2
ನೆಬೂಕದ್ನೆಚ್ಚರನ ಸ್ವಪ್ನ
1 ತನ್ನ ಆಳ್ವಿಕೆಯ ಎರಡನೇ ವರ್ಷದಲ್ಲಿ ನೆಬೂಕದ್ನೆಚ್ಚರನು ಕೆಲವು ಕನಸುಗಳನ್ನು ಕಂಡನು. ಆ ಕನಸುಗಳು ಅವನನ್ನು ತತ್ತರಿಸಿಬಿಟ್ಟವು ಮತ್ತು ಅವನಿಗೆ ನಿದ್ರೆ ಬರದಂತೆ ಮಾಡಿದವು.
2 ಅರಸನು ತನ್ನ ಎಲ್ಲಾ ಪಂಡಿತರನ್ನು ಕರೆಸಿದನು. ಅವರು ಮಾಟಮಂತ್ರಗಳಿಂದ, ಜ್ಯೋತಿಶ್ಶಾಸ್ತ್ರದ ಸಹಾಯದಿಂದ ಅರಸನ ಕನಸಿನ ಅರ್ಥವನ್ನೂ ಭವಿಷ್ಯದಲ್ಲಿ ಸಂಭವಿಸಲಿರುವುದನ್ನೂ ತಿಳಿದುಕೊಳ್ಳಲು ಪ್ರಯತ್ನ ಮಾಡಿದರು. ರಾಜನು ತಾನು ಕಂಡ ಕನಸಿನ ಅರ್ಥವನ್ನು ತಿಳಿಯಬಯಸಿದ್ದರಿಂದ ಅವರು ಒಳಗೆ ಬಂದು ಅರಸನ ಸಮ್ಮುಖದಲ್ಲಿ ನಿಂತುಕೊಂಡರು.
3 ಆಗ ಅರಸನು ಅವರಿಗೆ, “ನಾನೊಂದು ಕನಸು ಕಂಡೆ. ಅದು ನನ್ನನ್ನು ಪೀಡಿಸುತ್ತಿದೆ. ಆ ಕನಸಿನ ಅರ್ಥವೇನೆಂಬುದನ್ನು ನಾನು ತಿಳಿಯಬಯಸುತ್ತೇನೆ” ಎಂದನು.
4 ಆಗ ಆ ಕಸ್ದೀಯರು ಅರಮೇಯಿಕ್ ಭಾಷೆಯಲ್ಲಿ, “ಅರಸನೇ ಚಿರಂಜೀವಿಯಾಗಿರು. ನಾವು ನಿನ್ನ ಸೇವಕರು. ದಯವಿಟ್ಟು ನಮಗೆ ನಿನ್ನ ಕನಸನ್ನು ಹೇಳು. ನಾವು ಅದರ ಅರ್ಥವನ್ನು ತಿಳಿಸುತ್ತೇವೆ” ಎಂದು ಉತ್ತರಕೊಟ್ಟರು.
5 ಆಗ ಅರಸನಾದ ನೆಬೂಕದ್ನೆಚ್ಚರನು, “ಹಾಗಲ್ಲ, ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕು. ಇಲ್ಲವಾದರೆ ನಾನು ನಿಮ್ಮ ದೇಹವನ್ನು ತುಂಡುತುಂಡಾಗಿ ಕತ್ತರಿಸಲು ಆಜ್ಞಾಪಿಸುತ್ತೇನೆ. ನಿಮ್ಮ ಮನೆಗಳನ್ನು ಬೀಳಿಸಿ ಮಣ್ಣುಗುಡ್ಡೆಯನ್ನಾಗಿಯೂ ಮತ್ತು ಬೂದಿರಾಶಿಯನ್ನಾಗಿಯೂ ಮಾಡುವಂತೆ ಆಜ್ಞಾಪಿಸುತ್ತೇನೆ.
