15
ಜೆರುಸಲೇಮಿನ ದ್ರಾಕ್ಷಾಲತೆಯು ಸುಡಲ್ಪಡುವುದು
ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ದ್ರಾಕ್ಷಾಬಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ. ದ್ರಾಕ್ಷಾಬಳ್ಳಿಯ ಕಟ್ಟಿಗೆಯಿಂದ ಏನನ್ನಾದರೂ ತಯಾರಿಸಬಹುದೋ? ಇಲ್ಲ. ಅದನ್ನು ಗೂಟವನ್ನಾಗಿ ಮಾಡಿ ಅದರಲ್ಲಿ ಪಾತ್ರೆಗಳನ್ನು ತೂಗುಹಾಕಬಹುದೋ? ಇಲ್ಲ. ಅದು ಕೇವಲ ಬೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಬೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟುಹೋಗುವುದಿಲ್ಲ. ಆ ಸುಟ್ಟ ಕಟ್ಟಿಗೆಯಿಂದ ಏನನ್ನಾದರೂ ತಯಾರಿಸಬಹುದೋ? ಅದು ಸುಡುವ ಮೊದಲು ಅದರಿಂದ ಏನನ್ನೂ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ. ದ್ರಾಕ್ಷಿಬಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಬೆಂಕಿಗೆ ಬೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನ್ನು ನೇಮಿಸಿದ್ದೇನೆ. ಇದೇ ಕೆಲಸವನ್ನು ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದ್ದಾನೆ. “ನಾನು ಅವರನ್ನು ದಂಡಿಸುವೆನು. ಅವರು ಒಂದು ಬೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಬೆಂಕಿಯಿಂದ ಸುಟ್ಟುಹೋಗುವರು. ನಾನು ಅವರನ್ನು ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ. ಜನರು ನನ್ನನ್ನು ತೊರೆದು ಅನ್ಯ ದೇವರುಗಳನ್ನು ಆರಾಧಿಸಿದ್ದಕ್ಕಾಗಿ ನಾನು ಆ ದೇಶವನ್ನು ನಾಶಮಾಡುವೆನು” ಇವುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು.