3
ಬಾಷಾನಿನ ಜನರೊಂದಿಗೆ ಯುದ್ಧ
“ನಾವು ನಮ್ಮ ದಾರಿಯಿಂದ ಹಿಂತಿರುಗಿ ಬಾಷಾನಿಗೆ ಹೋಗುವ ದಾರಿಯಲ್ಲಿ ಹೋದೆವು. ಎದ್ರೈಯಲ್ಲಿ ಬಾಷಾನಿನ ಅರಸನಾದ ಓಗನೂ ಅವನ ಸೈನ್ಯವೂ ನಮ್ಮೊಂದಿಗೆ ಯುದ್ಧಮಾಡಲು ಹೊರಟುಬಂದವು. ಆಗ ಯೆಹೋವನು ನನಗೆ, ‘ಓಗನಿಗೆ ನೀನು ಭಯಪಡಬೇಡ. ಅವನನ್ನೂ ಅವನ ಜನರನ್ನೂ ಅವನ ದೇಶವನ್ನೂ ನಿನಗೊಪ್ಪಿಸುವೆನು. ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದಂತೆಯೇ ಇವನನ್ನೂ ಸೋಲಿಸುವೆ’ ಎಂದು ಆಜ್ಞಾಪಿಸಿದನು.
“ಅದೇ ಪ್ರಕಾರ ನಾವು ಓಗನನ್ನು ಸೋಲಿಸುವಂತೆ ದೇವರಾದ ಯೆಹೋವನು ಸಹಾಯ ಮಾಡಿದನು. ಅವನನ್ನೂ ಅವನ ಸೈನದಲ್ಲಿರುವವರನ್ನೆಲ್ಲಾ ನಾಶಮಾಡಿದೆವು. ಆ ಸಮಯದಲ್ಲಿ ಓಗನಿಗೆ ಸೇರಿದ್ದ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡೆವು. ಬಾಷಾನಿನಲ್ಲಿ ಓಗನ ರಾಜ್ಯದಲ್ಲಿರುವ ಅರ್ಗೋಬ್ ಪ್ರದೇಶದಲ್ಲಿ ಅರವತ್ತು ಪಟ್ಟಣಗಳು ನಮ್ಮ ವಶವಾದವು. ಆ ಪಟ್ಟಣಗಳೆಲ್ಲಾ ಬಹಳ ಪ್ರಬಲವಾಗಿದ್ದವು. ಅವುಗಳಿಗೆ ಎತ್ತರವಾದ ಪೌಳಿಗೋಡೆಗಳಿದ್ದು ಕದಗಳಿಂದಲೂ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟಿದ್ದವು. ಇನ್ನೂ ಅನೇಕ ಪಟ್ಟಣಗಳಿಗೆ ಕೋಟೆಗಳಿರಲಿಲ್ಲ. ಹೆಷ್ಬೋನಿನ ಅರಸನಾದ ಸೀಹೋನನಿಗೆ ಸೇರಿದ ಪಟ್ಟಣಗಳನ್ನು ನಾವು ಹೇಗೆ ಧ್ವಂಸ ಮಾಡಿದೆವೋ ಹಾಗೆಯೇ ಈ ಪಟ್ಟಣಗಳನ್ನು ಧ್ವಂಸ ಮಾಡಿ ಸ್ತ್ರೀಯರೂ ಕೂಸುಗಳೂ ಸೇರಿದಂತೆ ಅದರ ನಿವಾಸಿಗಳಲ್ಲಿ ಒಬ್ಬರನ್ನೂ ಬಿಡದೆ ಹತಿಸಿಬಿಟ್ಟೆವು. ಆದರೆ ಅವರ ಪಶುಗಳನ್ನೂ ಬೆಲೆಬಾಳುವ ವಸ್ತುಗಳನ್ನೂ ನಾವು ಇಟ್ಟುಕೊಂಡೆವು.