6 ಆದರೆ ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಿದರೆ ಕಾಣಿಕೆಗಳನ್ನೂ ಬಹುಮಾನಗಳನ್ನೂ ಕೊಡುತ್ತೇನೆ ಮತ್ತು ಮಹಾಸನ್ಮಾನವನ್ನು ಮಾಡುತ್ತೇನೆ. ಆದ್ದರಿಂದ ನೀವು ನನಗೆ ಕನಸನ್ನೂ ಅದರ ಅರ್ಥವನ್ನೂ ಹೇಳಿರಿ” ಎಂದನು.
7 ಆ ಪಂಡಿತರು ಅರಸನಿಗೆ, “ದಯವಿಟ್ಟು ತಾವು ಕನಸಿನ ಬಗ್ಗೆ ಹೇಳಿರಿ. ನಾವು ಅದರ ಅಭಿಪ್ರಾಯವನ್ನು ಹೇಳುತ್ತೇವೆ” ಎಂದರು.
8 ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ.
9 ನೀವು ನನಗೆ ನನ್ನ ಕನಸಿನ ಬಗ್ಗೆ ಹೇಳದಿದ್ದರೆ ನಿಮಗೆ ಶಿಕ್ಷೆಯಾಗುವದೆಂದು ನೀವು ಬಲ್ಲಿರಿ. ನೀವೆಲ್ಲ ನನಗೆ ಸುಳ್ಳು ಹೇಳಬೇಕೆಂದು ನಿರ್ಧರಿಸಿಕೊಂಡಿದ್ದೀರಿ. ನೀವು ಹೆಚ್ಚಿನ ಸಮಯವನ್ನು ಪಡೆಯಲಿಚ್ಛಿಸುತ್ತಿದ್ದೀರಿ. ನಿಮಗೆ ಹೇಳಿದ್ದನ್ನು ನಾನು ಮರೆತುಬಿಡಬಹುದೆಂದು ನೀವು ಭಾವಿಸುತ್ತಿರುವಿರಿ. ಈಗ ನನ್ನ ಕನಸನ್ನು ತಿಳಿಸಿರಿ. ನೀವು ಕನಸನ್ನು ತಿಳಿಸಿದರೆ ಅದರ ನಿಜವಾದ ಅರ್ಥವನ್ನೂ ಹೇಳಬಲ್ಲಿರಿ” ಎಂದು ಅವರಿಗೆ ಉತ್ತರಕೊಟ್ಟನು.
10 ಕಸ್ದೀಯರು, “ಮಹಾಪ್ರಭುಗಳು ಕೇಳುತ್ತಿರುವುದನ್ನು ಹೇಳುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಈ ಹಿಂದೆ ಯಾವ ಅರಸನೂ ತನ್ನ ಆಸ್ಥಾನ ಪಂಡಿತರಿಗೂ ಮಂತ್ರವಾದಿಗಳಿಗೂ ಇಂತಹ ಪ್ರಶ್ನೆಯನ್ನು ಕೇಳಲಿಲ್ಲ. ಅತ್ಯಂತ ದೊಡ್ಡ ಮತ್ತು ಪ್ರಬಲನಾದ ಅರಸನೂ ತನ್ನ ಪಂಡಿತರಿಗಾಗಲಿ ಜೋಯಿಸರಿಗಾಗಲಿ ಇಂಥದ್ದನ್ನು ಕೇಳಲಿಲ್ಲ.
11 ಮಹಾಪ್ರಭುಗಳು ಕೇಳುವ ವಿಷಯ ಅತಿ ಕಠಿಣವಾದದ್ದು. ದೇವತೆಗಳು ಮಾತ್ರ ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸಲು ಸಾಧ್ಯ. ಆದರೆ ದೇವತೆಗಳು ಮಾನವರೊಂದಿಗೆ ವಾಸಮಾಡುವುದಿಲ್ಲ” ಎಂದರು.
12 ಇದನ್ನು ಕೇಳಿ ಅರಸನು ಬಹಳ ಕೋಪಗೊಂಡು ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು.
13 ಅರಸನಾದ ನೆಬೂಕದ್ನೆಚ್ಚರನ ಆಜ್ಞೆಯನ್ನು ಪ್ರಕಟಗೊಳಿಸಲಾಯಿತು. ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕಾಗಿತ್ತು. ದಾನಿಯೇಲ ಮತ್ತು ಅವನ ಸ್ನೇಹಿತರನ್ನು ಹುಡುಕಿ ಅವರ ಕೊಲೆ ಮಾಡುವುದಕ್ಕಾಗಿ ರಾಜಭಟರನ್ನು ಕಳುಹಿಸಲಾಯಿತು.
