5
ಅನನೀಯ ಮತ್ತು ಸಫೈರ
1 ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು.
2 ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.
3 ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ?
4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.
5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.
7 ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ.
8 ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.
ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.
9 ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು.
10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು.
11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.
ದೇವರ ಸೂಚಕಕಾರ್ಯಗಳು
12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು.
13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು.
14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು.
15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು.
16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.
ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ
17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು.
18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು.
19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ,
20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು.
21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.
ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು.
22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ,
23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು.
24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.
25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು.
26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.
27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ,
28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.
29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ!
30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು!
31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ.
32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.
33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು.
34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು.
35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ!
36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ.
37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು.
38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು.
39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.
ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು.
40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು.
41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು.
42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.