8
ಕ್ರೈಸ್ತರ ಕೊಡುವಿಕೆ
1 ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ.
2 ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು.
3 ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ.
4 ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು.
5 ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.
6 ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ.
7 ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.
8 ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ.
9 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.
10 ನಾನು ನಿಮಗೆ ಹೇಳುವುದೇನೆಂದರೆ: ಕಳೆದ ವರ್ಷ ಕೊಡುವುದರಲ್ಲಿ ನೀವೇ ಮೊದಲಿಗರಾಗಿದ್ದಿರಿ ಮತ್ತು ಮೊಟ್ಟಮೊದಲನೆಯದಾಗಿ ಕೊಟ್ಟವರು ನೀವೇ.
11 ಆದ್ದರಿಂದ ನೀವು ಆರಂಭಿಸಿದ ಕಾರ್ಯವನ್ನು ಈಗ ಪೂರ್ಣಗೊಳಿಸಿರಿ. ಆಗ, ನಿಮ್ಮ ಕಾರ್ಯ ಮತ್ತು ನಿಮ್ಮ ಸಿದ್ಧಮನಸ್ಸು ಸರಿಸಮಾನವಾಗಿರುವುದು. ನಿಮ್ಮಲ್ಲಿರುವುದನ್ನು ಕೊಡಿರಿ.
12 ನೀವು ಕೊಡಬೇಕೆಂದು ಕೊಟ್ಟರೆ ನಿಮ್ಮ ದಾನವು ಸ್ವೀಕೃತವಾಗುವುದು. ನಿಮ್ಮ ದಾನದ ಮೌಲ್ಯಮಾಪನವು ನೀವು ಏನನ್ನು ಹೊಂದಿದ್ದೀರಿ ಎಂಬುದರ ಮೇಲೆಯೇ ಹೊರತು ನೀವು ಏನನ್ನು ಹೊಂದಿಲ್ಲ ಎಂಬುದರ ಮೇಲೆ ಆಧಾರಗೊಂಡಿಲ್ಲ.
13 ಇತರ ಜನರು ಸುಖವಾಗಿರುವಾಗ ನೀವು ಕಷ್ಟದಿಂದಿರುವುದು ನಮಗೆ ಇಷ್ಟವಿಲ್ಲ. ಪ್ರತಿಯೊಂದರಲ್ಲಿಯೂ ಸಮಾನತೆ ಇರಬೇಕೆಂಬುದೇ ನಮ್ಮ ಬಯಕೆ.
14 ಈಗ ನಿಮ್ಮಲ್ಲಿ ಬೇಕಾದಷ್ಟಿದೆ. ನಿಮ್ಮ ಈ ಸಮೃದ್ಧಿಯು ಇತರ ಜನರ ಕೊರತೆಯನ್ನು ನೀಗಿಸುವುದು. ಬಳಿಕ, ಅವರು ಸಮೃದ್ಧರಾಗಿರುವಾಗ ನಿಮ್ಮ ಕೊರತೆಯನ್ನು ನೀಗಿಸುವರು. ಹೀಗೆ ಎಲ್ಲರೂ ಸಮಾನರಾಗಿರುವರು.
15 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದಾಗುವುದು,
“ಬಹಳವಾಗಿ ಶೇಖರಿಸಿಕೊಂಡವನಿಗೆ ಏನೂ ಹೆಚ್ಚಾಗಲಿಲ್ಲ,
ಸ್ವಲ್ಪ ಶೇಖರಿಸಿಕೊಂಡವನಿಗೆ ಏನೂ ಕಡಿಮೆಯಾಗಲಿಲ್ಲ.” ವಿಮೋಚನಕಾಂಡ 16:18
ತೀತನು ಮತ್ತು ಅವನ ಸಂಗಡಿಗರು
16 ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ದೇವರು ತೀತನಿಗೂ ಕೊಟ್ಟದ್ದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ.
17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ.
18 ಎಲ್ಲಾ ಸಭೆಗಳಲ್ಲಿ ಹೊಗಳಿಕೆಗೆ ಪಾತ್ರನಾಗಿರುವ ಒಬ್ಬ ಸಹೋದರನನ್ನು ತೀತನೊಡನೆ ಕಳುಹಿಸುತ್ತಿದ್ದೇವೆ. ಈ ಸಹೋದರನು ಸುವಾರ್ತಾಸೇವೆಯ ವಿಷಯದಲ್ಲಿ ಕೀರ್ತಿಪಡೆದಿದ್ದಾನೆ.
19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.
20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ.
21 ಪ್ರಭುವು ಯಾವುದನ್ನು ಸರಿಯಾದದ್ದೆಂದು ಸ್ವೀಕರಿಸಿಕೊಳ್ಳುವನೋ ಮತ್ತು ಜನರು ಯಾವುದನ್ನು ಸರಿಯಾದದ್ದೆಂದು ಯೋಚಿಸುವರೋ ಅದನ್ನೇ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.
22 ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.
23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ.
24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.