30
ಇಸ್ರೇಲರು ತಮ್ಮ ಸ್ವದೇಶಕ್ಕೆ ಹಿಂದಿರುಗುವರು
1 “ನಾನು ಈಗ ಹೇಳಿದ್ದೆಲ್ಲವೂ ನಿಮಗೆ ಸಂಭವಿಸುವುದು. ಆಶೀರ್ವಾದದ ಮೂಲಕ ನಿಮಗೆ ಶುಭವಾಗುವದು; ಶಾಪದಿಂದ ನಿಮಗೆ ಅಶುಭವಾಗುವುದು. ನಮ್ಮ ದೇವರಾದ ಯೆಹೋವನು ಇತರ ದೇಶಗಳಿಗೆ ನಿಮ್ಮನ್ನು ಕಳುಹಿಸಿ ಬಿಡುವನು. ಆಗ ನೀವು ಇವುಗಳನ್ನೆಲ್ಲಾ ನೆನಸುವಿರಿ.
2 ನೀವೂ ನಿಮ್ಮ ಸಂತತಿಯವರೂ ಯೆಹೋವನ ಬಳಿಗೆ ಬರುವಿರಿ. ನಿಮ್ಮ ಹೃದಯಪೂರ್ವಕವಾಗಿ ಆತನನ್ನು ಹಿಂಬಾಲಿಸುವಿರಿ ಮತ್ತು ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗುವಿರಿ.
3 ಆಗ ದೇವರಾದ ಯೆಹೋವನು ನಿಮ್ಮ ಮೇಲೆ ದಯೆ ತೋರಿಸುವನು. ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಎಲ್ಲಿ ಚದರಿಸಲ್ಪಟ್ಟಿದ್ದೀರೋ ಅಲ್ಲಿಂದ ತಿರುಗಿ ಹಿಂದಕ್ಕೆ ತರುವನು.
4 ಲೋಕದ ಕಟ್ಟಕಡೆಯ ಸ್ಥಳಕ್ಕೆ ನೀವು ಚದರಿಹೋದರೂ ಅಲ್ಲಿಂದ ನಿಮ್ಮನ್ನು ಹಿಂದಕ್ಕೆ ತರುವನು.
5 ನಿಮ್ಮ ಪೂರ್ವಿಕರು ವಾಸಿಸಿದ ಸ್ಥಳಕ್ಕೆ ನಿಮ್ಮನ್ನು ಮತ್ತೆ ಬರಮಾಡುವನು. ಆ ದೇಶವು ನಿಮ್ಮದಾಗುವುದು. ಯೆಹೋವನು ನಿಮಗೆ ಒಳ್ಳೆಯದನ್ನು ಮಾಡುವನು. ನಿಮ್ಮ ಪೂರ್ವಿಕರಿಗಿಂತಲೂ ಅಧಿಕವಾಗಿ ನಿಮ್ಮನ್ನು ಅಭಿವೃದ್ಧಿಪಡಿಸುವನು.
6 ನೀವು ಮತ್ತು ನಿಮ್ಮ ಸಂತತಿಯವರು ತನಗೆ ವಿಧೇಯರಾಗುವಂತೆ ನಮ್ಮ ದೇವರಾದ ಯೆಹೋವನು ಮಾಡುತ್ತಾನೆ. ಆಗ ನೀವು ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದ ಪ್ರೀತಿಸುವಿರಿ ಮತ್ತು ಜೀವಿಸುವಿರಿ.
7 “ನಿಮ್ಮ ದೇವರಾದ ಯೆಹೋವನು ಕೆಟ್ಟಸಂಗತಿಗಳೆಲ್ಲಾ ನಿಮ್ಮ ವೈರಿಗಳಿಗೆ ಆಗುವಂತೆ ಮಾಡುವನು. ಯಾಕೆಂದರೆ ಅವರು ನಿಮ್ಮನ್ನು ದ್ವೇಷಿಸಿ ತೊಂದರೆ ಕೊಡುತ್ತಿರುವರು.
8 ನೀವು ಮತ್ತೆ ಯೆಹೋವನಿಗೆ ವಿಧೇಯರಾಗುವಿರಿ. ಇಂದು ನಾನು ನಿಮಗೆ ಕೊಡುವ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗುವಿರಿ.
9 ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ದೇವರು ಮಾಡುವನು. ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ದನಗಳನ್ನು ಆಶೀರ್ವದಿಸುವನು. ಅವುಗಳಿಗೆ ಅನೇಕ ಕರುಗಳಿರುವವು. ನಿಮ್ಮ ಹೊಲಗಳು ಅಧಿಕವಾದ ಬೆಳೆಯನ್ನು ಕೊಡುವಂತೆ ಆಶೀರ್ವದಿಸುವನು. ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವುದರಲ್ಲಿ ಸಂತೋಷಿಸುವನು. ನಿಮ್ಮ ಪೂರ್ವಿಕರಿಗೆ ಮೇಲನ್ನು ಉಂಟುಮಾಡಲು ಆತನು ಬಯಸಿದ್ದನು.
10 ಆತನು ಹೇಳಿದಂತೆ ನೀವು ನಡೆದುಕೊಳ್ಳಬೇಕು. ಈ ಧರ್ಮೋಪದೇಶ ಪುಸ್ತಕದಲ್ಲಿ ಬರೆದಿರುವ ಬೋಧನೆಗಳನ್ನು ನೀವು ಅನುಸರಿಸಬೇಕು. ನಿಮ್ಮ ಪೂರ್ಣಪ್ರಾಣದಿಂದಲೂ ಪೂರ್ಣಆತ್ಮದಿಂದಲೂ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬೇಕು; ಆಗ ನಿಮಗೆ ಈ ಎಲ್ಲಾ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ.
