17
ಥೆಸಲೋನಿಕದಲ್ಲಿ ಪೌಲ ಸೀಲರು
ಪೌಲ ಸೀಲರು ಆಂಫಿಪೊಲಿ ಮತ್ತು ಅಪೊಲೋನಿಯ ಮಾರ್ಗವಾಗಿ ಪ್ರಯಾಣ ಮಾಡಿ ಥೆಸಲೋನಿಕ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. ಪೌಲನು ಎಂದಿನಂತೆ ಯೆಹೂದ್ಯರನ್ನು ಭೇಟಿಯಾಗಲು ಈ ಸಭಾಮಂದಿರದೊಳಗೆ ಹೋದನು. ಅವನು ಮೂರು ವಾರಗಳವರೆಗೆ ಪ್ರತಿ ಸಬ್ಬತ್‌ದಿನದಂದು ಯೆಹೂದ್ಯರೊಂದಿಗೆ ಪವಿತ್ರ ಗ್ರಂಥದ ಆಧಾರದೊಡನೆ ಚರ್ಚಿಸಿ ವಿವರಿಸಿದನು. ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಎದ್ದು ಬರಲೇಬೇಕಿತ್ತು ಎಂಬುದನ್ನು ತೋರಿಸಿಕೊಟ್ಟನು. “ನಾನು ನಿಮಗೆ ತಿಳಿಸುತ್ತಿರುವ ಈ ಯೇಸುವೇ ಕ್ರಿಸ್ತನು” ಎಂದು ಪೌಲನು ಸ್ಪಷ್ಟಪಡಿಸಿದನು. ನಿಜದೇವರನ್ನು ಪ್ರೀತಿಸುತ್ತಿದ್ದ ಕೆಲವು ಮಂದಿ ಗ್ರೀಕರು ಮತ್ತು ಕೆಲವು ಮಂದಿ ಪ್ರಮುಖ ಸ್ತ್ರೀಯರು ಅಲ್ಲಿದ್ದರು. ಅವರಲ್ಲಿ ಅನೇಕರಿಗೆ ಮನವರಿಕೆಯಾಗಿ ಪೌಲ ಸೀಲರನ್ನು ಸೇರಿಕೊಂಡರು.
ಆದರೆ ನಂಬದೆಹೋದ ಯೆಹೂದ್ಯರು ಅಸೂಯೆಗೊಂಡರು. ಅವರು ಪಟ್ಟಣದಲ್ಲಿದ್ದ ಕೆಲವು ಕೆಡುಕರಿಗೆ ಹಣಕೊಟ್ಟು ಕರೆದುಕೊಂಡು ಬಂದರು. ಈ ಕೆಡುಕರು ಅನೇಕ ಜನರನ್ನು ಒಟ್ಟುಗೂಡಿಸಿ, ಪಟ್ಟಣದಲ್ಲಿ ಗಲಭೆ ಮಾಡಿದರು. ಜನರು ಪೌಲ ಸೀಲರನ್ನು ಹುಡುಕುತ್ತಾ ಯಾಸೋನನ ಮನೆಗೆ ಹೋದರು. ಅವರು ಪೌಲ ಸೀಲರನ್ನು ಜನರ ಮುಂದೆ ಹೊರಗೆ ಎಳೆದುಕೊಂಡು ಬರಬೇಕೆಂದಿದ್ದರು. ಆದರೆ ಅವರು ಪೌಲ ಸೀಲರನ್ನು ಅಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ಯಾಸೋನನನ್ನೂ ಕೆಲವು ವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುಕೊಂಡು ಬಂದು, “ಈ ಜನರು (ಪೌಲ ಸೀಲರು) ಪ್ರಪಂಚದ ಎಲ್ಲಾ ಕಡೆಗಳಲ್ಲೂ ಗಲಭೆಯನ್ನು ಉಂಟುಮಾಡಿ ಈಗ ಇಲ್ಲಿಗೂ ಬಂದಿದ್ದಾರೆ! ಯಾಸೋನನು ಇವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಇವರೆಲ್ಲರೂ ಸೀಸರನ ಕಾನೂನುಗಳನ್ನು ಉಲ್ಲಂಘಿಸುತ್ತಾರೆ ಮತ್ತು ‘ಯೇಸು’ ಎಂಬ ಮತ್ತೊಬ್ಬ ರಾಜನಿರುವನೆಂದು ಹೇಳುತ್ತಾರೆ” ಎಂದು ಕೂಗಿ ಹೇಳಿದರು.
