14
ಇಸ್ರೇಲರು ದೇವಜನರು
1 “ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ನಿಮ್ಮಲ್ಲಿ ಯಾರಾದರೂ ಸತ್ತರೆ ನೀವು ತಲೆಬೋಳಿಸಿಕೊಂಡಾಗಲಿ ನಿಮ್ಮನ್ನು ಕತ್ತರಿಸಿಕೊಂಡಾಗಲಿ ನಿಮ್ಮ ದುಃಖವನ್ನು ಪ್ರದರ್ಶಿಸಕೂಡದು.
2 ಯಾಕೆಂದರೆ ನೀವು ಬೇರೆಯವರಿಗಿಂತ ವಿಭಿನ್ನರು. ನೀವು ಯೆಹೋವನ ವಿಶೇಷ ಜನರಾಗಿದ್ದೀರಿ. ಲೋಕದ ಎಲ್ಲಾ ಜನರಲ್ಲಿ ಯೆಹೋವನು ನಿಮ್ಮನ್ನು ತನ್ನ ಸ್ವಕೀಯ ಜನಾಂಗವನ್ನಾಗಿ ಆರಿಸಿಕೊಂಡಿದ್ದಾನೆ.
ಇಸ್ರೇಲರು ತಿನ್ನಬಹುದಾದ ಆಹಾರ
3 “ಯೆಹೋವನು ಅಸಹ್ಯಪಡುವ ವಸ್ತುಗಳನ್ನು ನೀವು ತಿನ್ನಬಾರದು.
4 ನೀವು ಹಸು, ಕುರಿ, ಆಡು,
5 ಜಿಂಕೆ, ದುಪ್ಪಿ, ಸಾರಂಗ, ಕಾಡುಕುರಿ, ಕಾಡುಮೇಕೆ, ಕಡಬೆ, ಬೆಟ್ಟದ ಆಡು ಇವುಗಳನ್ನು ತಿನ್ನಬಹುದು.
6 ಗೊರಸು ಸೀಳಿರುವ ಮತ್ತು ಮೆಲುಕು ಹಾಕುವ ಪ್ರಾಣಿಯನ್ನು ನೀವು ತಿನ್ನಬಹುದು.
7 ಆದರೆ ಒಂಟೆ, ಮೊಲ, ಬೆಟ್ಟದ ಮೊಲ ಇವುಗಳನ್ನು ತಿನ್ನಬಾರದು. ಈ ಪ್ರಾಣಿಗಳು ಮೆಲುಕು ಹಾಕುತ್ತವೆ ಆದರೆ ಅವುಗಳ ಗೊರಸು ಸೀಳಿಲ್ಲ. ಆದ್ದರಿಂದ ಅವುಗಳು ಶುದ್ಧಪ್ರಾಣಿಗಳಲ್ಲ. ನೀವು ಅವುಗಳನ್ನು ಆಹಾರವಾಗಿ ಉಪಯೋಗಿಸಕೂಡದು.
8 ನೀವು ಹಂದಿಗಳನ್ನು ತಿನ್ನಬಾರದು. ಅವುಗಳ ಗೊರಸುಗಳು ಸೀಳಿವೆ; ಆದರೆ ಅವುಗಳು ಮೆಲುಕು ಹಾಕುವುದಿಲ್ಲ. ಆದ್ದರಿಂದ ಹಂದಿಯು ನಿಮಗೆ ಶುದ್ಧ ಆಹಾರವಾಗುವುದಿಲ್ಲ; ಹಂದಿಯ ಹೆಣವನ್ನೂ ನೀವು ಮುಟ್ಟಬಾರದು.
9 “ಮೀನುಗಳಲ್ಲಿ ಪರೆ ಮತ್ತು ಈಜುರೆಕ್ಕೆಗಳಿರುವುದನ್ನು ಆಹಾರವಾಗಿ ಉಪಯೋಗಿಸಬಹುದು.
10 ಪರೆ, ಈಜುರೆಕ್ಕೆಗಳಿಲ್ಲದ ಮೀನುಗಳನ್ನು ತಿನ್ನಬಾರದು. ಅವು ಅಶುದ್ಧ.