ಜೀವವೋ ಮರಣವೋ
11 “ನಾನು ಈ ದಿನ ಕೊಡುವ ಆಜ್ಞೆಯು ಅಂಥ ಕಷ್ಟದ್ದೇನೂ ಅಲ್ಲ; ಅದು ದೂರವಾದದ್ದೂ ಅಲ್ಲ.
12 ಈ ಆಜ್ಞೆಯು ಆಕಾಶದೊಳಗೆ ಇಲ್ಲ, ‘ನಮಗೋಸ್ಕರ ಮೇಲಿನ ಲೋಕವನ್ನೇರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಯಪಡಿಸುವವನು ಯಾರು? ನಾವು ಅದನ್ನು ಕೇಳಿ ಅದರಂತೆಯೇ ಮಾಡುತ್ತಿದ್ದೆವು’ ಎಂದು ವಿಚಾರಿಸುವ ಅವಶ್ಯವಿಲ್ಲ.
13 ಇದು ಸಮುದ್ರದ ಆಚೆ ಇರುವ ಮಾತಲ್ಲ, ‘ನಮಗೋಸ್ಕರ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವವರು ಯಾರಿರುವರು? ನಾವದನ್ನು ಕೇಳಿ ಅದರಂತೆ ನಡೆಯಬಹುದಾಗಿತ್ತು’ ಎಂದು ಹೇಳುವ ಅವಶ್ಯಕತೆ ಇಲ್ಲ.
14 ದೇವರ ನುಡಿಯು ನಿಮ್ಮ ಬಳಿಯಲ್ಲಿಯೇ ಇದೆ. ಅದು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ. ಆದ್ದರಿಂದ ಅವುಗಳಿಗೆ ಕಷ್ಟವಿಲ್ಲದೆ ವಿಧೇಯರಾಗಬಹುದು.
15 “ಈ ದಿನ ನೀವು ಜೀವ ಮತ್ತು ಮರಣ; ಶುಭ ಮತ್ತು ಅಶುಭ ಇವುಗಳನ್ನು ಆಯ್ಕೆಮಾಡಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಟ್ಟಿದ್ದೇನೆ.
16 ನಿಮ್ಮ ದೇವರಾದ ಯೆಹೋವನನ್ನು ನೀವು ಸಂಪೂರ್ಣವಾಗಿ ಪ್ರೀತಿಸಬೇಕೆಂದು ಆಜ್ಞಾಪಿಸುತ್ತೇನೆ. ಆತನ ಆಜ್ಞೆಗಳಿಗೆ, ನಿಯಮಗಳಿಗೆ ಮತ್ತು ವಿಧಿಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. ಆಗ ನೀವು ಬದುಕುವಿರಿ ಮತ್ತು ನಿಮ್ಮ ಜನಾಂಗ ದೊಡ್ಡದಾಗಿ ಬೆಳೆಯುವುದು. ನಿಮಗಾಗಿ ತೆಗೆದುಕೊಳ್ಳಲು ಪ್ರವೇಶಿಸಲಿರುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು.
17 ಆದರೆ ನೀವು ಯೆಹೋವನಿಗೆ ವಿಮುಖರಾಗಿ ಆತನಿಗೆ ಕಿವಿಗೊಡದೆ ಹೋದರೆ, ಬೇರೆ ದೇವರುಗಳನ್ನು ಆರಾಧಿಸಲು ಮತ್ತು ಸೇವೆಮಾಡಲು ಹೋದರೆ,
18 ನೀವು ನಾಶವಾಗುವಿರಿ. ನಿಮ್ಮನ್ನು ನಾನು ಎಚ್ಚರಿಸುತ್ತಿದ್ದೇನೆ. ನೀವು ಯೆಹೋವನಿಗೆ ವಿಮುಖರಾದರೆ, ನಿಮಗಾಗಿ ತೆಗೆದುಕೊಳ್ಳಲು ನೀವು ಪ್ರವೇಶಿಸುತ್ತಿರುವ ಜೋರ್ಡನ್ ನದಿಯ ಆಚೆ ದಡದಲ್ಲಿರುವ ದೇಶದಲ್ಲಿ ನೀವು ಬಹುಕಾಲದವರೆಗೆ ಜೀವಿಸುವುದಿಲ್ಲ.
19 “ಈ ದಿನ ಎರಡು ಮಾರ್ಗಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಲು ನಾನು ನಿಮಗೆ ಅವಕಾಶ ಕೊಟ್ಟಿದ್ದೇನೆ. ಪರಲೋಕವೂ ಭೂಮಿಯೂ ಅದಕ್ಕೆ ಸಾಕ್ಷಿ. ನೀವು ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಬಹುದು. ಜೀವವನ್ನಾರಿಸಿಕೊಂಡರೆ, ಆಶೀರ್ವಾದವು ಸಿಗುವುದು. ಮರಣವು ನಿಮಗೆ ಶಾಪವನ್ನು ತರುವುದು. ಆದ್ದರಿಂದ ಜೀವವನ್ನು ಆರಿಸಿಕೊಳ್ಳಿರಿ, ನೀವೂ ನಿಮ್ಮ ಮಕ್ಕಳೂ ಬಾಳುವಿರಿ.
20 ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗಬೇಕು. ಯೆಹೋವನು ನಿಮ್ಮ ಜೀವವಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ನಿಮಗೆ ದೀರ್ಘವಾದ ಆಯುಷ್ಯನ್ನು ಅನುಗ್ರಹಿಸುತ್ತಾನೆ.”