14 ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು.
15 ದಾನಿಯೇಲನು ಅರ್ಯೋಕನಿಗೆ, “ಅರಸನು ಅಂತಹ ಕಠಿಣ ಶಿಕ್ಷೆಯನ್ನು ಏಕೆ ಆಜ್ಞಾಪಿಸಿದನು?” ಎಂದು ಕೇಳಿದನು.
ಆಗ ಅರ್ಯೋಕನು ಅರಸನ ಕನಸಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ವಿವರಿಸಿದನು.
16 ಆಗ ದಾನಿಯೇಲನು ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹೋಗಿ ತನಗೆ ಸ್ವಲ್ಪ ಸಮಯ ಕೊಡುವುದಾದರೆ ತಾನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುವುದಾಗಿ ಹೇಳಿದನು.
17 ದಾನಿಯೇಲನು ಮನೆಗೆ ಹೋಗಿ ತನ್ನ ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಇವರುಗಳಿಗೆ ಈ ವಿಷಯ ತಿಳಿಸಿದನು.
18 ಪರಲೋಕದ ದೇವರು ತನಗೆ ಸಹಾಯ ಮಾಡುವಂತೆಯೂ ಕೃಪೆ ತೋರುವಂತೆಯೂ ಪ್ರಾರ್ಥಿಸಬೇಕೆಂದು ದಾನಿಯೇಲನು ಅವರನ್ನು ಕೇಳಿಕೊಂಡನು. ದಾನಿಯೇಲ ಮತ್ತು ಅವನ ಸ್ನೇಹಿತರು ಮರಣದಂಡನೆಯಿಂದ ಪಾರಾಗಬೇಕಿದ್ದರೆ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕಿತ್ತು.
19 ಅಂದು ರಾತ್ರಿ ದಾನಿಯೇಲನಿಗೆ ದೇವದರ್ಶನವಾಯಿತು. ಆಗ ದಾನಿಯೇಲನು ಪರಲೋಕದ ದೇವರನ್ನು ಹೀಗೆ ಸ್ತುತಿಸಿದನು:
20 “ದೇವರ ನಾಮವನ್ನು ಎಂದೆಂದಿಗೂ ಸ್ತುತಿಸಿರಿ!
ಜ್ಞಾನವೂ ಸಾಮರ್ಥ್ಯವೂ ಆತನವೇ.
21 ಆತನು ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ.
ಆತನು ಅರಸರನ್ನು ಬದಲಾಯಿಸುತ್ತಾನೆ. ಆತನು ಅರಸರಿಗೆ ಪ್ರಭುತ್ವವನ್ನು ಕೊಡುವನು.
ಆತನು ಅವರ ಪ್ರಭುತ್ವವನ್ನು ಕಿತ್ತುಕೊಳ್ಳುವನು!
ಜನರಿಗೆ ಜ್ಞಾನವನ್ನು ಕೊಟ್ಟು ಜ್ಞಾನಿಗಳನ್ನಾಗಿ ಮಾಡುವವನು ಆತನೇ.
ಜನರಿಗೆ ವಿವೇಕವನ್ನು ಕೊಟ್ಟು ವಿವೇಕಿಗಳನ್ನಾಗಿ ಮಾಡುವವನು ಆತನೇ.
22 ಆಳದಲ್ಲಿ ಅಡಗಿರುವ ರಹಸ್ಯಗಳನ್ನು ಬಲ್ಲವನು ಆತನೇ.
ಬೆಳಕು ಆತನಲ್ಲಿಯೇ ಇದೆ.
ಆದ್ದರಿಂದ ಕಗ್ಗತ್ತಲೆಯಲ್ಲಿ ಅಡಗಿರುವುದು ಆತನಿಗೆ ಗೋಚರವಾಗುವುದು.