11 “ನೀವು ಶುದ್ಧಪಕ್ಷಿಗಳನ್ನು ತಿನ್ನಬಹುದು.
12 ಆದರೆ, ಗಿಡುಗ, ರಣಹದ್ದು, ಕ್ರೌಂಚ,
13 ಸಕಲವಿಧವಾದ ಹದ್ದು, ಗಿಡುಗಗಳು,
14 ಸಕಲ ವಿಧವಾದ ಕಾಗೆಗಳು,
15 ಗೂಬೆಗಳು, ಸಣ್ಣಗೂಬೆಗಳು, ಕಡಲಕಾಗೆ,
16-17 ಸಕಲವಿಧವಾದ ಗೂಬೆಗಳು,
18 ಕೊಕ್ಕರೆಗಳು, ಬಕಪಕ್ಷಿ, ಬಾವಲಿಗಳು ಅಶುದ್ಧವಾದ ಕಾರಣ ತಿನ್ನಬಾರದು.
19 “ರೆಕ್ಕೆಯುಳ್ಳ ಹುಳಗಳೆಲ್ಲಾ ಅಶುದ್ಧ. ಆದ್ದರಿಂದ ಅವುಗಳನ್ನು ತಿನ್ನಬೇಡಿ.
20 ಆದರೆ ನೀವು ಶುದ್ಧವಾದ ಯಾವ ಪಕ್ಷಿಯನ್ನು ಬೇಕಾದರೂ ತಿನ್ನಬಹುದು.
21 “ಸತ್ತುಬಿದ್ದ ಯಾವ ಪ್ರಾಣಿಯನ್ನಾಗಲೀ ತಿನ್ನಬಾರದು. ನಿಮ್ಮ ಊರಲ್ಲಿರುವ ಪರದೇಶಿಗೆ ಕೊಡಿರಿ. ಅವನು ತಿನ್ನಬಹುದು, ಅಥವಾ ಆ ಸತ್ತ ಪ್ರಾಣಿಯನ್ನು ಪರದೇಶಿಗೆ ಮಾರಬಹುದು. ಆದರೆ ನೀವು ತಿನ್ನಬಾರದು. ಯಾಕೆಂದರೆ ನೀವು ಯೆಹೋವನ ಜನರಾಗಿದ್ದೀರಿ; ಆತನ ಸ್ವಕೀಯ ಪ್ರಜೆಗಳಾಗಿದ್ದೀರಿ. ಆಡಿನ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬೇಡಿರಿ.
ದಶಮಾಂಶ
22 “ಪ್ರತಿ ವರ್ಷ ನಿಮ್ಮ ಹೊಲದಲ್ಲಿ ಬೆಳೆಯುವ ಹತ್ತನೆಯ ಒಂದು ಅಂಶವನ್ನು ಪ್ರತ್ಯೇಕಿಸಿಡಿರಿ.
23 ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷ ವಾಸಸ್ಥಾನವಾಗಿ ಯಾವ ಸ್ಥಳವನ್ನು ಆರಿಸಿಕೊಳ್ಳುತ್ತಾನೋ ಆ ಸ್ಥಳಕ್ಕೆ ನೀವು ಹೋಗಬೇಕು. ನಿಮ್ಮ ದೇವರಾದ ಯೆಹೋವನ ಜೊತೆಯಲ್ಲಿರುವುದಕ್ಕಾಗಿ ನೀವು ಅಲ್ಲಿಗೆ ಹೋಗಬೇಕು. ಆ ಸ್ಥಳದಲ್ಲಿ, ನೀವು ಬೆಳೆಯುವ ಬೆಳೆಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಧಾನ್ಯಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಹೊಸ ದ್ರಾಕ್ಷಾರಸವನ್ನು, ನಿಮ್ಮ ಎಣ್ಣೆಯನ್ನು, ನಿಮ್ಮ ಹಿಂಡುಗಳ ಮತ್ತು ಮಂದೆಗಳ ಚೊಚ್ಚಲು ಪಶುಗಳನ್ನು ಯೆಹೋವನ ಪ್ರಸನ್ನತೆಯಲ್ಲಿ ತಿನ್ನಬೇಕು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಬೇಕೆಂಬುದನ್ನು ನೀವು ಯಾವಾಗಲೂ ಈ ರೀತಿಯಲ್ಲಿ ಜ್ಞಾಪಕ ಮಾಡಿಕೊಳ್ಳುವಿರಿ.