ಈ ಸಂಗತಿಗಳನ್ನು ಕೇಳಿದ ನಗರಾಧಿಕಾರಿಗಳು ಮತ್ತು ಇತರರು ಬಹು ಗಲಿಬಿಲಿಗೊಂಡರು. ಅವರು ಯಾಸೋನನಿಂದಲೂ ಇತರ ವಿಶ್ವಾಸಿಗಳಿಂದಲೂ ಜಾಮೀನು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಿದರು.
ಪೌಲ ಸೀಲರ ಪ್ರಯಾಣ
10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಈ ಯೆಹೂದ್ಯರು ಥೆಸಲೋನಿಕದ ಯೆಹೂದ್ಯರಿಗಿಂತಲೂ ಉತ್ತಮರಾಗಿದ್ದರು. ಪೌಲ ಸೀಲರು ಹೇಳಿದ ಸಂಗತಿಗಳನ್ನು ಇವರು ಬಹಳ ಸಂತೋಷದಿಂದ ಕೇಳಿದರು. ಮತ್ತು ಈ ಸಂಗತಿಗಳು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಪವಿತ್ರ ಗ್ರಂಥವನ್ನು ಪ್ರತಿದಿನವೂ ಅಧ್ಯಯನ ಮಾಡಿದರು. 12 ಈ ಯೆಹೂದ್ಯರಲ್ಲಿ ಅನೇಕರು ನಂಬಿದರು. ಅತಿ ಪ್ರಮುಖರಾದ ಗ್ರೀಕ್ ಸ್ತ್ರೀಯರು ಮತ್ತು ಪುರುಷರು ನಂಬಿಕೊಂಡರು.
13 ಆದರೆ ಪೌಲನು ಬೆರೋಯದಲ್ಲಿ ದೇವರ ವಾಕ್ಯವನ್ನು ಹೇಳುತ್ತಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಥೆಸಲೋನಿಕದ ಯೆಹೂದ್ಯರು ಬೆರೋಯಕ್ಕೂ ಬಂದು ಅಲ್ಲಿಯ ಜನರನ್ನು ಗಲಿಬಿಲಿಗೊಳಿಸಿ ಗಲಭೆ ಮಾಡಿದರು. 14 ಆದ್ದರಿಂದ ವಿಶ್ವಾಸಿಗಳು ಪೌಲನನ್ನು ಸಮುದ್ರತೀರಕ್ಕೆ ಆ ಕೂಡಲೇ ಕಳುಹಿಸಿದರು. ಆದರೆ ಸೀಲ ತಿಮೊಥೆಯರು ಬೆರೋಯದಲ್ಲಿ ಉಳಿದುಕೊಂಡರು. 15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.
ಅಥೆನ್ಸಿನಲ್ಲಿ ಪೌಲನು
16 ಪೌಲನು ಅಥೆನ್ಸಿನಲ್ಲಿ ಸೀಲ ತಿಮೊಥೆಯರಿಗಾಗಿ ಎದುರು ನೋಡುತ್ತಿದ್ದನು. ಆ ಪಟ್ಟಣದ ಎಲ್ಲೆಲ್ಲಿಯೂ ವಿಗ್ರಹಗಳಿರುವುದನ್ನು ಕಂಡು ಅವನ ಮನಸ್ಸು ನೊಂದುಹೋಯಿತು. 17 ಸಭಾಮಂದಿರದಲ್ಲಿ ಪೌಲನು ಯೆಹೂದ್ಯರೊಂದಿಗೆ ಮತ್ತು ಯೆಹೂದ್ಯರಾಗಿದ್ದ ಗ್ರೀಕರೊಂದಿಗೆ ಚರ್ಚಿಸಿದನು. ಪಟ್ಟಣದ ವ್ಯಾಪಾರಸ್ಥಳದಲ್ಲಿಯೂ ಪೌಲನು ಕೆಲವು ಜನರೊಂದಿಗೆ ಪ್ರತಿದಿನ ಚರ್ಚಿಸಿದನು. 18 ಎಪಿಕೊರಿಯಾ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರಲ್ಲಿ ಕೆಲವರು ಅವನೊಂದಿಗೆ ವಾದಿಸಿದರು.
