ಕೀರ್ತನೆ 14
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
1 “ದೇವರು ಇಲ್ಲಾ,” ಎಂದು
ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ.
ಅವರು ಕೆಟ್ಟು ಹೋಗಿ, ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ;
ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ.
2 ದೇವರನ್ನು ಹುಡುಕುವ
ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ
ಯೆಹೋವ ದೇವರು ಸ್ವರ್ಗದಿಂದ,
ಮನುಷ್ಯರ ಮೇಲೆ ದೃಷ್ಟಿಸಿದರು.
3 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದಾರೆ;
ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ,
ಒಬ್ಬರಾದರೂ ಇಲ್ಲ.
4 ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ?
ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ?
ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.
5 ದೇವರು ನೀತಿವಂತರ ಸಹವಾಸದಲ್ಲಿ ಇರುವುದರಿಂದ,
ದುಷ್ಟತ್ವವನ್ನು ನಡೆಸುವವರು ಅತ್ಯಂತ ಭಯಭ್ರಾಂತರಾಗುವರು.
6 ದುಷ್ಟತ್ವ ನಡೆಸುವವರೇ, ನೀವು ಬಡವರ ಯೋಜನೆಗಳನ್ನು ನಿರಾಶೆಗೊಳಿಸುತ್ತೀರಿ,
ಆದರೆ ಯೆಹೋವ ದೇವರೇ ಅವರ ಆಶ್ರಯವಾಗಿದ್ದಾರೆ.
7 ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು!
ಯೆಹೋವ ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ,
ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.