“ಈ ರೀತಿಯಾಗಿ ನಾವು, ಇಬ್ಬರು ಅಮೋರಿಯ ಅರಸರ ದೇಶಗಳನ್ನು ಸ್ವಾಧೀನ ಮಾಡಿಕೊಂಡೆವು. ಅವರ ದೇಶಗಳು ಜೋರ್ಡನ್ ನದಿಯ ಪೂರ್ವದಲ್ಲಿದ್ದು ಅರ್ನೋನ್ ಕಣಿವೆಯಿಂದ ಹಿಡಿದು, ಹೆರ್ಮೋನ್ ಪರ್ವತದ ತನಕ ವಿಸ್ತಾರವಾಗಿತ್ತು. (ಚೀದೋನಿನ ಜನರು ಹೆರ್ಮೋನ್ ಪರ್ವತವನ್ನು ಸಿರ್ಯೋನ್ ಎಂದು ಕರೆಯುವರು. ಆದರೆ ಅಮೋರಿಯರು ಅದನ್ನು ಸೆನೀರ್ ಎಂದು ಕರೆಯುತ್ತಾರೆ.) 10 ಗಿಲ್ಯಾದ್ ಪ್ರಾಂತ್ಯ ಮತ್ತು ಎತ್ತರವಾದ ಬಯಲಿನಲ್ಲಿದ್ದ ಪಟ್ಟಣಗಳನ್ನೆಲ್ಲಾ ನಾವು ಸ್ವಾಧೀನಮಾಡಿಕೊಂಡೆವು. ಸಲ್ಕಾ ಮತ್ತು ಎದ್ರೈ ಪಟ್ಟಣಗಳ ತನಕವಿರುವ ಬಾಷಾನ್ ದೇಶವನ್ನೆಲ್ಲಾ ನಾವು ಸ್ವಾಧೀನಮಾಡಿಕೊಂಡೆವು.”
11 (ಓಗನು ಬಾಷಾನಿನ ರಾಜನಾಗಿದ್ದನು. ಎದ್ರೈ ಮತ್ತು ಸಲ್ಕಾ ಬಾಷಾನಿನಲ್ಲಿದ್ದ ಓಗನ ರಾಜ್ಯದ ಪಟ್ಟಣಗಳಾಗಿದ್ದವು. ಅವನು ರೆಫಾಯರಲ್ಲಿ ಅಳಿದುಳಿದವರಲ್ಲಿ ಒಬ್ಬನಾಗಿದ್ದನು. ಅವನ ಮಂಚವು ಕಬ್ಬಿಣದಿಂದ ಮಾಡಲ್ಪಟ್ಟಿತ್ತು. ಅದು ಹದಿಮೂರು ಅಡಿ ಉದ್ದವಿತ್ತು ಮತ್ತು ಆರು ಅಡಿ ಅಗಲವಿತ್ತು. ಆ ಮಂಚವು ಈಗಲೂ ಅಮ್ಮೋನಿಯರು ವಾಸಿಸುವ ರಬ್ಬಾದಲ್ಲಿದೆ.)
ಜೋರ್ಡನ್ ನದಿಯ ಪೂರ್ವಕ್ಕೆ ಇರುವ ದೇಶ
12 “ನಾವು ಗೆದ್ದುಕೊಂಡಿದ್ದ ಆ ದೇಶಗಳನ್ನು ನಮ್ಮದಾಗಿ ಮಾಡಿಕೊಂಡೆವು. ಇದರ ಒಂದು ಭಾಗವನ್ನು ನಾನು ರೂಬೇನ್ ಮತ್ತು ಗಾದ್ ಕುಲದವರಿಗೆ ಹಂಚಿಕೊಟ್ಟೆನು. ಅದು ಅರೋಯೇರ್‌ನಿಂದ ಹಿಡಿದು ಗಿಲ್ಯಾದ್ ಪ್ರದೇಶದವರೆಗೆ ಅಂದರೆ ಅರ್ನೋನ್ ಕಣಿವೆಯಲ್ಲಿರುವ ಅರೋಯೇರ್‌ನಿಂದ ಮೊದಲುಗೊಂಡು ಗಿಲ್ಯಾದ್ ಬೆಟ್ಟಪ್ರದೇಶದವರೆಗೂ ಅದರ ಎಲ್ಲಾ ಪಟ್ಟಣಗಳ ಸಮೇತವಾಗಿ ನಾನು ಕೊಟ್ಟೆನು. ಬೆಟ್ಟಪ್ರದೇಶವಾದ ಗಿಲ್ಯಾದಿನಲ್ಲಿ ಅರ್ಧಭಾಗ ಅವರಿಗೆ ದೊರೆಯಿತು. 13 ಗಿಲ್ಯಾದಿನ ಇನ್ನೊಂದು ಅರ್ಧಪ್ರದೇಶ ಮತ್ತು ಇಡೀ ಬಾಷಾನ್ ದೇಶವನ್ನು ಮನಸ್ಸೆಯ ಅರ್ಧಕುಲದವರಿಗೆ ಹಂಚಿದೆನು.”
