8
ದಾನಿಯೇಲನು ಕನಸಿನಲ್ಲಿ ಕಂಡ ಟಗರು ಮತ್ತು ಹೋತ
1 ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆನು. ಇದು ಮೊದಲಿನ ದರ್ಶನದ ತರುವಾಯ ಕಂಡದ್ದು.
2 ಈ ದರ್ಶನದಲ್ಲಿ ನಾನು ಶೂಷನ್ ನಗರದಲ್ಲಿದ್ದೆನು. ಶೂಷನ್ ನಗರವು ಏಲಾಮ್ ಸಂಸ್ಥಾನದ ರಾಜಧಾನಿಯಾಗಿತ್ತು. ನಾನು ಊಲಾ ನದಿಯ ದಡದ ಮೇಲೆ ನಿಂತುಕೊಂಡಿದ್ದೆನು.
3 ನಾನು ಕಣ್ಣೆತ್ತಿ ನೋಡಲಾಗಿ ಊಲಾ ನದಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಟಗರೊಂದು ನನ್ನ ಕಣ್ಣಿಗೆ ಬಿತ್ತು. ಟಗರಿಗೆ ಎರಡು ಉದ್ದವಾದ ಕೊಂಬುಗಳಿದ್ದವು. ಆ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದು ಕೊಂಬು ಇನ್ನೊಂದು ಕೊಂಬಿಗಿಂತ ಉದ್ದವಾಗಿತ್ತು. ಉದ್ದವಾದ ಕೊಂಬು ಇನ್ನೊಂದು ಕೊಂಬಿಗಿಂತ ಹಿಂದಕ್ಕೆ ಇತ್ತು.
4 ಆ ಟಗರು ತನ್ನ ಕೊಂಬುಗಳಿಂದ ಎಲ್ಲ ಕಡೆಗೂ ಹಾಯುತ್ತಿತ್ತು. ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಜಿಗಿದಾಡುತ್ತಿತ್ತು. ಯಾವ ಪ್ರಾಣಿಗೂ ಆ ಟಗರನ್ನು ತಡೆಯಲಾಗಲಿಲ್ಲ. ಮಿಕ್ಕ ಪ್ರಾಣಿಗಳನ್ನು ರಕ್ಷಿಸುವುದು ಯಾರಿಂದಲೂ ಆಗಲಿಲ್ಲ. ಆ ಟಗರು ತನ್ನ ಮನಸ್ಸಿಗೆ ಬಂದಂತೆ ಮಾಡಲು ಸಾಧ್ಯವಾಯಿತು. ಆ ಟಗರು ಬಹಳ ಪ್ರಬಲವಾಯಿತು.
5 ನಾನು ಈ ಟಗರಿನ ಬಗ್ಗೆ ಯೋಚಿಸಿದೆ. ನಾನು ಯೋಚನೆ ಮಾಡುತ್ತಿರುವಾಗಲೇ ಪಶ್ಚಿಮ ದಿಕ್ಕಿನಿಂದ ಒಂದು ಹೋತವು ಬರುವುದನ್ನು ಕಂಡೆ. ಈ ಹೋತವು ಇಡೀ ಭೂಮಂಡಲದ ಮೇಲೆಲ್ಲಾ ಓಡಾಡಿತು. ಅದು ತನ್ನ ಕಾಲುಗಳು ನೆಲಕ್ಕೆ ಸೋಕದಂತೆ ಓಡುತ್ತಿತ್ತು. ಈ ಹೋತಕ್ಕೆ ಎದ್ದುಕಾಣುವ ಒಂದು ದೊಡ್ಡ ಕೊಂಬು ಇತ್ತು. ಆ ಕೊಂಬು ಸರಿಯಾಗಿ ಆ ಹೋತದ ಎರಡು ಕಣ್ಣುಗಳ ಮಧ್ಯದಲ್ಲಿತ್ತು.
6 ಆ ಹೋತವು ಟಗರಿನ ಹತ್ತಿರಕ್ಕೆ ಬಂದಿತು. ನಾನು ಊಲಾ ನದಿಯ ದಡದ ಮೇಲೆ ನೋಡಿದ ಟಗರೇ ಇದಾಗಿತ್ತು. ಆ ಹೋತಕ್ಕೆ ಬಹಳ ಕೋಪ ಬಂದಿತ್ತು; ಅದು ವೇಗದಿಂದ ಟಗರಿನ ಕಡೆಗೆ ಓಡಿತು.
