ಕೀರ್ತನೆ 126
ಯಾತ್ರಾ ಗೀತೆ.
1 ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ
ನಾವು ಕನಸು ಕಂಡವರ ಹಾಗಿದ್ದೆವು.
2 ಆಗ ನಮ್ಮ ಬಾಯಿ ನಗೆಯಿಂದಲೂ,
ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು;
ಆಗ ಜನಾಂಗಗಳು,
“ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
3 ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ;
ಆದಕಾರಣ ಸಂತೋಷಿಸುತ್ತಾ ಇದ್ದೇವೆ.
4 ಯೆಹೋವ ದೇವರೇ, ನೆಗೆವನಲ್ಲಿರುವ*ನೆಗೆವನಲ್ಲಿರುವ ಅಂದರೆ ದೇಶದ ದಕ್ಷಿಣ ಪ್ರಾಂತ್ಯ ಹೊಳೆಗಳ ಹಾಗೆ
ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
5 ಕಣ್ಣೀರಿನಿಂದ ಬಿತ್ತುವವರು,
ಆನಂದ ಗೀತದೊಡನೆ ಕೊಯ್ಯುವರು;
6 ಬಿತ್ತಲು ಬೀಜವನ್ನು ಹೊತ್ತುಕೊಂಡು
ಅಳುತ್ತಾ ಹೋಗುವವರು,
ತಮ್ಮ ಸಿವುಡುಗಳನ್ನು ಹೊತ್ತುಕೊಂಡು
ಆನಂದ ಗೀತದೊಡನೆ ತಿರುಗಿ ಬರುವರು.