10
1 ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ. 2 ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ಆಸಕ್ತಿಯು ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ. 3 ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ. 4 ಕ್ರಿಸ್ತ ಯೇಸುವನ್ನು ನಂಬುವ ಪ್ರತಿಯೊಬ್ಬರಿಗೂ ನೀತಿಯು ದೊರಕುವಂತೆ ಕ್ರಿಸ್ತ ಯೇಸು ಮೋಶೆಯ ನಿಯಮದ ಅಂತ್ಯವಾಗಿರುತ್ತಾರೆ.
5 ನಿಯಮದಿಂದ ಬರುವ ನೀತಿಯ ಬಗ್ಗೆ ಮೋಶೆಯು ಬರೆದಿರುವುದು ಏನೆಂದರೆ: “ನಿಯಮದಲ್ಲಿ ಬರೆದಿರುವ ಎಲ್ಲವನ್ನೂ ಮಾಡುವವರೇ ಬಾಳುವವರು,”*ಯಾಜಕ 18:5 ಎಂಬುದಾಗಿ ಬರೆದನು. 6 ಆದರೆ ವಿಶ್ವಾಸದಿಂದ ಬರುವ ನೀತಿಯ ಬಗ್ಗೆ ಮೋಶೆಯು ಹೇಳುವುದೇನೆಂದರೆ: “ ‘ಕ್ರಿಸ್ತನನ್ನು ಕೆಳಗೆ ತರಲು ಪರಲೋಕಕ್ಕೆ ಯಾರು ಏರಿ ಹೋಗುವರು?’†ಧರ್ಮೋ 30:12 7 ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’‡ಧರ್ಮೋ 30:13 ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.” 8 ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.”§ಧರ್ಮೋ 30:14 ಅದೇ ನಾವು ಸಾರುವ ವಿಶ್ವಾಸದ ವಾಕ್ಯ. 9 ನೀನು, “ಯೇಸುವೇ ಕರ್ತ,” ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ. 10 ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ. 11 ಪವಿತ್ರ ವೇದದಲ್ಲಿ ಹೇಳಿರುವಂತೆ, “ಅವರ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದೇ ಇಲ್ಲ.”*ಯೆಶಾಯ 28:16 12 ಈ ವಿಷಯದಲ್ಲಿ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಕರ್ತ ಆಗಿರುವ ಒಬ್ಬರೇ ಕರ್ತ; ಅವರು ತಮ್ಮನ್ನು ಕರೆಯುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುತ್ತಾರೆ. 13 ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”†ಯೋಯೇಲ 2:32
14 ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ? 15 ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, “ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!”‡ಯೆಶಾಯ 52:7 ಎಂದು ಬರೆಯಲಾಗಿದೆ.
16 ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?”§ಯೆಶಾಯ 53:1 ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ. 17 ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ. 18 ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ:
“ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ,
ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”*ಕೀರ್ತನೆ 19:4
19 ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು,
“ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು.
ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,”†ಧರ್ಮೋ 32:21
ಎಂದು ಹೇಳುತ್ತಾನೆ. 20 ಆದರೆ ಯೆಶಾಯನು ಬಹು ಧೈರ್ಯವಾಗಿ,
“ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು.
ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು,”‡ಯೆಶಾಯ 65:1
ಎಂದು ಹೇಳುತ್ತಾನೆ. 21 ಆದರೆ ಇಸ್ರಾಯೇಲರ ಕುರಿತಾಗಿ,
“ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ,
ದಿನವೆಲ್ಲಾ ನಾನು ಕೈಚಾಚಿ ಕರೆದೆನು,”§ಯೆಶಾಯ 65:2
ಎಂದು ಹೇಳುತ್ತಾನೆ.