ಕೀರ್ತನೆ 39
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದೂತೂನನಿಗಾಗಿ, ದಾವೀದನ ಕೀರ್ತನೆ.
1 “ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು,
ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು.
ದುಷ್ಟರು ನನ್ನ ಮುಂದೆ ಇರುವಾಗ
ನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,”
ಎಂದು ತೀರ್ಮಾನಿಸಿಕೊಂಡೆನು.
2 ಆದ್ದರಿಂದ ನಾನು ಮೌನವಾಗಿದ್ದೆನು.
ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು.
ಆದರೆ ನನ್ನ ವ್ಯಥೆಯು ಅಧಿಕವಾಯಿತು.
3 ನನ್ನ ಹೃದಯವು ಸಂತಾಪದಿಂದ ಕಾವೇರಿತು.
ನಾನು ಧ್ಯಾನವು ಬೆಂಕಿಯಂತೆ ಉರಿಯಿತು.
ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:
4 “ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ
ನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ,
ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ.
5 ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ.
ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ;
ಪ್ರತಿ ಮನುಷ್ಯನ ಜೀವನ
ಬರೀ ಉಸಿರೇ.
6 “ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ;
ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ;
ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು.
7 “ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು?
ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ.
8 ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ;
ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ.
9 ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ;
ಇದನ್ನು ಮಾಡಿದವರು ನೀವೇ.
10 ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ;
ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ.
11 ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗ
ಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ.
ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ.
12 “ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ;
ನನ್ನ ಮೊರೆಗೆ ಕಿವಿಗೊಡಿರಿ;
ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ;
ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ;
ನಾನೂ ಪ್ರವಾಸಿಯಾಗಿದ್ದೇನೆ.
13 ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ
ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”