23 ನನ್ನ ಪೂರ್ವಿಕರ ದೇವರೇ, ನಿನ್ನನ್ನು ಕೊಂಡಾಡಿ ಸ್ತುತಿಸುತ್ತೇನೆ.
ನೀನು ನನಗೆ ಜ್ಞಾನವನ್ನೂ ಸಾಮರ್ಥ್ಯವನ್ನೂ ದಯಪಾಲಿಸಿದೆ.
ನಾನು ಕೇಳಿದ್ದನ್ನು ಅನುಗ್ರಹಿಸಿದೆ.
ಅರಸನ ಕನಸಿನ ಬಗ್ಗೆ ತಿಳಿಸಿದೆ.”
ದಾನಿಯೇಲನು ಕನಸಿನ ಅರ್ಥವನ್ನು ಹೇಳಿದನು
24 ಆಮೇಲೆ ದಾನಿಯೇಲನು ಅರ್ಯೋಕನ ಬಳಿಗೆ ಹೋದನು. ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವದಕ್ಕೆ ಅರ್ಯೋಕನನ್ನು ಆರಿಸಿದ್ದನು. ದಾನಿಯೇಲನು ಅರ್ಯೋಕನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ಅರಸನ ಹತ್ತಿರ ಕರೆದುಕೊಂಡು ಹೋಗು. ನಾನು ಅವನಿಗೆ ಅವನ ಕನಸನ್ನು ಮತ್ತು ಅದರ ಅರ್ಥವನ್ನು ತಿಳಿಸುತ್ತೇನೆ” ಎಂದನು.
25 ಕೂಡಲೇ ಅರ್ಯೋಕನು ದಾನಿಯೇಲನನ್ನು ಅರಸನ ಹತ್ತಿರ ಕರೆದುಕೊಂಡು ಹೋದನು. ಅರ್ಯೊಕನು ಅರಸನಿಗೆ, “ಯೆಹೂದದಿಂದ ಸೆರೆಯಾಳಾಗಿ ತಂದವರಲ್ಲಿ ಅರಸನ ಕನಸನ್ನು ಮತ್ತು ಅದರ ಅರ್ಥವನ್ನು ಹೇಳಬಲ್ಲ ಒಬ್ಬನನ್ನು ನಾನು ಕಂಡುಹಿಡಿದಿದ್ದೇನೆ. ಅವನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುತ್ತಾನೆ” ಎಂದನು.
26 ಅರಸನು ದಾನಿಯೇಲನಿಗೆ (ಬೇಲ್ತೆಶಚ್ಚರನಿಗೆ), “ನೀನು ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಬಲ್ಲೆಯಾ?” ಎಂದು ಕೇಳಿದನು.
27 ದಾನಿಯೇಲನು, “ಅರಸನಾದ ನೆಬೂಕದ್ನೆಚ್ಚರನೇ, ಯಾವ ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಅರಸನಾದ ನಿನಗೆ ರಹಸ್ಯವನ್ನು ಹೇಳಲಾಗಲಿಲ್ಲ.
28 ಆದರೆ ಪರಲೋಕದಲ್ಲಿ ಯೆಹೋವನು ಎಂಬಾತನಿದ್ದಾನೆ. ಆತನು ರಹಸ್ಯಗಳನ್ನು ಹೇಳುತ್ತಾನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ಅರಸನಾದ ನಿನಗೆ ಯೆಹೋವನು ತಿಳಿಯಪಡಿಸಿದ್ದಾನೆ. ಇದೇ ನೀನು ಕಂಡ ಕನಸು, ನೀನು ಹಾಸಿಗೆಯ ಮೇಲೆ ಮಲಗಿದ್ದಾಗ ಕಂಡ ಸಂಗತಿಗಳು ಇವು:
29 ಅರಸನೇ, ನೀನು ನಿನ್ನ ಹಾಸಿಗೆಯ ಮೇಲೆ ಮಲಗಿಕೊಂಡಿದ್ದೆ. ಭವಿಷ್ಯದಲ್ಲಿ ಸಂಭವಿಸುವುದರ ಬಗ್ಗೆ ಆಲೋಚಿಸತೊಡಗಿದ್ದೆ. ದೇವರು ಜನರಿಗೆ ರಹಸ್ಯವನ್ನು ತಿಳಿಸಬಲ್ಲನು. ಭವಿಷ್ಯದಲ್ಲಿ ನಡೆಯಲಿರುವುದನ್ನು ಆತನೇ ನಿನಗೆ ತೋರಿಸಿದನು.
