43
ಯೆಹೋವನು ತನ್ನ ಜನರ ಮಧ್ಯದಲ್ಲಿ ವಾಸಿಸುವನು
ಆ ಮನುಷ್ಯನು ನನ್ನನ್ನು ಪೂರ್ವದ ದ್ವಾರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಇಸ್ರೇಲ್ ದೇವರ ಮಹಿಮೆಯು ಪೂರ್ವದಿಂದ ಬಂದಿತು. ದೇವರ ಸ್ವರವು ಸಮುದ್ರದ ಶಬ್ದದಂತೆ ಗಟ್ಟಿಯಾಗಿತ್ತು. ದೇವರ ಮಹಿಮಾ ಪ್ರಕಾಶದಿಂದ ನೆಲವು ಬೆಳಕಿನಿಂದ ತುಂಬಿತ್ತು. ನಾನು ನೋಡಿದ ದರ್ಶನವು ಕೆಬಾರ್ ಕಾಲುವೆಯ ಬಳಿ ಕಂಡ ದರ್ಶನದಂತಿತ್ತು. ನಾನು ಸಾಷ್ಟಾಂಗವೆರಗಿದೆನು. ಯೆಹೋವನ ಮಹಿಮೆಯು ಪೂರ್ವದಿಕ್ಕಿನ ದ್ವಾರದ ಮೂಲಕ ಆಲಯದೊಳಗೆ ಬಂದಿತು.
ಆಗ ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಪ್ರಾಕಾರಕ್ಕೆ ತಂದಿತು. ಯೆಹೋವನ ಮಹಿಮೆಯು ಆಲಯವನ್ನು ತುಂಬಿತು. ಆಲಯದೊಳಗಿಂದ ಯಾರೋ ನನ್ನೊಡನೆ ಮಾತನಾಡಿದಂತೆ ಕೇಳಿಸಿತು. ಅವನು ನನ್ನ ಬಳಿಯಲ್ಲಿ ಇನ್ನೂ ನಿಂತುಕೊಂಡಿದ್ದನು. ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ. ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು. ಈಗ ಅವರು ತಮ್ಮ ಲೈಂಗಿಕ ಪಾಪಗಳನ್ನು ತೆಗೆದುಬಿಡಲಿ ಮತ್ತು ತಮ್ಮ ರಾಜರ ಹೆಣಗಳನ್ನೂ ನನ್ನಿದ ದೂರಮಾಡಲಿ. ಆಗ ನಾನು ಅವರೊಂದಿಗೆ ನಿರಂತರವಾಗಿ ವಾಸಿಸುವೆನು.
10 “ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು. 11 ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನ್ನು ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಬೇಕೆಂಬುದನ್ನು, ಪ್ರವೇಶ ದ್ವಾರಗಳು ಮತ್ತು ಹೊರಗೆ ಹೋಗುವ ಬಾಗಿಲುಗಳು ಎಲ್ಲಿರಬೇಕೆಂಬುದನ್ನು ಮತ್ತು ಅವುಗಳ ಮೇಲೆ ಇರಬೇಕಾದ ಎಲ್ಲಾ ಚಿತ್ರಗಳನ್ನು ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನ್ನು, ಕಟ್ಟಳೆಗಳನ್ನು ಅವರಿಗೆ ಬೋಧಿಸಿರಿ. ಅವರು ಎಲ್ಲಾ ಧರ್ಮಬೋಧನೆಗಳನ್ನು ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನ್ನು ಬರೆದಿಡಿರಿ. 12 ಇದು ಆಲಯದ ಕಟ್ಟಳೆ: ಪರ್ವತದ ಮೇಲಿನ ಎಲ್ಲಾ ಪ್ರಾಂತ್ಯದ ಮೇರೆಯೊಳಗಿರುವ ಸ್ಥಳವು ಅತಿ ಪರಿಶುದ್ಧವಾದದ್ದು. ಇದು ಆಲಯದ ಕಟ್ಟಳೆ.