ಅವರಲ್ಲಿ ಕೆಲವರು, “ಈ ಮನುಷ್ಯನಿಗೆ ತಾನು ಯಾವುದರ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದೇ ನಿಜವಾಗಿಯೂ ತಿಳಿದಿಲ್ಲ. ಅವನು ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ?” ಎಂದರು. ಯೇಸುವು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದಿದ್ದಾನೆ ಎಂಬ ಸುವಾರ್ತೆಯನ್ನು ಪೌಲನು ಅವರಿಗೆ ಹೇಳುತ್ತಿದ್ದನು. ಆದ್ದರಿಂದ ಅವರು, “ಕೆಲವು ಬೇರೆ ದೇವರುಗಳ ಬಗ್ಗೆ ಅವನು ನಮಗೆ ಹೇಳುತ್ತಿರುವಂತೆ ತೋರುತ್ತಿದೆ” ಎಂದರು.
19 ಅವರು ಪೌಲನನ್ನು ಅರಿಯೊಪಾಗ ನ್ಯಾಯಸಭೆಗೆ ಕರೆದುಕೊಂಡು ಹೋದರು. ಅವರು ಅವನಿಗೆ, “ನೀನು ಉಪದೇಶಿಸುತ್ತಿರುವ ಹೊಸ ತತ್ವವನ್ನು ದಯವಿಟ್ಟು ನಮಗೆ ವಿವರಿಸು. 20 ನೀನು ಹೇಳುತ್ತಿರುವ ಸಂಗತಿಗಳು ನಮಗೆ ಹೊಸದಾಗಿವೆ. ನಾವು ಹಿಂದೆಂದೂ ಈ ಸಂಗತಿಗಳನ್ನು ಕೇಳಿಲ್ಲ. ಈ ಉಪದೇಶದ ಅರ್ಥವನ್ನು ನಾವು ತಿಳಿದುಕೊಳ್ಳ ಬಯಸುತ್ತೇವೆ” ಎಂದು ಹೇಳಿದರು. 21 (ಅಥೆನ್ಸಿನ ಎಲ್ಲಾ ಜನರು ಮತ್ತು ಅಲ್ಲಿ ವಾಸವಾಗಿದ್ದ ಬೇರೆ ದೇಶಗಳವರು ಹೊಸ ಆಲೋಚನೆಗಳ ಬಗ್ಗೆ ಮಾತಾಡುವುದಕ್ಕೂ ಕೇಳುವುದಕ್ಕೂ ಬಹಳ ಇಷ್ಟಪಡುತ್ತಿದ್ದರು.)
22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ. 23 ನಾನು ನಿಮ್ಮ ಪಟ್ಟಣದಲ್ಲಿ ನಡೆದು ಹೋಗುವಾಗ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಕಂಡೆನು. ಒಂದು ಯಜ್ಞವೇದಿಕೆಯ ಮೇಲೆ, ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು. ನಿಮಗೆ ಗೊತ್ತಿಲ್ಲದ ದೇವರನ್ನು ನೀವು ಆರಾಧಿಸುತ್ತಿದ್ದೀರಿ.
24 “ದೇವರ ಬಗ್ಗೆಯೇ ನಾನು ನಿಮಗೆ ಹೇಳುತ್ತಿದ್ದೇನೆ! ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಪ್ರತಿಯೊಂದನ್ನು ಸೃಷ್ಟಿಮಾಡಿದಾತನೇ ಆ ದೇವರು. ಆತನೇ ಭೂಮ್ಯಾಕಾಶಗಳ ಒಡೆಯನು. ಮನುಷ್ಯರು ನಿರ್ಮಿಸುವ ಗುಡಿಗಳಲ್ಲಿ ಆತನು ಜೀವಿಸುವವನಲ್ಲ. 25 ಮನುಷ್ಯರಿಗೆ ಜೀವವನ್ನೂ ಉಸಿರನ್ನೂ ಸಮಸ್ತವನ್ನೂ ಕೊಡುವಾತನು ಆ ದೇವರೇ. ಆತನಿಗೆ ಜನರ ಸೇವೆಯ ಅಗತ್ಯವೇನೂ ಇಲ್ಲ. ಆತನಿಗೆ ಕೊರತೆಯೆಂಬುದೂ ಇಲ್ಲ. 26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.