24 ಒಂದುವೇಳೆ ಆ ವಿಶೇಷ ಸ್ಥಳವು ನೀವು ಪ್ರಯಾಣ ಮಾಡಲಾರದಷ್ಟು ದೂರವಾಗಿದ್ದರೆ, ಯೆಹೋವನು ಆಶೀರ್ವದಿಸಿದ ನಿಮ್ಮ ಎಲ್ಲಾ ಬೆಳೆಗಳಲ್ಲಿ ದಶಾಂಶವನ್ನು ಅಲ್ಲಿಗೆ ಕೊಂಡೊಯ್ಯಲು ಸಾಧ್ಯವಾಗದಿದ್ದಲ್ಲಿ,
25 ದಶಾಂಶದ ಆ ಬೆಳೆಗಳನ್ನು ಮಾರಿ, ಬಂದ ಹಣವನ್ನು ಯೆಹೋವನು ಆರಿಸಿಕೊಂಡಿರುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ.
26 ಅಲ್ಲಿ ನಿಮಗೆ ಬೇಕಾದ ದನಕುರಿಗಳನ್ನು ಮತ್ತು ನಿಮಗೆ ಬೇಕಾಗುವ ಆಹಾರವಸ್ತುಗಳನ್ನು ಮತ್ತು ಪಾನೀಯಗಳನ್ನು ಆ ಹಣದಿಂದ ಖರೀದಿಮಾಡಿ ನೀವೂ ನಿಮ್ಮ ಕುಟುಂಬದವರೂ ನಿಮ್ಮ ದೇವರಾದ ಯೆಹೋವನ ಆ ಸ್ಥಳದಲ್ಲಿ ತಿಂದು ಸಂತೋಷಪಡಿ.
27 ನಿಮ್ಮ ಊರಲ್ಲಿ ನೆಲೆಸಿರುವ ಲೇವಿಯರನ್ನು ಮರೆಯಬೇಡಿರಿ. ನಿಮ್ಮ ಆಹಾರದಲ್ಲಿ ಅವರಿಗೂ ಪಾಲುಕೊಡಿರಿ. ಯಾಕೆಂದರೆ ಅವರಿಗೆ ದೇಶದಲ್ಲಿ ನಿಮ್ಮ ಹಾಗೆ ಸ್ವಾಸ್ತ್ಯ ದೊರಕುವುದಿಲ್ಲ.
28 “ಮೂರು ವರ್ಷಕ್ಕೊಮ್ಮೆ ನಿಮ್ಮ ದವಸಧಾನ್ಯಗಳ ಹತ್ತನೆಯ ಒಂದು ಭಾಗವನ್ನು ನಿಮ್ಮ ಊರಿನಲ್ಲಿ ಶೇಖರಿಸಿಡಿರಿ.
29 ಇದು ಲೇವಿಯರಿಗಾಗಿ. ಯಾಕೆಂದರೆ ಅವರಿಗೆ ಸ್ವಂತ ಭೂಮಿ ಇಲ್ಲವಲ್ಲಾ. ಅಲ್ಲದೆ ಈ ಧಾನ್ಯವನ್ನು ನಿಮ್ಮ ಊರಲ್ಲಿರುವ ಬಡಜನರಿಗೋಸ್ಕರವಾಗಿಯೂ ಪರದೇಶಿಗಳಿಗಾಗಿಯೂ ವಿಧವೆಯರಿಗಾಗಿಯೂ ಅನಾಥ ಮಕ್ಕಳಿಗಾಗಿಯೂ ಉಪಯೋಗಿಸಬೇಕು. ಅವರು ಬಂದು ಊಟಮಾಡಿ ತೃಪ್ತರಾಗಲಿ. ನೀವು ಹೀಗೆ ಮಾಡಿದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಕಾರ್ಯಗಳನ್ನೆಲ್ಲಾ ಸಫಲಪಡಿಸಿ ಆಶೀರ್ವದಿಸುವನು.