ಯಜ್ಞವೇದಿಕೆ
13 “ಯಜ್ಞವೇದಿಕೆ ಉದ್ದಮೊಳದ* ಅಳತೆಯ ಪ್ರಕಾರ ಇರಬೇಕು. ಯಜ್ಞವೇದಿಯ ಅಡಿಪಾಯದ ಸುತ್ತಲೂ ಕಾಲಿವೆ ತೋಡಲ್ಪಟ್ಟಿತ್ತು. ಅದರ ಆಳ ಒಂದು ಮೊಳ. ಪ್ರತಿಯೊಂದು ಕಡೆಯಲ್ಲಿ ಅದರ ಅಗಲ ಒಂದು ಮೊಳ. ಯಜ್ಞವೇದಿಯ ಸುತ್ತ ಒಂದು ಗೇಣುದ್ದದ ಚೌಕಟ್ಟಿತ್ತು. ಇದು ಎತ್ತರವಾದ ಯಜ್ಞವೇದಿಯ ವಿನ್ಯಾಸ. 14 ನೆಲದಿಂದ ಅಡಿಪಾಯದ ತಳದವರೆಗೆ ಅಡಿಪಾಯದ ಎತ್ತರ ಎರಡು ಮೊಳ, ಅದರ ಅಗಲ ಒಂದು ಮೊಳ, ಚಿಕ್ಕ ಸಜ್ಜದಿಂದ ದೊಡ್ಡ ಸಜ್ಜದವರೆಗೆ ನಾಲ್ಕು ಮೊಳ ಎತ್ತರ, ಎರಡು ಮೊಳ ಅಗಲ. 15 ಯಜ್ಞವೇದಿಯ ಮೇಲೆ ಬೆಂಕಿ ಹಾಕುವ ಸ್ಥಳದ ಎತ್ತರ ನಾಲ್ಕು ಮೊಳ. ಅದರ ನಾಲ್ಕು ಮೂಲೆಗಳು ಕೊಂಬಿನ ಆಕಾರದಂತಿದ್ದವು. 16 ಬೆಂಕಿಹಾಕುವ ಸ್ಥಳದ ಉದ್ದ ಹನ್ನೆರಡು ಮೊಳ; ಅಗಲ ಹನ್ನೆರಡು ಮೊಳ. ಅದು ಚೌಕವಾಗಿತ್ತು. 17 ಅದರ ಮೆಟ್ಟಲು ಹದಿನಾಲ್ಕು ಮೊಳ ಅಗಲ, ಹದಿನಾಲ್ಕು ಮೊಳ ಉದ್ದವಾಗಿದ್ದು ಚೌಕವಾಗಿತ್ತು. ಅದರ ಸುತ್ತಲೂ ಇದ್ದ ಅಂಚು ಅರ್ಧ ಮೊಳ ಅಗಲವಾಗಿತ್ತು. (ಅಡಿಪಾಯದ ಸುತ್ತಲೂ ಇದ್ದ ಕಾಲುವೆಯ ಅಗಲ ಎರಡು ಮೊಳ.) ಯಜ್ಞವೇದಿಯ ಮೇಲೆ ಹತ್ತುವ ಮೆಟ್ಟಲುಗಳು ಪೂರ್ವಭಾಗದಲ್ಲಿದ್ದವು.”
18 ಆಗ ಅವನು ನನಗೆ, “ನರಪುತ್ರನೇ, ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಯಜ್ಞವೇದಿಯ ಕ್ರಮಗಳು ಯಾವುದೆಂದರೆ, ಯಜ್ಞವೇದಿಯನ್ನು ಕಟ್ಟುವಾಗ ಸರ್ವಾಂಗಹೋಮ ಮತ್ತು ಅದರ ಮೇಲೆ ರಕ್ತ ಚಿಮುಕಿಸುವದಕ್ಕೆ ಈ ಕ್ರಮಗಳನ್ನು ಅನುಸರಿಸು. 19 ಚಾದೋಕನ ಸಂತತಿಯ ಯಾಜಕರ ಪಾಪಪರಿಹಾರಕ್ಕಾಗಿ ನೀನು ಒಂದು ಎಳೆ ಹೋರಿಯನ್ನು ಅರ್ಪಿಸು. ಇವರು ಲೇವಿಕುಲದ ಯಾಜಕರು. ಇವರು ನನಗೆ ಕಾಣಿಕೆಗಳನ್ನು ಅರ್ಪಿಸುವ ಸೇವೆ ಮಾಡುವವರಾಗಿರುತ್ತಾರೆ.’ ” ಇದು ನನ್ನ ಒಡೆಯನಾದ ಯೆಹೋವನ ನುಡಿ. 20 “ನೀನು ಹೋರಿಯ ರಕ್ತವನ್ನು ತೆಗೆದು ವೇದಿಯ ನಾಲ್ಕು ಕೊಂಬುಗಳಲ್ಲಿ ಪ್ರೋಕ್ಷಿಸಬೇಕು; ಮತ್ತು ಮೆಟ್ಟಿಲಿನ ನಾಲ್ಕು ಮೂಲೆಗಳಿಗೂ, ಅದರ ಸುತ್ತಲೂ ಇರುವ ದಿಂಡಿನ ಮೇಲೂ ರಕ್ತ ಪ್ರೋಕ್ಷಿಸಬೇಕು. ಹೀಗೆ ಮಾಡುವಾಗ ನೀನು ವೇದಿಯನ್ನು ಪವಿತ್ರಗೊಳಿಸುವಿ. 21 ಆಮೇಲೆ ಪಾಪಪರಿಹಾರದ ಹೋರಿಯನ್ನು ತೆಗೆದು ಆಲಯದ ಜಾಗದಲ್ಲಿ ಆಲಯದ ಹೊರಗಿರುವ ಸ್ಥಳದಲ್ಲಿ ಸುಡಬೇಕು.