(ಬಾಷಾನ್ ಓಗನ ಸಾಮ್ರಾಜ್ಯವಾಗಿತ್ತು. ಬಾಷಾನಿನ ಒಂದು ಭಾಗವನ್ನು ಅರ್ಗೋಬ್ ಎಂದು ಕರೆಯುತ್ತಾರೆ. ಅಲ್ಲದೆ ರೆಫಾಯರ ದೇಶವೆಂತಲೂ ಕರೆಯುತ್ತಾರೆ. 14 ಮನಸ್ಸೆ ಕುಲದ ಯಾಯೀರ ಎಂಬಾತನು ಅರ್ಗೋಬ್ ಪ್ರದೇಶಗಳನ್ನು ವಶಪಡಿಸಿಕೊಂಡನು. ಆ ಪ್ರದೇಶ ಗೆಷೂರ್ಯರ ಮತ್ತು ಮಾಕಾತ್ಯರ ದೇಶದ ಮೇರೆಯ ತನಕ ಹಬ್ಬಿತ್ತು. ಆದ್ದರಿಂದ ಆ ಪ್ರದೇಶಕ್ಕೆ ಯಾಯೀರ್ ಎಂಬ ಹೆಸರು ಬಂತು. ಇಂದಿಗೂ ಜನರು ಆ ಊರುಗಳಿಗೆ, “ಯಾಯೀರನ ಬಾಷಾನ್ ಊರುಗಳು” ಎಂದು ಕರೆಯುತ್ತಾರೆ.)
15 “ಗಿಲ್ಯಾದ್ ಪ್ರಾಂತ್ಯವನ್ನು ನಾನು ಮಾಕೀರನಿಗೆ ಕೊಟ್ಟೆನು. 16 ರೂಬೇನ್ ಮತ್ತು ಗಾದ್ ಕುಲಗಳವರಿಗೆ ಗಿಲ್ಯಾದಿನಿಂದ ಪ್ರಾರಂಭವಾಗುವ ಪ್ರಾಂತ್ಯವನ್ನು ಕೊಟ್ಟೆನು. ಇದು ಅರ್ನೋನ್ ಕಣಿವೆಯಿಂದಿಡಿದು ಯಬ್ಬೋಕ್ ಹೊಳೆಯ ತನಕ ವಿಸ್ತಾರವಾಗಿದೆ. ಯಬ್ಬೋಕ್ ಹೊಳೆಯು ಅಮ್ಮೋನಿಯರ ಮೇರೆಯಾಗಿದೆ. 17 ಅವರ ಪಶ್ಚಿಮದ ಮೇರೆ ಜೋರ್ಡನ್ ಹೊಳೆಯಾಗಿದೆ; ಉತ್ತರದ ಮೇರೆ ಗಲಿಲಾಯ ಸಮುದ್ರವಾಗಿದೆ; ದಕ್ಷಿಣದ ಮೇರೆ ಮೃತ್ಯು ಸಮುದ್ರವಾಗಿದೆ. ಅದು ಪಿಸ್ಗಾ ಬೆಟ್ಟದ ಬುಡದಲ್ಲಿದೆ.
18 “ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನೆಂದರೆ: ‘ನಿಮ್ಮ ದೇವರಾದ ಯೆಹೋವನು ನಿಮಗೆ ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವನ್ನು ಕೊಟ್ಟಿದ್ದಾನೆ. ಆದರೆ ನಿಮ್ಮಲ್ಲಿರುವ ಸೈನಿಕರು ತಮ್ಮ ಆಯುಧಗಳನ್ನು ತೆಗೆದುಕೊಂಡು ಇತರ ಇಸ್ರೇಲರೊಂದಿಗೆ ನದಿಯಾಚೆಗೆ ಬರಬೇಕು. ಅಲ್ಲಿಯ ದೇಶಗಳನ್ನು ಸ್ವಾಧೀನಪಡಿಸಿಕೊಂಡು ಶಾಂತಿ ನೆಲೆಸುವ ತನಕ ಅವರೊಂದಿಗಿರಬೇಕು. 19 ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲಿ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ವಾಸಿಸಬೇಕು; (ನಿಮಗೆ ಪಶುಗಳು ಹೆಚ್ಚಾಗಿವೆ ಎಂದು ನನಗೆ ಗೊತ್ತುಂಟು.) 20 ಜೋರ್ಡನ್ ನದಿಯ ಮತ್ತೊಂದು ಕಡೆಯಲ್ಲಿರುವ ದೇಶವನ್ನು ಯೆಹೋವನು ನಿಮ್ಮ ಸಂಬಂಧಿಕರಾದ ಇಸ್ರೇಲರಿಗೆ ಕೊಡಲಿದ್ದಾನೆ. ಆ ದೇಶವನ್ನು ಇಸ್ರೇಲರು ತೆಗೆದುಕೊಳ್ಳುವ ತನಕ ನೀವು ಅವರಿಗೆ ಸಹಾಯ ಮಾಡಲೇಬೇಕು. ಇಲ್ಲಿ ಯೆಹೋವನು ನಿಮಗೆ ಶಾಂತಿಯನ್ನು ದಯಪಾಲಿಸಿದಂತೆ ಅಲ್ಲಿಯೂ ದಯಪಾಲಿಸುವ ತನಕ ಅವರಿಗೆ ಸಹಾಯ ಮಾಡಿರಿ. ಬಳಿಕ ನಾನು ನಿಮಗೆ ಕೊಟ್ಟಿರುವ ಈ ದೇಶಕ್ಕೆ ನೀವು ಮರಳಿ ಬರಬಹುದು.’
