5
ಚರ್ಮದ ಸುರುಳಿ ಮತ್ತು ಕುರಿಮರಿ
ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯಲ್ಲಿ ಒಂದು ಚರ್ಮದ ಸುರುಳಿಯನ್ನು ಕಂಡೆನು. ಅದರ ಒಳಗೂ ಹಿಂಭಾಗದಲ್ಲಿಯೂ ಬರೆಯಲಾಗಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು, “ಈ ಸುರುಳಿಯ ಮುದ್ರೆಗಳನ್ನು ಬರೆಯುವುದಕ್ಕೂ ಅದನ್ನು ಬಿಚ್ಚುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಧ್ವನಿಯಿಂದ ಕೂಗುವುದನ್ನು ಕಂಡೆನು. ಆದರೆ ಆ ಸುರುಳಿಯನ್ನು ಬಿಚ್ಚಲು ಇಲ್ಲವೆ ಅದರಲ್ಲಿ ನೋಡಲು ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾವ ವ್ಯಕ್ತಿಗೂ ಆಗಲಿಲ್ಲ. ಆಗ ಸುರುಳಿಯನ್ನು ಬಿಚ್ಚುವುದಕ್ಕಾಗಲಿ, ಅದರಲ್ಲಿ ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅತ್ತೆನು. ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜರೂ ಆಗಿರುವವರು ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೆ ಜಯವೀರರಾಗಿದ್ದಾರೆ,” ಎಂದು ಹೇಳಿದನು.
ಆಗ ನಾನು, ಸಿಂಹಾಸನದ ಮಧ್ಯದಲ್ಲಿಯೂ ನಾಲ್ಕು ಜೀವಿಗಳು ಮತ್ತು ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ಬಲಿಗೋಸ್ಕರ ವಧೆಯಾಗಿದ್ದಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಭೂಮಿಯ ಮೇಲೆಲ್ಲಾ ಕಳುಹಿಸಲಾದ ದೇವರ ಏಳು ಆತ್ಮಗಳು. ಆ ಕುರಿಮರಿ ಆಗಿರುವವರು ಬಂದು ಸಿಂಹಾಸನದ ಮೇಲೆ ಕುಳಿತಿದ್ದವರ ಬಲಗೈಯೊಳಗಿಂದ ಸುರುಳಿಯನ್ನು ತೆಗೆದುಕೊಂಡರು. ಸುರುಳಿಯನ್ನು ತೆಗೆದುಕೊಂಡಾಗ, ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿ ಆಗಿರುವವರ ಮುಂದೆ ಅಡ್ಡಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು. ಅವರು ಹೊಸಹಾಡನ್ನು ಹಾಡುತ್ತಾ,
“ನೀವು ಸುರುಳಿಯನ್ನು ತೆಗೆದುಕೊಂಡು
ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ.
ಏಕೆಂದರೆ ನೀವು ವಧಿತರಾಗಿ,
ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು
ದೇವರಿಗಾಗಿ ಕೊಂಡುಕೊಂಡಿರುವಿರಿ.
10 ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿರಿ,
ಅವರು ಭೂಮಿಯ ಮೇಲೆ ಆಳುವರು!”
ಎಂದು ಹೇಳಿದರು.
11 ಇದಲ್ಲದೆ ನಾನು ನೋಡಲಾಗಿ, ಸಿಂಹಾಸನದ ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು. 12 ಅವರು, ಮಹಾಧ್ವನಿಯಿಂದ:
“ವಧಿತರಾದ ಕುರಿಮರಿ ಆಗಿರುವವರು
ಶಕ್ತಿ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಗೌರವ, ಮಹಿಮೆ, ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯರು!”
ಎಂದು ಹೇಳಿದರು.
13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗಡೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಹೀಗೆ ಹೇಳುವುದನ್ನು ಕೇಳಿದೆನು:
“ಸಿಂಹಾಸನದ ಮೇಲೆ ಕುಳಿತಿರುವವರಿಗೂ ಕುರಿಮರಿ ಆಗಿರುವವರಿಗೂ
ಸ್ತೋತ್ರ, ಗೌರವ, ಮಹಿಮೆ, ಶಕ್ತಿ,
ಯುಗಯುಗಾಂತರಗಳಲ್ಲಿಯೂ ಇರಲಿ!”
14 ಆಗ ನಾಲ್ಕು ಜೀವಿಗಳು, “ಆಮೆನ್,” ಎಂದವು. ಹಿರಿಯರು ಅಡ್ಡಬಿದ್ದು ಆರಾಧಿಸಿದರು.