃತಜ್ಞತಾ ಪ್ರಾರ್ಥನೆ
ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ನಮ್ಮ ಕರ್ತ ಆಗಿರುವ ಯೇಸುವಿನಲ್ಲಿ ನಿನಗಿರುವ ವಿಶ್ವಾಸವನ್ನೂ ಪರಿಶುದ್ಧರೆಲ್ಲರಿಗಾಗಿ ನಿನಗಿರುವ ಪ್ರೀತಿಯನ್ನೂ ಕುರಿತು ನಾನು ಕೇಳಿದ್ದೇನೆ. ನಿನ್ನ ವಿಶ್ವಾಸದಲ್ಲಿ ಅನ್ಯೋನ್ಯತೆಯು ನಿನ್ನ ಎಲ್ಲಾ ಒಳ್ಳೆಯದರ ಆಳವಾದ ತಿಳುವಳಿಕೆಯನ್ನು ಕ್ರಿಸ್ತ ಯೇಸುವಿಗಾಗಿ ಪರಿಣಾಮಗೊಳಿಸಿ ಹಂಚುವಂತೆ ನಾನು ಪ್ರಾರ್ಥಿಸುತ್ತೇನೆ. ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಉತ್ತೇಜನವಾದ್ದರಿಂದ, ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಆದರಣೆಯೂ ಉಂಟಾದವು.
ಓನೇಸಿಮನಿಗಾಗಿ ಪೌಲನ ಬೇಡಿಕೆ
ಆದಕಾರಣ, ನಾನು ಈಗ ನಿನಗೆ ಏನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಬಹು ಧೈರ್ಯವಿದ್ದರೂ ಹಾಗೆ ಆಜ್ಞಾಪಿಸದೆ, ಈಗ ಕ್ರಿಸ್ತ ಯೇಸುವಿನ ಸೆರೆಯಾಳೂ ಮುದುಕನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ. 10 ನಾನು ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ*ಓನೇಸಿಮ ಅಂದರೆ, ಪ್ರಯೋಜಕನು ವಿಷಯದಲ್ಲಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾನು ಸೆರೆಯಲ್ಲಿದ್ದಾಗ ಅವನು ನನಗೆ ಆತ್ಮಿಕ ಮಗನಾದನು. 11 ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.
12 ನನಗೆ ಪ್ರಾಣವಾಗಿರುವ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ನಾನು ಕಳುಹಿಸಿ ಕೊಡುತ್ತಿದ್ದೇನೆ. 13 ಸುವಾರ್ತೆಯ ನಿಮಿತ್ತ ಸೆರೆಯಲ್ಲಿರುವ ನನಗೆ ಉಪಚಾರ ಮಾಡುವಂತೆ ನಿನಗೆ ಬದಲಾಗಿ ಓನೇಸಿಮನನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಅಪೇಕ್ಷಿಸಿದ್ದೆನು. 14 ಆದರೆ ನಿನ್ನ ಉಪಚಾರವು ಬಲಾತ್ಕಾರದಿಂದಾಗದೆ, ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ, ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ. 15 ಓನೇಸಿಮನು ಸ್ವಲ್ಪಕಾಲ ನಿನ್ನಿಂದ ಅಗಲಿದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ! 16 ಇನ್ನು ಮೇಲೆ ಅವನು ದಾಸನಾಗದೆ, ದಾಸನಿಗಿಂತ ಮೇಲಾಗಿ ಪ್ರಿಯ ಸಹೋದರನಂತಾಗಬೇಕು. ಅವನು ವಿಶೇಷವಾಗಿ ನನಗೆ ಬಹು ಪ್ರಿಯನಾಗಿದ್ದಾನೆ. ಆದರೂ ಓನೇಸಿಮನು ನಿನಗೆ ಮಾನವ ರೀತಿಯಲ್ಲಿಯೂ ಕರ್ತ ಯೇಸುವಿನಲ್ಲಿಯೂ ಒಬ್ಬ ಸಹೋದರನಾಗಿ ಇನ್ನು ಎಷ್ಟೋ ಪ್ರಿಯನಾಗಿರಬೇಕಲ್ಲವೇ.
17 ಆದಕಾರಣ ನಾನು ನಿನಗೆ ಅನ್ಯೋನ್ಯತೆವುಳ್ಳವನೆಂದು ನೀನು ಎಣಿಸುವುದಾದರೆ ನನ್ನನ್ನು ಸ್ವೀಕರಿಸಿಕೊಳ್ಳುವ ಪ್ರಕಾರವೇ ಅವನನ್ನು ಸ್ವೀಕರಿಸು. 18 ಅವನು ನಿನಗೆ ಏನಾದರೂ ತಪ್ಪು ಮಾಡಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ನನ್ನ ಸ್ವಂತ ಕೈಯಲ್ಲಿ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನು ನಿನ್ನ ಪ್ರಾಣವನ್ನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕಾಗಿಲ್ಲ. 20 ಸಹೋದರನೇ ಹೌದು, ಕರ್ತ ಯೇಸುವಿನಲ್ಲಿ ನಿನ್ನಿಂದ ನನಗೆ ಈ ಸಹಾಯಮಾಡು; ಅದು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಉತ್ತೇಜನಗೊಳಿಸಲಿ. 21 ನಿನ್ನ ವಿಧೇಯತೆಯಲ್ಲಿ ಭರವಸೆಯುಳ್ಳವನಾಗಿ ನಾನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುವೆಯೆಂದು ನನಗೆ ಗೊತ್ತಿದೆ.
22 ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.
 
 
23 ಕ್ರಿಸ್ತ ಯೇಸುವಿಗಾಗಿ ನನ್ನ ಜೊತೆ ಸೆರೆಯಾಳಾಗಿರುವ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.
24 ನನ್ನ ಜೊತೆಕೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ ಹಾಗೂ ಲೂಕ ನಿನ್ನನ್ನು ವಂದಿಸುತ್ತಾರೆ.
 
25 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.

*1:10 ಓನೇಸಿಮ ಅಂದರೆ, ಪ್ರಯೋಜಕನು