9
ವೇದಿಕೆ ಬದಿಯಲ್ಲಿ ನಿಂತ ಯೆಹೋವನ ದರ್ಶನ
ಯಜ್ಞವೇದಿಕೆಯ ಬಳಿಯಲ್ಲಿ ನನ್ನ ಒಡೆಯನು ನಿಂತಿರುವುದನ್ನು ಕಂಡೆನು. ಆತನು ಹೇಳಿದ್ದೇನೆಂದರೆ,
 
“ಸ್ತಂಭಗಳ ಮೇಲೆ ಹೊಡೆಯಿರಿ,
ಆಗ ಕಟ್ಟಡವು ಹೊಸ್ತಿಲಿನ ತನಕ ಕಂಪಿಸುವದು.
ಸ್ತಂಭಗಳು ಜನರ ತಲೆಗಳ ಮೇಲೆ ಕುಸಿದುಬೀಳುವಂತೆ ಮಾಡಿರಿ.
ಅದರಿಂದ ಸಾಯದೆ ಉಳಿಯುವವರನ್ನು ನಾನು ಖಡ್ಗದಿಂದ ಸಾಯಿಸುವೆನು.
ಅದರಿಂದ ತಪ್ಪಿಸಿಕೊಂಡು ಓಡಿಹೋಗಲು ಒಬ್ಬನು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
ಒಬ್ಬನಾದರೂ ತಪ್ಪಿಸಿಕೊಳ್ಳುವುದಿಲ್ಲ.
ಭೂಮಿಯನ್ನು ಅವರು ಅಗೆದು ಅದರೊಳಗೆ ಅವಿತುಕೊಂಡರೆ
ಅದರೊಳಗಿಂದ ಅವರನ್ನು ಎಳೆದುಹಾಕುವೆನು.
ಆಕಾಶದೊಳಗೆ ಹಾರಿ ತಪ್ಪಸಿಕೊಂಡರೆ
ಅಲ್ಲಿಂದಲೂ ನಾನು ಅವರನ್ನು ಎಳೆದುಹಾಕುವೆನು.
ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವರು ಅಡಗಿಕೊಂಡರೆ
ಅವರನ್ನು ಕಂಡುಹಿಡಿದು ಅಲ್ಲಿಂದ ತೆಗೆದುಬಿಡುವೆನು.
ಸಮುದ್ರ ತಳದಲ್ಲಿ ಅವರು ಅಡಗಿಕೊಂಡರೆ
ಅವರನ್ನು ಕಚ್ಚುವಂತೆ ನಾನು ಸರ್ಪಕ್ಕೆ ಆಜ್ಞಾಪಿಸುವೆನು.
ಶತ್ರುಗಳು ಅವರನ್ನು ಸೆರೆಹಿಡಿದರೆ
ನಾನು ಅವರನ್ನು ಕೊಂದುಹಾಕಲು
ಕತ್ತಿಗೆ ಆಜ್ಞಾಪಿಸುವೆನು.
ಹೌದು ನಾನು ಅವರನ್ನು ಗಮನಿಸುತ್ತಾ ಕಾಯುವೆನು.
ಅವರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ.
ಅವರಿಗೆ ಸಂಕಟ ಕೊಡುವುದಕ್ಕಾಗಿ ಅವರನ್ನು ಕಾಯುತ್ತೇನೆ.”
ಶಿಕ್ಷೆಯು ಜನರನ್ನು ನಾಶಮಾಡುವದು
ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಭೂಮಿಯನ್ನು ಸ್ಪರ್ಶಿಸುವನು.
ಆಗ ಅದು ಕರಗಿಹೋಗುವುದು.
ದೇಶದಲ್ಲಿ ವಾಸಿಸುವ ಜನರೆಲ್ಲಾ ಸತ್ತುಹೋದವರಿಗಾಗಿ ಗೋಳಾಡುವರು.
ಈಜಿಪ್ಟಿನ ನೈಲ್ ನದಿಯಂತೆ
ದೇಶದಲ್ಲಿ ಏರಿಳಿತ ಉಂಟಾಗುವುದು.
ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು.
ಭೂಮಿಯ ಮೇಲೆ ಆಕಾಶವನ್ನು ಹರಡಿದನು.
ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ
ಮಳೆಗೆರೆಯುವಂತೆ ಮಾಡುವನು.
ಆತನ ಹೆಸರು ಯೆಹೋವ.
ಇಸ್ರೇಲಿನ ನಾಶನದ ವಾಗ್ದಾನ
ಯೆಹೋವನು ಹೀಗೆನ್ನುತ್ತಾನೆ:
 
“ಇಸ್ರೇಲೇ, ನೀನು ನನಗೆ ಇಥಿಯೋಪ್ಯದವರಂತಿರುವೆ.
ಇಸ್ರೇಲನ್ನು ಈಜಿಪ್ಟ್ ದೇಶದಿಂದ ನಾನು ಹೊರತಂದೆನು.
ಕಪ್ತೋರಿನಿಂದ ಫಿಲಿಷ್ಟಿಯರನ್ನು ಹೊರತಂದೆನು
ಮತ್ತು ಕೀರ್‌ನಿಂದ ಅರಾಮ್ಯರನ್ನು ತಂದೆನು.”
 
ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ.
ಆತನು ಹೇಳಿದ್ದೇನೆಂದರೆ,
“ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು.
ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ.
ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು.
ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು.
ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು.
ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ,
ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು.
ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.
 
10 “ನನ್ನ ಜನರಲ್ಲಿ ಪಾಪಿಗಳು ಹೇಳುತ್ತಾರೆ:
‘ನಮಗೆ ಯಾವ ಕೇಡೂ ಸಂಭವಿಸುವುದಿಲ್ಲ.’
ಆದರೆ ಅವರೆಲ್ಲಾ ಕತ್ತಿಯಿಂದ ಸಾಯುವರು.”
ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ
11 “ದಾವೀದನ ಗುಡಾರವು ಕುಸಿದುಬಿದ್ದಿದೆ.
ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು. ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.