30 ದೇವರು ರಹಸ್ಯವನ್ನು ನನಗೂ ತಿಳಿಸಿದ್ದಾನೆ! ದೇವರು ನನಗೆ ತಿಳಿಸಿರುವುದು ನಾನು ಬೇರೆಯವರಿಗಿಂತ ಹೆಚ್ಚು ಬುದ್ಧಿವಂತನೆಂದಲ್ಲ. ಆದರೆ ಅರಸನಾದ ನಿನಗೆ ಇದರ ಅರ್ಥ ತಿಳಿಯಲಿ ಎಂಬ ಉದ್ದೇಶದಿಂದ ದೇವರು ನನಗೆ ತಿಳಿಸಿದ್ದಾನೆ. ಇದರಿಂದ ನಿನ್ನ ಮನಸ್ಸಿನ ಯೋಚನೆಗಳ ವಿಷಯ ನಿನಗೆ ತಿಳಿದುಬರುತ್ತದೆ.
31 “ಅರಸನೇ, ನಿನ್ನ ಕನಸಿನಲ್ಲಿ ನಿನ್ನ ಎದುರಿಗೆ ಒಂದು ದೊಡ್ಡ ಪ್ರತಿಮೆಯನ್ನು ಕಂಡೆ. ಅದು ಬಹಳ ದೊಡ್ಡದಾಗಿಯೂ ಪ್ರಕಾಶಮಾನವಾಗಿಯೂ ಪ್ರಭಾವಶಾಲಿಯಾಗಿಯೂ ಇತ್ತು. ನೋಡಿದವರು ಆಶ್ಚರ್ಯಚಕಿತರಾಗಿ ಕಣ್ಣರಳಿಸುವಂತಿತ್ತು.
32 ಆ ಪ್ರತಿಮೆಯ ತಲೆಯನ್ನು ಚೊಕ್ಕ ಚಿನ್ನದಿಂದ ಮಾಡಲಾಗಿತ್ತು. ಅದರ ಎದೆ ಮತ್ತು ತೋಳುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಹೊಟ್ಟೆ, ಸೊಂಟ ಮತ್ತು ತೊಡೆಗಳು ಕಂಚಿನಿಂದ ಮಾಡಲ್ಪಟ್ಟಿದ್ದವು.
33 ಕಾಲುಗಳು ಕಬ್ಬಿಣದಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಲಾಗಿದ್ದವು.
34 ನೀನು ಆ ಪ್ರತಿಮೆಯನ್ನು ನೋಡುತ್ತಿದ್ದಾಗ ನಿನಗೊಂದು ಬಂಡೆಯು ಕಾಣಿಸಿತು. ಆ ಬಂಡೆಯು ತನ್ನಷ್ಟಕ್ಕೆ ತಾನೇ ಸಡಿಲಗೊಂಡಿತು; ಯಾರೂ ಅದನ್ನು ಒಡೆಯಲಿಲ್ಲ. ಆಮೇಲೆ ಆ ಬಂಡೆಯು ಗಾಳಿಯಲ್ಲಿ ಹಾರಿಬಂದು ಆ ಪ್ರತಿಮೆಯ ಕಬ್ಬಿಣ ಮತ್ತು ಮಣ್ಣಿನ ಪಾದಗಳಿಗೆ ಅಪ್ಪಳಿಸಿತು. ಆ ಬಂಡೆಯು ಪ್ರತಿಮೆಯ ಪಾದಗಳನ್ನು ಒಡೆದು ಪುಡಿಪುಡಿ ಮಾಡಿತು.