27 “ಜನರು ತನ್ನನ್ನು ಹುಡುಕಬೇಕೆಂಬುದು ದೇವರ ಉದ್ದೇಶವಾಗಿತ್ತು. ತನಗಾಗಿ ಸುತ್ತಮುತ್ತಲೆಲ್ಲಾ ಹುಡುಕಿ ಕಂಡುಕೊಳ್ಳಬಹುದೆಂದು ದೇವರು ಹಾಗೆ ಮಾಡಿದನು. ಆದರೆ ಆತನು ನಮ್ಮಲ್ಲಿ ಯಾರಿಗೂ ಬಹುದೂರವಾಗಿಲ್ಲ. 28 ನಾವು ಆತನೊಂದಿಗೆ ವಾಸಿಸುತ್ತೇವೆ, ನಡೆಯುತ್ತೇವೆ, ಇರುತ್ತೇವೆ. ನಿಮ್ಮವರೇ ಆದ ಕೆಲವು ಲೇಖಕರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.
29 “ನಾವು ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜನರು ಊಹಿಸಿಕೊಳ್ಳುವ ರೀತಿಯಲ್ಲಾಗಲಿ ನಿರ್ಮಿಸುವ ರೀತಿಯಲ್ಲಾಗಲಿ ದೇವರಿದ್ದಾನೆಂದು ನೀವು ಯೋಚಿಸಕೂಡದು. ಆತನು ಬೆಳ್ಳಿಬಂಗಾರ ಮತ್ತು ಕಲ್ಲುಗಳ ರೂಪದಲ್ಲಿಲ್ಲ. 30 ಹಿಂದಿನ ಕಾಲದಲ್ಲಿ ಜನರು ದೇವರನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ದೇವರು ಅದಕ್ಕೆ ಲಕ್ಷ್ಯಕೊಡಲಿಲ್ಲ. ಈಗಲಾದರೋ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವವರು ಪಶ್ಚಾತ್ತಾಪಪಡಬೇಕೆಂದು ಆತನು ಆಜ್ಞಾಪಿಸುತ್ತಾನೆ. 31 ಪ್ರಪಂಚದ ಜನರೆಲ್ಲರಿಗೂ ನ್ಯಾಯತೀರಿಸುವುದಕ್ಕಾಗಿ ದೇವರು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. ಅಂದು ನ್ಯಾಯತೀರಿಸುವುದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ಬಹುಕಾಲದ ಹಿಂದೆಯೇ ಆರಿಸಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ಖಚಿತಪಡಿಸುವುದಕ್ಕಾಗಿ ಆ ವ್ಯಕ್ತಿಯನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾನೆ.”
32 ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ ಎಂಬ ಸಂಗತಿಯನ್ನು ಕೇಳಿದ ಆ ಜನರಲ್ಲಿ ಕೆಲವರು ಅಪಹಾಸ್ಯಮಾಡಿದರು. ಇತರರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ” ಎಂದು ಹೇಳಿದರು. 33 ಆದ್ದರಿಂದ ಪೌಲನು ಅವರ ಬಳಿಯಿಂದ ಹೊರಟುಹೋದನು. 34 ಆದರೆ ಆ ಜನರಲ್ಲಿ ಕೆಲವರು ಪೌಲನನ್ನು ನಂಬಿ ಅವನನ್ನು ಸೇರಿಕೊಂಡರು. ನಂಬಿದ ಜನರಲ್ಲಿ ಅರಿಯೊಪಾಗ ನ್ಯಾಯಸಭೆಯ ಸದಸ್ಯನಾದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.