22 “ಎರಡನೇ ದಿವಸದಲ್ಲಿ ಪೂರ್ಣಾಂಗವಾದ ಹೋತವನ್ನು ನೀನು ಅರ್ಪಿಸಬೇಕು. ಪಾಪಪರಿಹಾರಕಯಜ್ಞಕ್ಕಾಗಿ ಯಾಜಕರು ಹೇಗೆ ಯಜ್ಞವೇದಿಯನ್ನು ಪವಿತ್ರ ಮಾಡಿದರೋ ಅದೇ ರೀತಿಯಲ್ಲಿ ತಿರುಗಿ ಮಾಡಬೇಕು. 23 ಯಜ್ಞವೇದಿಯನ್ನು ಶುದ್ಧೀಕರಿಸಿದ ನಂತರ ನಿಷ್ಕಳಂಕವಾದ ಒಂದು ಹೋರಿ ಮತ್ತು ಹಿಂಡಿನಿಂದ ಒಂದು ಟಗರನ್ನು ಸಮರ್ಪಿಸಬೇಕು. 24 ಯೆಹೋವನ ಸನ್ನಿಧಾನದಲ್ಲಿ ಅವುಗಳನ್ನು ವಧಿಸಬೇಕು. ಆಮೇಲೆ ಯಾಜಕರು ಅದರ ಮೇಲೆ ಉಪ್ಪು ಚಿಮುಕಿಸಿ ಹೋರಿ ಮತ್ತು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಬೇಕು. 25 ದೋಷಪರಿಹಾರಕಯಜ್ಞಕ್ಕಾಗಿ ಪ್ರತಿದಿವಸ ಏಳು ದಿವಸಗಳ ತನಕ ಒಂದೊಂದು ಆಡನ್ನು ಸಮರ್ಪಿಸಬೇಕು. ಅದೇ ಸಮಯದಲ್ಲಿ ನಿಷ್ಕಳಂಕವಾದ ಒಂದು ಎಳೇ ಹೋರಿ ಮತ್ತು ಟಗರುಗಳನ್ನು ದೋಷಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 26 ಏಳು ದಿವಸಗಳ ತನಕ ಯಾಜಕರು ವೇದಿಯನ್ನು ಪವಿತ್ರ ಮಾಡಬೇಕು ಮತ್ತು ದೇವರನ್ನು ಆರಾಧಿಸುವದಕ್ಕೆ ಸಿದ್ಧಪಡಿಸಬೇಕು. 27 ಏಳು ದಿವಸಗಳ ತರುವಾಯ, ಎಂಟನೇ ದಿನದಲ್ಲಿ ಯಾಜಕರು ನಿಮ್ಮ ಪರವಾಗಿ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಬೇಕು. ಆಗ ನಾನು ನಿಮಗೆ ಪ್ರಸನ್ನನಾಗುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
* 43:13 ಉದ್ದಮೊಳ ಅಕ್ಷರಶಃ “ಒಂದು ಮೊಳ ಮತ್ತು ಒಂದು ಕೈಹಿಡಿ.”