7 ಹೋತವು ಟಗರಿನ ಕಡೆಗೆ ಓಡುವದನ್ನು ನಾನು ನೋಡುತ್ತಿದ್ದೆ. ಅದು ಅತಿ ಕೋಪದಿಂದ ಟಗರಿನ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಟಗರಿಗೆ ಆ ಹೋತವನ್ನು ತಡೆದು ನಿಲ್ಲಿಸಲಾಗಲಿಲ್ಲ. ಆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು. ಟಗರನ್ನು ಹೋತದಿಂದ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
8 ಹೋತವು ಬಹಳ ಪ್ರಬಲವಾಯಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಆ ಒಂದು ದೊಡ್ಡ ಕೊಂಬು ಇದ್ದ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ಕೊಂಬುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ನಾಲ್ಕು ಕೊಂಬುಗಳು ನಾಲ್ಕು ಬೇರೆಬೇರೆ ದಿಕ್ಕುಗಳಲ್ಲಿ ಚಾಚಿಕೊಂಡವು.
9 ಆಗ ಅವುಗಳಿಂದ ಒಂದು ಚಿಕ್ಕ ಕೊಂಬು ಮೊಳೆಯಿತು. ಆ ಚಿಕ್ಕ ಕೊಂಬು ಬೆಳೆದು ಬಹಳ ದೊಡ್ಡದಾಯಿತು. ಅದು ಆಗ್ನೇಯಕ್ಕೆ ಬೆಳೆಯಿತು. ಅದು ದಕ್ಷಿಣಕ್ಕೆ, ಪೂರ್ವಕ್ಕೆ ಮತ್ತು ಸುಂದರವಾದ ನಾಡಿಗೆ ಬೆಳೆಯಿತು.
10 ಆ ಚಿಕ್ಕ ಕೊಂಬು ಬಹಳ ದೊಡ್ಡದಾಯಿತು. ಅದು ಆಕಾಶಕ್ಕೆ ಮುಟ್ಟುವಂತೆ ಬೆಳೆಯಿತು. ಆ ಚಿಕ್ಕ ಕೊಂಬು ಆಕಾಶದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಬೀಳಿಸಿತು ಮತ್ತು ಎಲ್ಲ ನಕ್ಷತ್ರಗಳ ಮೇಲೆ ಹತ್ತಿತ್ತು.
11 ಆ ಚಿಕ್ಕ ಕೊಂಬು ಅತಿ ಪ್ರಬಲವಾಯಿತು ಮತ್ತು ನಕ್ಷತ್ರಾಧಿಪತಿಯನ್ನು (ದೇವರನ್ನು) ವಿರೋಧಿಸತೊಡಗಿತು. ಆ ಚಿಕ್ಕ ಕೊಂಬು ನಕ್ಷತ್ರಾಧಿಪತಿಗೆ ನಿತ್ಯಹೋಮಗಳು ಸಲ್ಲದಂತೆ ಮಾಡಿತು. ಜನರು ನಕ್ಷತ್ರಾಧಿಪತಿಯನ್ನು ಪೂಜಿಸುವ ಸ್ಥಳವನ್ನು ಕೆಡವಿಬಿಟ್ಟಿತು.
12 ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು.
13 ಆಗ ಒಬ್ಬ ಪವಿತ್ರನು ಮಾತನಾಡುವದನ್ನು ಕೇಳಿದೆ. ಮತ್ತೊಬ್ಬ ಪವಿತ್ರನು ಮೊದಲನೆಯ ಪವಿತ್ರನಿಗೆ ಉತ್ತರಿಸುವದನ್ನೂ ಕೇಳಿದೆ. ಮೊದಲನೆಯ ಪವಿತ್ರನು, “ಈ ದರ್ಶನ ನಿತ್ಯಹೋಮಗಳಿಗೆ ಏನಾಗುವದೆಂಬುದನ್ನು ತೋರಿಸುವದು. ಇದು ಆ ಭಯಾನಕ ಪಾಪದ ಕುರಿತಾಗಿದೆ. ಅಧಿಪತಿಯು ಆರಾಧಿಸಲ್ಪಡುವ ಪವಿತ್ರಾಲಯವನ್ನು ಜನರು ಹಾಳುಮಾಡಿದರೆ, ಜನರು ಆ ಸ್ಥಳವನ್ನು ತುಳಿದಾಡಿದರೆ, ಆ ನಕ್ಷತ್ರಗಳ ಮೇಲೆ ಜನರು ನಡೆದಾಡಿದರೆ ಏನಾಗುವದೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ಇದೆಲ್ಲ ಎಷ್ಟು ದಿನ ನಡೆಯುವದು?” ಎಂದನು.
14 ಇನ್ನೊಬ್ಬ ಪವಿತ್ರನು, “ಇದೆಲ್ಲಾ ಎರಡು ಸಾವಿರದ ಮುನ್ನೂರು ದಿನಗಳವರೆಗೆ ನಡೆಯುವುದು. ಆಮೇಲೆ ಪವಿತ್ರಾಲಯಕ್ಕೆ ಪುನಃ ನ್ಯಾಯ ಸಿಕ್ಕುವುದು” ಎಂದು ಉತ್ತರಿಸಿದನು.
ದಾನಿಯೇಲನಿಗೆ ದರ್ಶನದ ಅರ್ಥವನ್ನು ವಿವರಿಸಲಾಯಿತು
15 ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು.
16 ಆಗ ನಾನು ಮನುಷ್ಯನ ಧ್ವನಿಯನ್ನು ಕೇಳಿದೆ. ಈ ಧ್ವನಿಯು ಊಲಾ ನದಿಯ ಮೇಲಿಂದ ಬಂದಿತು. ಆ ಧ್ವನಿಯು, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಈ ಮನುಷ್ಯನಿಗೆ ತಿಳಿಸು” ಎಂದು ಆದೇಶ ಕೊಟ್ಟಿತು.
17 ಆಗ ಮನುಷ್ಯನಂತಿದ್ದ ಗಬ್ರಿಯೇಲನು ನಾನು ನಿಂತಲ್ಲಿಗೆ ಬಂದನು. ಅವನು ತೀರ ನನ್ನ ಹತ್ತಿರಕ್ಕೆ ಬಂದಾಗ ನನಗೆ ಬಹಳ ಭಯವಾಯಿತು. ನಾನು ನೆಲಕ್ಕೆ ಬಿದ್ದೆ. ಆದರೆ ಗಬ್ರಿಯೇಲನು ನನಗೆ, “ಮನುಷ್ಯನೇ, ಈ ದರ್ಶನ ಅಂತ್ಯಕಾಲದ ಕುರಿತಾಗಿದೆ ಎಂಬುದು ನಿನಗೆ ತಿಳಿದಿರಲಿ” ಎಂದು ಹೇಳಿದನು.
18 ಗಬ್ರಿಯೇಲನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನಿದ್ರಾವಶನಾದೆನು. ಅದು ಬಹಳ ಗಾಢವಾದ ನಿದ್ರೆಯಾಗಿತ್ತು. ನನ್ನ ಮುಖವು ನೆಲದ ಮೇಲೆ ಇತ್ತು. ಆಗ ಗಬ್ರಿಯೇಲನು ನನ್ನನ್ನು ಮುಟ್ಟಿ ಎಬ್ಬಿಸಿ,
19 “ನಾನು ನಿನಗೆ ಈಗ ದರ್ಶನದ ಅರ್ಥವನ್ನು ವಿವರಿಸುತ್ತೇನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ನಾನು ನಿನಗೆ ಹೇಳುತ್ತೇನೆ. ನಿನ್ನ ದರ್ಶನವು ಅಂತ್ಯಕಾಲದ ಕುರಿತಾದದ್ದು.
20 “ನೀನು ಎರಡು ಕೊಂಬುಗಳುಳ್ಳ ಒಂದು ಟಗರನ್ನು ನೋಡಿದೆ. ಆ ಕೊಂಬುಗಳು ಮೇದ್ಯಯ ಮತ್ತು ಪಾರಸಿಯ ರಾಜ್ಯಗಳು.
21 ಆ ಹೋತವು ಗ್ರೀಕ್ ರಾಜ್ಯ. ಅದರ ಎರಡು ಕಣ್ಣುಗಳ ಮಧ್ಯದ ಕೊಂಬು ಮೊದಲನೆಯ ಅರಸ.
22 ಆ ಕೊಂಬು ಮುರಿಯಿತು; ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ನಾಲ್ಕು ಕೊಂಬುಗಳು ನಾಲ್ಕು ರಾಜ್ಯಗಳನ್ನು ಸೂಚಿಸುವವು. ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನ ರಾಷ್ಟ್ರದಿಂದ ಹುಟ್ಟುವವು. ಆದರೆ ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನಷ್ಟು ಶಕ್ತಿಶಾಲಿಯಾಗಿರುವದಿಲ್ಲ.