35 ಆಮೇಲೆ ಕಬ್ಬಿಣ, ಮಣ್ಣು, ಕಂಚು, ಬೆಳ್ಳಿ, ಚಿನ್ನ ಎಲ್ಲವೂ ಏಕಕಾಲಕ್ಕೆ ಒಡೆದು ಚೂರುಚೂರಾದವು. ಆ ಚೂರುಗಳೆಲ್ಲ ಬೇಸಿಗೆಕಾಲದ ಕಣದಲ್ಲಿನ ಹೊಟ್ಟಿನಂತಾದವು. ಗಾಳಿಯು ಆ ಚೂರುಗಳನ್ನು ಹಾರಿಸಿಕೊಂಡು ಹೋಯಿತು. ಅಲ್ಲಿ ಏನೂ ಉಳಿಯಲಿಲ್ಲ. ಹಿಂದೆಂದೂ ಅಲ್ಲೊಂದು ಪ್ರತಿಮೆ ಇತ್ತೆಂದು ಯಾರೂ ಹೇಳುವಂತಿರಲಿಲ್ಲ. ಆಮೇಲೆ ಆ ಪ್ರತಿಮೆಗೆ ಅಪ್ಪಳಿಸಿದ ಬಂಡೆಯು ಒಂದು ದೊಡ್ಡ ಪರ್ವತವಾಗಿ ಇಡೀ ಭೂಮಂಡಲವನ್ನು ವ್ಯಾಪಿಸಿತು.
36 “ಇದೇ ನಿನ್ನ ಕನಸು. ಈಗ ನಾನು ನಿನಿಗೆ ಅದರ ಅರ್ಥವನ್ನು ಹೇಳುತ್ತೇನೆ.
37 ಅರಸನೇ, ನೀನು ರಾಜಾಧಿರಾಜ. ಪರಲೋಕದ ದೇವರು ನಿನಗೆ ರಾಜ್ಯ, ಬಲ, ಪರಾಕ್ರಮ ಮತ್ತು ವೈಭವಗಳನ್ನು ದಯಪಾಲಿಸಿದ್ದಾನೆ.
38 ದೇವರು ನಿನಗೆ ಅಧಿಕಾರವನ್ನು ಕೊಟ್ಟಿದ್ದಾನೆ. ಆ ದೇವರು ನಿನ್ನನ್ನು ಎಲ್ಲೆಡೆಯಲ್ಲಿರುವ ಜನರ ಮೇಲೆ, ಕಾಡುಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ ಆಳುವಂತೆ ಮಾಡಿದ್ದಾನೆ. ಅರಸನಾದ ನೆಬೂಕದ್ನೆಚ್ಚರನೇ, ನೀನೇ ಆ ಪ್ರತಿಮೆಯ ಬಂಗಾರದ ತಲೆ.
39 “ನಿನ್ನ ಕಾಲವಾದ ಮೇಲೆ ಮತ್ತೊಂದು ರಾಜ್ಯವುಂಟಾಗುವುದು. ಅದು ಬೆಳ್ಳಿಯ ಭಾಗ. ಆದರೆ ಆ ರಾಜ್ಯವು ನಿನ್ನ ರಾಜ್ಯದಷ್ಟು ದೊಡ್ಡದಾಗಿರುವುದಿಲ್ಲ. ಆ ತರುವಾಯ ಬೇರೊಂದು ಮೂರನೇ ರಾಜ್ಯವು ಈ ಭೂಮಿಯ ಮೇಲೆ ಆಳ್ವಿಕೆ ಮಾಡುವುದು. ಅದು ಕಂಚಿನ ಭಾಗ.
40 ಆಮೇಲೆ ನಾಲ್ಕನೆಯ ರಾಜ್ಯ. ಆ ರಾಜ್ಯವು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಹೇಗೆ ಕಬ್ಬಿಣವು ಎಲ್ಲ ವಸ್ತುಗಳನ್ನು ಒಡೆದು ಪುಡಿ ಮಾಡುತ್ತದೆಯೋ ಹಾಗೆಯೇ ಆ ನಾಲ್ಕನೆಯ ರಾಜ್ಯವು ಉಳಿದೆಲ್ಲ ರಾಜ್ಯಗಳನ್ನು ಒಡೆದು ಪುಡಿ ಮಾಡುತ್ತದೆ.
