10
ದೇವದೂತನೂ ಮತ್ತು ಚಿಕ್ಕ ಸುರುಳಿಯೂ
1 ಆಗ ನಾನು ಮತ್ತೊಬ್ಬ ಬಲಿಷ್ಠನಾದ ದೇವದೂತನು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಮುಗಿಲ ಬಿಲ್ಲು ಇತ್ತು. ಅವನ ಮುಖವು ಸೂರ್ಯನಂತಿದ್ದು, ಅವನ ಕಾಲುಗಳು ಅಗ್ನಿಸ್ತಂಭಗಳಂತಿದ್ದವು. 2 ಅವನು ತನ್ನ ಕೈಯಲ್ಲಿ ತೆರೆದಿದ್ದ ಒಂದು ಚಿಕ್ಕ ಸುರುಳಿಯನ್ನು ಹಿಡಿದುಕೊಂಡಿದ್ದನು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೂ ತನ್ನ ಎಡಗಾಲನ್ನು ಭೂಮಿಯ ಮೇಲೂ ಇಟ್ಟುಕೊಂಡು, 3 ಸಿಂಹದ ಘರ್ಜನೆಯಂತೆ ಮಹಾ ಸ್ವರದಿಂದ ಕೂಗಿದನು. ಅವನು ಕೂಗಿದಾಗ, ಏಳು ಗುಡುಗುಗಳು ಮಾತನಾಡಿದವು. 4 ಏಳು ಗುಡುಗುಗಳು ಮಾತನಾಡಿದಾಗ, ನಾನು ಬರೆಯಬೇಕೆಂದಿದ್ದೆನು. ಆದರೆ ಪರಲೋಕದಿಂದ ಬಂದ ಶಬ್ದವು, “ನೀನು ಆ ಏಳು ಗುಡುಗುಗಳು ಹೇಳಿರುವುದನ್ನು ಮುದ್ರೆಹಾಕಿ ಮುಚ್ಚಿಡು. ಅದನ್ನು ಬರೆಯಬೇಡ,” ಎಂದು ಹೇಳುವುದನ್ನು ಕೇಳಿದೆನು.
5 ಆಗ ಸಮುದ್ರದ ಮೇಲೂ ಭೂಮಿಯ ಮೇಲೂ ನಿಂತಿರುವ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ, 6 ಯುಗಯುಗಾಂತರಕ್ಕೂ ಜೀವಿಸುವವರೂ ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿದವರ ಮೇಲೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಇನ್ನು ಆಲಸ್ಯವಾಗುವುದಿಲ್ಲ! 7 ಆದರೆ ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಬೇಕೆಂದಿರುವ ದಿನಗಳಲ್ಲಿ ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ಪ್ರಕಟಿಸಿದಂತೆಯೇ, ದೇವರ ರಹಸ್ಯವು ನೆರವೇರುವುದು.”
8 ಆಗ ಪರಲೋಕದಿಂದ ನಾನು ಕೇಳಿದ್ದ ಧ್ವನಿಯು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿರುವ ದೇವದೂತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ಹೇಳಿತು.
9 ಆಗ ನಾನು ದೇವದೂತನ ಬಳಿ ಹೋಗಿ, ಅವನನ್ನು, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಅವನು ನನಗೆ, “ಇದನ್ನು ತೆಗೆದುಕೊಂಡು ತಿನ್ನು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು. ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು,”*ಯೆಹೆ 3:3 ಎಂದು ಹೇಳಿದನು. 10 ನಾನು ದೇವದೂತನ ಕೈಯಿಂದ ಆ ಚಿಕ್ಕ ಸುರುಳಿಯನ್ನು ತೆಗೆದುಕೊಂಡು ತಿಂದೆನು. ಇದರ ರುಚಿಯು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಾಗ, ನನ್ನ ಹೊಟ್ಟೆ ಕಹಿಯಾಯಿತು. 11 ಆಗ ನನಗೆ, “ನೀನು ಅನೇಕ ಪ್ರಜೆ, ರಾಷ್ಟ್ರ, ಜನಾಂಗ, ಭಾಷೆ ಮತ್ತು ಅರಸರ ಮುಂದೆ ಪುನಃ ಪ್ರವಾದಿಸಬೇಕು,” ಎಂದು ಹೇಳಲಾಯಿತು.