3
ಪೇತ್ರನಿಂದ ಗುಣಹೊಂದಿದ ಕುಂಟ
ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.
ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,
ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.
ಜನರಿಗೆ ಪೇತ್ರನ ವಿವರಣೆ
11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.
12 ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ? 13 ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ* ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ. 14 ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ. 15 ಹೀಗೆ ನೀವು ಜೀವದಾಯಕನನ್ನೇ ಕೊಂದುಹಾಕಿದಿರಿ! ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಇದಕ್ಕೆ ನಾವೇ ಸಾಕ್ಷಿಗಳು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.
16 “ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.
17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.
21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’
24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’ ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”
* 3:13 ಅಬ್ರಹಾಮ, ಇಸಾಕ, ಯಾಕೋಬ ಹಳೆ ಒಡಂಬಡಿಕೆಯ ಕಾಲದ ಅತ್ಯಂತ ಪ್ರಮುಖ ಯೆಹೂದ್ಯನಾಯಕರು. 3:14 ಕೊಲೆಗಾರ ಬರಬ್ಬ ನೋಡಿರಿ: ಲೂಕ 23:18. 3:23 ಉಲ್ಲೇಖನ: ಧರ್ಮೋಪದೇಶ. 18:15,19. 3:25 ಉಲ್ಲೇಖನ: ಆದಿಕಾಂಡ 22:18; 26:24.