23 “ಆ ರಾಜ್ಯಗಳ ಅಂತ್ಯಕಾಲ ಸಮೀಪಿಸಿದಾಗ ಒಬ್ಬ ಧೈರ್ಯಶಾಲಿಯಾದ ಮತ್ತು ಕ್ರೂರನಾದ ಅರಸನು ತಲೆದೋರುವನು. ಈ ಅರಸನು ಬಹಳ ಕುತಂತ್ರಿಯಾಗಿರುವನು. ಅಧರ್ಮಿಗಳ ಮತ್ತು ಪಾಪಿಗಳ ಸಂಖ್ಯೆ ಹೆಚ್ಚಾದಾಗ ಇದೆಲ್ಲ ನಡೆಯುವುದು.
24 ಈ ಅರಸನು ಬಹಳ ಪ್ರಬಲನಾಗಿರುವನು. ಆದರೆ ಆ ಪ್ರಾಬಲ್ಯ ಸ್ವಶಕ್ತಿಯಿಂದ ಬಂದುದಲ್ಲ. ಈ ಅರಸನು ಅಪಾರ ವಿನಾಶವನ್ನುಂಟು ಮಾಡುವನು. ಅವನು ಕೈಕೊಂಡ ಪ್ರತಿಯೊಂದು ಕೆಲಸದಲ್ಲಿ ಅವನಿಗೆ ಜಯ ಲಭಿಸುವುದು. ಅವನು ಬಲಿಷ್ಠರನ್ನೂ ದೇವಭಕ್ತರನ್ನೂ ನಾಶಮಾಡುವನು.
25 “ಅರಸನು ಚತುರನೂ ಕುತಂತ್ರಿಯೂ ಆಗಿರುವನು. ಅವನು ತನ್ನ ಬುದ್ಧಿಶಕ್ತಿಯನ್ನೂ ಹುಸಿನುಡಿಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದುವನು. ತಾನು ಬಹಳ ಮುಖ್ಯನೆಂದು ಅವನು ಭಾವಿಸುವನು. ನೆಮ್ಮದಿಯಾಗಿರುವ ಅನೇಕ ಜನರನ್ನು ಅನಿರೀಕ್ಷಿತವಾಗಿ ನಾಶಮಾಡುವನು. ಅವನು ರಾಜರುಗಳ ರಾಜನೊಂದಿಗೆ (ದೇವರೊಂದಿಗೆ) ಸಹ ಹೋರಾಡುವ ಪ್ರಯತ್ನ ಮಾಡುವನು. ಆದರೆ ಆ ಕ್ರೂರ ರಾಜನ ಶಕ್ತಿಯು ನಾಶವಾಗುವುದು. ಆದರೆ ಅದು ಮನುಷ್ಯನ ಕೈಯಿಂದ ನಾಶವಾಗುವದಿಲ್ಲ.
26 “ಆಗಿನ ಕಾಲದ ಮತ್ತು ಪರಿಸ್ಥಿತಿಯ ಬಗ್ಗೆ ಕಂಡ ದರ್ಶನಗಳು ನಿಜವಾಗುವವು. ಈ ದರ್ಶನ ಗುಟ್ಟಾಗಿರಲಿ. ಅದೆಲ್ಲ ನಡೆಯಬೇಕಾದರೆ ಇನ್ನೂ ಬಹಳ ಕಾಲಬೇಕು” ಎಂದು ಹೇಳಿದನು.
27 ದಾನಿಯೇಲನೆಂಬ ನಾನು ಬಹಳ ಅಶಕ್ತನಾದೆನು. ಆ ದರ್ಶನದ ತರುವಾಯ ಹಲವಾರು ದಿವಸ ನಾನು ಕಾಯಿಲೆ ಬಿದ್ದೆನು. ಆಮೇಲೆ ನಾನು ಗುಣಹೊಂದಿ ರಾಜಕಾರ್ಯವನ್ನು ಪ್ರಾರಂಭಿಸಿದೆನು. ಆದರೆ ಆ ದರ್ಶನದಿಂದ ನನ್ನ ಮನಸ್ಸು ಕಲಕಿತು. ಆ ದರ್ಶನದ ಅರ್ಥವೇನೆಂಬುದು ನನಗೆ ತಿಳಿಯಲಿಲ್ಲ.