21 “ಆಗ ನಾನು ಯೆಹೋಶುವನಿಗೆ, ‘ಈ ಇಬ್ಬರು ಅರಸರಿಗೆ ಯೆಹೋವನು ಮಾಡಿದ್ದನ್ನು ಕಣ್ಣಾರೆ ನೋಡಿರುವೆ. ಆತನು ಅದೇ ಪ್ರಕಾರ ನೀವು ಈಗ ಪ್ರವೇಶಿಸುವ ದೇಶಗಳಿಗೂ ಮಾಡುವನು. 22 ಆ ಪ್ರಾಂತ್ಯದ ಅರಸುಗಳಿಗೆ ನೀನು ಹೆದರಬೇಡ. ನಿನ್ನ ದೇವರಾದ ಯೆಹೋವನು ನಿನಗಾಗಿ ಯುದ್ಧ ಮಾಡುವನು’ ಎಂದು ಹೇಳಿದೆನು.
ಕಾನಾನ್ ದೇಶದೊಳಗೆ ಮೋಶೆಗೆ ಪ್ರವೇಶವಿಲ್ಲ
23 “ನಾನು ನನ್ನ ಮನವಿಯನ್ನು ನೆರವೇರಿಸಲು ಯೆಹೋವನನ್ನು ಬೇಡಿಕೊಂಡೆನು. 24 ನಾನು, ‘ಯೆಹೋವನೇ, ನನ್ನ ಒಡೆಯನೇ, ನಾನು ನಿನ್ನ ಸೇವಕ. ನಿನ್ನ ತ್ರಾಣವುಳ್ಳ ಹಸ್ತದಿಂದ ಮಾಡಿದ ಪರಾಕ್ರಮದ ಕಾರ್ಯಗಳನ್ನು ನೀನು ನನಗೆ ಸ್ವಲ್ಪ ಮಟ್ಟಿಗೆ ತೋರಿಸಿರುವೆ. ನೀನು ಮಾಡಿದ ಮಹಾಕೃತ್ಯಗಳನ್ನು ಮಾಡಲು ಪರಲೋಕದ ಅಥವಾ ಭೂಲೋಕದ ಯಾವ ದೇವರುಗಳಿಗೂ ಸಾಧ್ಯವಿಲ್ಲ. 25 ನಾನು ಜೋರ್ಡನ್ ನದಿ ದಾಟಿ, ನೀನು ನಮಗೆ ಕೊಡುವ ಉತ್ತಮವಾದ ದೇಶವನ್ನು ನಾನು ನೋಡುವಂತೆ ಮಾಡು. ಅದರ ಮನೋಹರವಾದ ಬೆಟ್ಟಪ್ರದೇಶಗಳನ್ನೂ ಲೆಬನೋನ್ ಪ್ರಾಂತ್ಯಗಳನ್ನೂ ನೋಡುವಂತೆ ಮಾಡು’ ಎಂದು ಬೇಡಿದೆನು.
26 “ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು. 27 ನೀನು ಪಿಸ್ಗಾ ಬೆಟ್ಟವನ್ನು ಹತ್ತಿ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ದಿಕ್ಕುಗಳ ಕಡೆಗೆ ನೋಡು ಮತ್ತು ಆನಂದಿಸು. ಆದರೆ ನೀನು ಜೋರ್ಡನ್ ನದಿ ದಾಟಿ ಆ ಪ್ರದೇಶಗಳನ್ನು ಪ್ರವೇಶಿಸುವುದಿಲ್ಲ. 28 ನೀನು ಯೆಹೋಶುವನನ್ನು ಪ್ರೋತ್ಸಾಹಿಸು. ಅವನಿಗೆ ವಿಷಯಗಳನ್ನೆಲ್ಲಾ ತಿಳಿಯಪಡಿಸು. ಅವನು ಜನರನ್ನು ಜೋರ್ಡನ್ ನದಿಯಾಚೆ ನಡೆಸಬೇಕು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವನು ಅವರಿಗೆ ಸಹಾಯ ಮಾಡುವನು. ಆದ್ದರಿಂದ ಅವನನ್ನು ಬಲಪಡಿಸು’ ಎಂದು ಹೇಳಿದನು.
29 “ಅಂತೆಯೇ ನಾವು ಬೇತ್‌ಪೆಗೋರಿನ ಎದುರಿಗಿರುವ ಕಣಿವೆಯಲ್ಲಿ ಇಳಿದುಕೊಂಡೆವು.”