41 “ಆ ಪ್ರತಿಮೆಯ ಪಾದಗಳು ಮತ್ತು ಕಾಲ್ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಿದ್ದನ್ನು ನೀನು ನೋಡಿರುವೆ. ನಾಲ್ಕನೆಯ ರಾಜ್ಯವು ವಿಭಜಿತ ರಾಜ್ಯವಾಗುವದೆಂದು ಇದರ ಅರ್ಥ. ನೀನು ನೋಡಿದಂತೆ ಕಬ್ಬಿಣವು ಜೇಡಿಮಣ್ಣಿನಲ್ಲಿ ಬೆರೆತದ್ದರಿಂದ ಅದರಲ್ಲಿ ಕಬ್ಬಿಣದ ಗಟ್ಟಿತನ ಸ್ವಲ್ಪ ಇರುತ್ತದೆ.
42 ಆ ಪ್ರತಿಮೆಯ ಕಾಲ್ಬೆರಳುಗಳ ಒಂದಂಶ ಕಬ್ಬಿಣ ಮತ್ತೊಂದು ಅಂಶ ಜೇಡಿಮಣ್ಣಾಗಿದ್ದಂತೆ ಆ ರಾಜ್ಯದ ಒಂದಂಶವು ಕಬ್ಬಿಣದಂತೆ ಗಟ್ಟಿ, ಇನ್ನೊಂದು ಅಂಶವು ಜೇಡಿಮಣ್ಣಿನಂತೆ ದುರ್ಬಲವಾಗಿರುತ್ತದೆ.
43 ಕಬ್ಬಿಣ ಮತ್ತು ಜೇಡಿಮಣ್ಣು ಬೆರೆಸಿದ್ದನ್ನು ನೀನು ನೋಡಿರುವೆ. ಆದರೆ ಕಬ್ಬಿಣ ಮತ್ತು ಜೇಡಿಮಣ್ಣು ಸಂಪೂರ್ಣವಾಗಿ ಪರಸ್ಪರ ಬೆರೆಯುವದಿಲ್ಲ. ಅದೇ ರೀತಿ ನಾಲ್ಕನೇ ರಾಜ್ಯದ ಜನರು ಪರಸ್ಪರ ಕೂಡಿದ್ದರೂ ಸಹ ಒಂದೇ ಜನರಲ್ಲಿರಬೇಕಾದ ಏಕತೆ ಅವರಲ್ಲಿರುವದಿಲ್ಲ.
44 “ನಾಲ್ಕನೇ ರಾಜ್ಯದ ಅರಸರ ಕಾಲದಲ್ಲಿ ಪರಲೋಕದ ದೇವರು ಇನ್ನೊಂದು ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವನು. ಈ ಸಾಮ್ರಾಜ್ಯವು ಎಂದೆಂದಿಗೂ ಉಳಿಯುವದು. ಎಂದಿಗೂ ಅಳಿಯದು; ಬೇರೊಂದು ಜನರ ಗುಂಪಿಗೆ ಹೋಗದಂಥ ಸಾಮ್ರಾಜ್ಯವಾಗಿರುವುದು. ಈ ಸಾಮ್ರಾಜ್ಯವು ಉಳಿದೆಲ್ಲ ಸಾಮ್ರಾಜ್ಯಗಳನ್ನು ನಾಶಮಾಡಿ ಕೊನೆಗಾಣಿಸುವುದು. ಆದರೆ ಆ ಸಾಮ್ರಾಜ್ಯವು ಮಾತ್ರ ಶಾಶ್ವತವಾಗಿ ನಿಲ್ಲುವದು.
45 “ಅರಸನಾದ ನೆಬೂಕದ್ನೆಚ್ಚರನೇ,ಾಲ್ಕನೇ ರಾಜ್ಯದ ರಾಜರ ಕಾರದಿಲ್ಲ.ಕೂಡಿದೇ ರೀತಿ ನಾಲ್ರಣ ಮತ್ತೊಂದು ಅಂಶ ಜೇಡಿಮಣ್ಣಾಗಿದ್ದಂತೇದೆಂದು ಇದರ ಅರ್ಥ.ಡಿಪುಡಿ ಮಾಡಿತು. ್ನ ಚೂರುಚೂರು ಮಾಡಿತು. ಭವಿಷ್ಯದಲ್ಲಿ ಏನಾಗುವದೆಂಬುದನ್ನು ದೇವರು ನಿನಗೆ ಈ ರೀತಿಯಲ್ಲಿ ತೋರಿಸಿದ್ದಾನೆ. ನಿನ್ನ ಕನಸು ನಿಜ. ಅದರ ಅರ್ಥವು ನಂಬಿಕೆಗೆ ಯೋಗ್ಯವಾಗಿದೆ” ಎಂದು ವಿವರಿಸಿದನು.
46 ಆಗ ಅರಸನಾದ ನೆಬೂಕದ್ನೆಚ್ಚರನು ದಾನಿಯೇಲನ ಮುಂದೆ ಅಡ್ಡಬಿದ್ದು ಅವನನ್ನು ಹೊಗಳಿದನು; ಅವನ ಗೌರವಾರ್ಥವಾಗಿ ಧೂಪಹಾಕಿ ನೈವೇದ್ಯಮಾಡಬೇಕೆಂದು ಆಜ್ಞಾಪಿಸಿದನು. ಆಮೇಲೆ ಅರಸನು ದಾನಿಯೇಲನಿಗೆ,
47 “ನಿನ್ನ ದೇವರು ಸರ್ವಶ್ರೇಷ್ಠನು ಮತ್ತು ಪ್ರಬಲನು ಎನ್ನುವದು ನನಗೆ ಖಚಿತವಾಯಿತು. ಆತನು ಎಲ್ಲ ಅರಸರ ಒಡೆಯನಾಗಿದ್ದಾನೆ. ಆತನು ಜನರಿಗೆ ನಿಗೂಢವಾಗಿದ್ದ ರಹಸ್ಯವನ್ನು ತಿಳಿಸುತ್ತಾನೆ. ನೀನು ನನಗೆ ಈ ರಹಸ್ಯವನ್ನು ತಿಳಿಸಲು ಸಮರ್ಥನಾದುದರಿಂದ ಇದೆಲ್ಲ ನಿಜವೆಂದು ನಾನು ನಂಬುತ್ತೇನೆ” ಎಂದು ಹೇಳಿದನು.
48 ತರುವಾಯ ಅರಸನು ದಾನಿಯೇಲನಿಗೆ ತನ್ನ ರಾಜ್ಯದಲ್ಲಿ ಬಹುಮುಖ್ಯವಾದ ಉದ್ಯೋಗವನ್ನು ಕೊಟ್ಟನು. ಅಮೂಲ್ಯವಾದ ಕಾಣಿಕೆಗಳನ್ನೂ ಕೊಟ್ಟನು. ನೆಬೂಕದ್ನೆಚ್ಚರನು ದಾನಿಯೇಲನನ್ನು ಬಾಬಿಲೋನ್ ಸಂಸ್ಥಾನದ ಅಧಿಪತಿಯನ್ನಾಗಿ ಮಾಡಿದನು. ಬಾಬಿಲೋನಿನ ಎಲ್ಲಾ ವಿದ್ವಾಂಸರ ಮುಖ್ಯಸ್ಥನನ್ನಾಗಿ ಮಾಡಿದನು.
49 ಶದ್ರಕ್, ಮೇಶಕ್, ಅಬೇದ್ನೆಗೋ ಇವರುಗಳನ್ನು ಬಾಬಿಲೋನ್ ಸಂಸ್ಥಾನದ ದೊಡ್ಡ ಅಧಿಕಾರಿಗಳನ್ನಾಗಿ ನೇಮಿಸಬೇಕೆಂದು ದಾನಿಯೇಲನು ಅರಸನನ್ನು ಕೇಳಿಕೊಂಡನು. ದಾನಿಯೇಲನು ಹೇಳಿದಂತೆ ಅರಸನು ಮಾಡಿದನು. ದಾನಿಯೇಲನು ಅರಸನ ಸನ್ನಿಧಿಯಲ್ಲಿರುವ ಪ್ರಮುಖರಲ್ಲಿ ಒಬ್ಬನಾದನು.